Advertisement
ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇವೆ. ಇನ್ನೆರಡು ವಾರಗಳು ಕಳೆದರೆ ಮತದಾನದ ಹೊಸ್ತಿಲಲ್ಲಿ ಬಂದು ನಿಂತಿರುತ್ತೇವೆ. ಎರಡೂ ಪ್ರಮುಖ ಪಕ್ಷಗಳು ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿವೆ. ಅಭ್ಯರ್ಥಿಗಳೂ ತಮ್ಮದೇ ಆದ ಕಾರ್ಯ ತಂತ್ರದಲ್ಲಿ ತೊಡಗಿದ್ದಾರೆ.ಹೀಗಿರುವಾಗ ಜನ ಏನಂತಾರೆ, ಮತದಾರರ ಮನ ದೊಳಗೆ ಏನಿದೆ ಎಂದು ಉದಯವಾಣಿ ತಂಡ ಮೂಡಬಿದಿರೆ ವಿಧಾನಸಭಾ ಕ್ಷೇತ್ರದತ್ತ ಕಣ್ಣು ಹೊರಳಿಸಿತು.
ಜನರು ಹೀಗಂದರು… ಪಡುಶೆಡ್ಡೆ ಕುದ್ರುವಿನಲ್ಲಿ ಸಾಗುತ್ತಿದ್ದಾಗ ರಸ್ತೆಯಲ್ಲಿ ದನ ಮೇಯಿಸಿಕೊಂಡು ಹೋಗುತ್ತಿದ್ದ ಜಯಣ್ಣ ಮಾತಿಗೆ ಸಿಕ್ಕರು. ಮೊದಲಿಗೆ ಚುನಾವಣೆ ಕುರಿತು ಮಾತನಾಡಲು ಹಿಂದೇಟು ಹಾಕಿದರೆನ್ನಿ. ತಂಡ ಬಿಡಲಿಲ್ಲ. ಮತ್ತೆ ಮಾತು ಆರಂಭಿ ಸಿದಾಗ, ನನಗೆ 60 ವರ್ಷ. ಒಂದು ಬಾರಿಯೂ ಮತದಾನ ಮಾಡುವುದರಿಂದ ತಪ್ಪಿಸಿ ಕೊಂಡಿಲ್ಲ. ಈ ಬಾರಿಯೂ ಮತದಾನ ಮಾಡುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಇದೆ ಎನ್ನುವುದೇ ಗೊತ್ತಾಗುತ್ತಿಲ್ಲ. ವೋಟು ಯಾರಿಗೆ ಎಂದು ಮಾತ್ರ ಕೇಳಬಾರದು ಎಂದರು.
Related Articles
ಬಜಪೆಯಲ್ಲಿ ಸುಲೈಮಾನ್ ಅವರ ಮಾತಿನ ಧಾಟಿಯಲ್ಲಿ ಬೇಸರವಿತ್ತು. ಕೆಲವು ವರ್ಷಗಳಿಂದ ಪ್ರತಿ ವರ್ಷ ಒಂದಲ್ಲ ಒಂದು ಚುನಾವಣೆ ಬರ್ತಾನೇ ಇದೆ. ಪಕ್ಷಗಳಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ನಾವು ನೆನಪಾಗೋದು. ಅದೆಲ್ಲ ಮುಗಿದ ಮೇಲೆ ನಾವ್ಯಾರೋ ಅವರ್ಯಾರೋ ಎಂದರು.
Advertisement
ಬಜಪೆಗೆ “ವಾರದ ಸಂತೆ’ಗೆ ಬಂದಿದ್ದ ಪೆರ್ಮುದೆಯ ಸೆಲ್ವಿಯಾ ಅವರ ಪ್ರಕಾರ, ಯಾರಿಗೆ ಮತ ಹಾಕಬೇಕು ಎಂಬುದು ಇನ್ನೂ ಮನಸ್ಸಿನಲ್ಲಿ ನಿಗದಿಯಾಗಿಲ್ಲ. ಮತದಾನ ಮಾಡುವುದು ನಮ್ಮ ಹಕ್ಕು. ಅದನ್ನು ಪ್ರತಿ ಬಾರಿ ಚಲಾಯಿಸುತ್ತಿದ್ದೇನೆ. ನಮ್ಮ ಕಷ್ಟಗಳಿಗೆ ಯಾರು ಸ್ಪಂದಿಸುವ ಭರವಸೆ ನೀಡುತ್ತಾರೋ ಅವರಿಗೆ ಮತ ನೀಡುತ್ತೇವೆ. ಬರಲಿ, ಅವರು ಭರವಸೆ ಕೊಡಲಿ ಎಂದರು.
ಕಟೀಲು ಕಡೆಗೆ ಹೋದಾಗ, ಮಕ್ಕಳಿಗೆ ರಜೆ ಇರುವುದರಿಂದ ಭಕ್ತರ ಸಂಖ್ಯೆ ಹೆಚ್ಚಿತ್ತು. ಬಹುತೇಕ ಹೊರ ಜಿಲ್ಲೆಗಳ ಭಕ್ತರು ಕ್ಷೇತ್ರಕ್ಕೆ ಬಂದಿದ್ದರು. ಶಾಲಾ ಕಾಲೇಜು ದಾಖಲಾತಿ ವಿಚಾರವಾಗಿ ಜಿಲ್ಲೆಗೆ ಬಂದಿದ್ದವರೂ, ಕ್ಷೇತ್ರಕ್ಕೂ ಭೇಟಿ ನೀಡಿದ್ದರು. ಆದರೆ ಇವರ್ಯಾರೂ ಚುನಾವಣೆ, ಪಕ್ಷ, ಮತದಾನ ಯಾವುದರ ಗೋಜಿನಲ್ಲೂ ಇರಲಿಲ್ಲ.
ಮಾತೆಲ್ಲ ಬಿಸಿಲು – ಸೆಕೆಯ ಬಗ್ಗೆಜನರ ಬಾಯಲ್ಲಿ ಚುನಾವಣೆ ವಿಷಯ ಕ್ಕಿಂತ ಹೆಚ್ಚು ಕೇಳಿ ಬರುತ್ತಿರುವ ಮಾತು “ಬಿಸಿಲು-ಸೆಕೆ’. ತಾಪಮಾನ ಅಷ್ಟು ಹೆಚ್ಚಾಗಿದೆ. ಮಳೆ ಬರುತ್ತಿಲ್ಲ. ಸೆಕೆಗೆ ರಾತ್ರಿ ನಿದ್ದೆ ಬರುತ್ತಿಲ್ಲ. ನೀರು ಎಷ್ಟು ಕುಡಿದರೂ ಸಾಕಾಗುತ್ತಿಲ್ಲ, ಮಳೆಗಾಲಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇದ್ದು, ಅಲ್ಲಿಯ ವರೆಗೆ ಬಿಸಿಲನ್ನು ಸಹಿಸಿಕೊಳ್ಳುವುದು ಹೇಗೆ ಎನ್ನುವ ಮಾತುಗಳಿಗೇ ಮಹತ್ವ ಸಿಕ್ಕಿದೆ. ಚುನಾವಣೆಗೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ಈ ನಡುವೆ ಪ್ರಚಾರದ ಭರಾಟೆ ನಿಧಾನವಾಗಿ ಚುರುಕು ಪಡೆಯುತ್ತಿದೆ. ಆದರೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದ ಈ ಕ್ಷೇತ್ರದಲ್ಲಿ ಸದ್ಯ ಯಾವುದೇ ಗೌಜಿ ಗದ್ದಲ ಕಾಣಿಸುತ್ತಿಲ್ಲ. ಬಹಿರಂಗವಾಗಿ ಚುನಾವಣೆ ಎನ್ನುವುದೇ ಗೊತ್ತಾಗುವುದಿಲ್ಲ. ಇದರ ಪರಿಣಾಮ ಜನರ ಮೇಲೂ ಬೀರಿದ್ದು, ಜನರೂ ಸದ್ಯದ ಮಟ್ಟಿಗೆ ಚುನಾವಣೆ ಕುರಿತು ಚಿಂತಿಸದ ರೀತಿ ಇದ್ದಾರೆ. “ಮತದಾನ ಅಲ್ವ .. ಮಾಡಿದರಾಯಿತು ಬಿಡಿ’ ಎನ್ನುವ ಭಾವನೆಯಲ್ಲೇ ಇದ್ದಾರೆ.ಮದುವೆ, ಹಬ್ಬ, ಜಾತ್ರೆ, ನೇಮ ಇತ್ಯಾದಿಗಳಲ್ಲಿ ತಲ್ಲೀನರಾಗಿದ್ದಾರೆ. ಬಸ್ಸು ನಿಲ್ದಾಣ, ಮಾರುಕಟ್ಟೆಗಳು ಜನ ಜಂಗುಳಿ ಯಿಂದ ಕೂಡಿದೆ. ಸದ್ಯದಲ್ಲೇ ಚುನಾವಣೆ ಇದೆ, ಮತ ಚಲಾಯಿಸಬೇಕು ಎನ್ನುವ ಮಾತುಗಳು ಇಲ್ಲಿಯೂ ತುಂಬಿ ಬರುತ್ತಿಲ್ಲ. - ಭರತ್ ಶೆಟ್ಟಿಗಾರ್