ಶಿರಸಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಸಂಸದ ಅನಂತಕುಮಾರ ಹೆಗಡೆ ಅಭಿಮಾನಿಗಳ ಒತ್ತಡ ತಂತ್ರ ಸೋಮವಾರವೂ ಮುಂದುವರೆದಿದೆ.
ಭಾನುವಾರ ಸಿದ್ದಾಪುರ, ಹೊನ್ನಾವರ, ಭಟ್ಕಳ ಭಾಗದ ಅಭಿಮಾನಿಗಳು ಆಗಮಿಸಿ ಹಕ್ಕೊತ್ತಾಯ ಮಾಡಿದ್ದರು. ಮುಂದುವರಿದ ಭಾಗವಾಗಿ ಸೋಮವಾರ ಕೂಡ ಕಾರವಾರ ಮತ್ತು ಅಂಕೋಲಾ ಭಾಗದ ಅಭಿಮಾನಿಗಳು ಆಗಮಿಸಿ ಹಕ್ಕೊತ್ತಾಯ ಮಾಡಿದರು.
ಯಾವುದೇ ಕಾರಣಕ್ಕೂ ಚುನಾವಣಾ ಕಣಕ್ಕೆ ಇಳಿಯದೇ ಹಿಂದೆ ಸರಿಯಬಾರದು. ನೀವು ಚುನಾವಣಾ ರಾಜಕೀಯದಿಂದ ದೂರವಾದರೆ ನಿಮ್ಮ ಸಾಕಷ್ಟು ಅಭಿಮಾನಿಗಳು ದೂರ ಸರಿಯುತ್ತಾರೆ. ಹೀಗಾಗಿ ಈ ಬಾರಿ ತಾವು ಸ್ಪರ್ಧಿಸಬೇಕು ಎಂದು ಒತ್ತಡ ಹಾಕಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಅನಂತಕುಮಾರ ಇನ್ನು ಮುಂದಿನ ದಿನಗಳಲ್ಲಿ ಎಲ್ಲರೊಡನೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ನಿಮ್ಮೆಲ್ಲರ ಭಾವನೆಗೆ ವಿರುದ್ಧ ಹೋಗುವುದಿಲ್ಲ ಎಂದೂ ಹೇಳಿದರು.
ಕಾರವಾರ ಮತ್ತು ಅಂಕೋಲಾ ಭಾಗದಿಂದ ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಆಗಮಿಸಿದ್ದರು. ಪ್ರಶಾಂತ್ ನಾಯಕ, ಅರುಣ್ ಕುಮಾರ್ ಆವರ್ಸ, ಮನೋಜ್ ಭಟ್, ನಯನ ನೀಲಾವರ, ರಾಜೇಶ್ ನಾಯ್ಕ್, ಗಣೇಶ್ ಕುಡ್ತಲ್ಕರ್, ಸುರೇಂದ್ರ ನಾಯ್ಕ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.