ಶಿವಮೊಗ್ಗ: ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಈಗಾಗಲೇ ಸಾರ್ವಜನಿಕರಿಗೆ ನಿಧಾನವಾಗಿ ಅರಿವಿಗೆ ಬರುತ್ತಿದೆ. ನಮ್ಮದೇ ಜೇಬಿನಿಂದ ಹಣ ತೆಗೆದು ನಮಗೆ ನೀಡುವ ಕಾಂಗ್ರೆಸ್ ತಂತ್ರಗಾರಿಕೆ ಮತದಾರರಿಗೆ ತಿಳಿದಿದೆ. ಕಾಂಗ್ರೆಸ್ ಗ್ಯಾರಂಟಿಗಳು ಲೋಕಸಭಾ ಚುನಾವಣೆಯವರೆಗೆ ಮಾತ್ರ ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದರು.
ಶನಿವಾರ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ನಡೆದ ಬಿಜೆಪಿ ನಗರ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೀಡುವ ಮೋದಿ ಅಕ್ಕಿಯನ್ನು ಸಿದ್ದರಾಮಯ್ಯನವರ ಭಾಗಚಿತ್ರ ಇರುವ ಚೀಲಕ್ಕೆ ಹಾಕಿ ನಮ್ಮದು ಎಂದು ಕಾಂಗ್ರೆಸ್ ಹೇಳುತ್ತಿದೆ. ಶಕ್ತಿ ಯೋಜನೆ ಎಂದು ಹೇಳಿ, ಉಚಿತ ಬಸ್ ಪ್ರಯಾಣ ಹೆಣ್ಣುಮಕ್ಕಳಿಗೆ ಎನ್ನುತ್ತ ಟಿಕೆಟ್ ದರ ಏರಿಸಿ ಶಾಲಾ ಮಕ್ಕಳು ಮತ್ತು ಕೆಲಸಕ್ಕಾಗಿ ಹೋಗುವ ಪುರುಷ ಪ್ರಯಾಣಿಕರಿಗೆ ಬಸ್ಸೇ ದೊರೆಯದ ಹಾಗೆ ಮಾಡಿದ್ದೇ ಕಾಂಗ್ರೆಸ್ ಸಾಧನೆ ಎಂದರು.
ಈಗಾಗಲೇ ಇದರ ಬಗ್ಗೆ ಅನೇಕ ಪ್ರಯಾಣಿಕರು ದೂರು ನೀಡುತ್ತಿದ್ದಾರೆ. ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡದೆ ಈ ರೀತಿಯ ಅವೈಜ್ಞಾನಿಕ ಯೋಜನೆ ಮಾಡಿದ್ದಾರೆ. ಅವೈಜ್ಞಾನಿಕವಾಗಿ ವಾಣಿಜ್ಯ ಮತ್ತು ಇತರ ವಿದ್ಯುತ್ ದರವನ್ನು ಏರಿಸಿ ಉಚಿತ ವಿದ್ಯುತ್ ಎಂದು ಹೇಳುತ್ತಿದ್ದಾರೆ.
ದುಡಿದು ಮನೆಗೆ ಬರುವ ಕೂಲಿಕಾರ್ಮಿಕರಿಗೆ ದಿನ ನಿತ್ಯದ ಅಗತ್ಯ ಮದ್ಯದ ದರವನ್ನು ದುಪ್ಪಟ್ಟು ಮಾಡಿ ಅವರ ಮನೆಯ ಮಹಿಳೆಗೆ ಗೃಹಲಕ್ಷ್ಮಿ ಯೋಜನೆಯಲ್ಲಿ 2000 ನೀಡಿ, ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ಸ್ಕೀಂ
ಅನ್ನು ಮಾಡಿದ್ದಾರೆ ಎಂದರು.
ಯುವಕರಿಗೆ ಯುವನಿಧಿ ಇನ್ನೂ ಬಂದಿಲ್ಲ, ಕೆಲವರಿಗಷ್ಟೇ ಈ ಸೌಲಭ್ಯ ಸಿಕ್ಕಿದೆ. ಕಾಂಗ್ರೆಸ್ ದೇಶದಲ್ಲಿ ಈಗಾಗಲೇ ನಿರ್ನಾಮವಾಗಿದೆ. ಸಿದ್ದರಾಮಯ್ಯನವರು ಇದೇ ನನ್ನ ಕೊನೆ ಚುನಾವಣೆ ಎಂದು ಪದೇ ಪದೇ ಒತ್ತಿ ಹೇಳುತ್ತ ಡಿ.ಕೆ.ಶಿವಕುಮಾರ್‌ಗೆ ಪರೋಕ್ಷವಾಗಿ ಇನ್ನೂ ಉಳಿದ ಅವ ಧಿಯಲ್ಲಿ ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಇಡೀ ರಾಜ್ಯದ ಕಾಂಗ್ರೆಸ್ ಶಾಸಕರು, ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಕ್ಷೇತ್ರದಲ್ಲಿ ಸರ್ಕಾರದ ಅನುದಾನ ಲಭ್ಯವಾಗದೇ ಬೇಸತ್ತಿದ್ದು, ಈ ಸರ್ಕಾರ ತೊಲಗಲಿ ಎಂದು ಅವರೇ ಹೇಳುತ್ತಿದ್ದಾರೆ. ರಾಜ್ಯದ ಮತದಾರರು ಮಳೆ ಬೆಳೆ ಇಲ್ಲದೇ ಸಂಕಷ್ಟ ಪಡುತ್ತಿದ್ದು, ಯಡಿಯೂರಪ್ಪ ಇದ್ದಾಗ ಈ ರಾಜ್ಯ ಸುಭಿಕ್ಷವಾಗಿತ್ತು. ಕೋವಿಡ್ ಬಂದಾಗಲೂ ನಮಗೆ ಈ ಸ್ಥಿತಿ ಬಂದಿರಲಿಲ್ಲ. ಆದಷ್ಟು ಬೇಗ ಬಿಜೆಪಿ ಸರ್ಕಾರ ಬರಲಿ ಎಂದು ಆಶಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವ ನಿರ್ಧಾರವನ್ನು ಮತದಾರರು ಈಗಾಗಲೇ ಮಾಡಿದ್ದಾರೆ ಎಂದರು.
ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಕುಮಾರಿ ಮಂಜುಳಾ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯುತ್ರಿ ಮಲ್ಲಪ್ಪ, ಪ್ರಮುಖರಾದ ರಶ್ಮಿ ಶ್ರೀನಿವಾಸ್, ಯಶೋಧ, ಸುರೇಖಾ ಮುರಳೀಧರ್, ರೇಣುಕಾ ನಾಗರಾಜ್, ಶಾಸಕ ಚನ್ನಬಸಪ್ಪ, ಮೋಹನ್‌ರೆಡ್ಡಿ, ನಾಗರಾಜ್ 6 ಮತ್ತು 7ನೇ ಶಕ್ತಿ ಕೇಂದ್ರದ ಮಹಿಳಾ ಕಾರ್ಯಕರ್ತರು ಹಾಗೂ ಬಿಜೆಪಿ ಜಿಲ್ಲಾ ಪ್ರಮುಖರು ಇದ್ದರು.