ಬೆಂಗಳೂರು: ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಇಲ್ಲಿವರೆಗೆ ಚುನಾವಣಾ ನೀತಿ ಸಂಹಿತೆ ಜಾರಿ ತಂಡಗಳು ವಶಪಡಿಸಿಕೊಂಡ ನಗದು 50 ಕೋಟಿ ರೂ. ದಾಟಿದೆ.
ಫ್ಲೈಯಿಂಗ್ ಸ್ಕ್ವಾಡ್, ಸ್ಟಾಟಿಕ್ ಸರ್ವೆಲೆನ್ಸ್ ಟೀಮ್, ಪೊಲೀಸ್ ತಂಡಗಳು ಹಾಗೂ ಅಬಕಾರಿ ತಂಡಗಳು ಸೇರಿ ಇಲ್ಲಿವರೆಗೆ ವಶಪಡಿಸಿಕೊಂಡು ನಗದು ಮೊತ್ತ 50.94 ಕೋಟಿ ರೂ. ಆಗಿದೆ.
ಉಳಿದಂತೆ ಚುನಾವಣಾ ನೀತಿ ಸಂಹಿತೆ ಜಾರಿ ತಂಡಗಳು ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ 10.39 ಕೋಟಿ ನಗದು, 37.68 ಲಕ್ಷ ಮೌಲ್ಯದ ಮದ್ಯ, 6.16 ಲಕ್ಷ ಮೌಲ್ಯದ ಮಾದಕ ದ್ರವ್ಯ, 1.66 ಕೋಟಿ ರೂ. ಮೊತ್ತದ ಇತರೆ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿವೆ. ಈವರೆಗೆ ವಶಪಡಿಸಿಕೊಂಡ ಒಟ್ಟು ನಗದು 50.94 ಕೋಟಿ.
ಡಿಸಿಸಿ ಬ್ಯಾಂಕ್‌ಗೆ ಸೇರಿದ ಹಣ ಜಪ್ತಿ: ಏ.3ರಂದು ಸಂಜೆ 4.30 ಗಂಟೆಗೆ ಬೆಳಗಾವಿ ಜಿಲ್ಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡವು 1.90 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದು, ಈ ಹಣ ಬೆಳಗಾವಿ ಡಿಸಿಸಿ ಬ್ಯಾಂಕ್‌ಗೆ ಸೇರಿದ್ದು, ಅಕ್ರಮವಾಗಿ ಖಾಸಗಿ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಈ ಹಣವನ್ನು ಆದಾಯ ತೆರಿಗೆ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ. ಅದೇ ರೀತಿ ಚಿಕ್ಕಬಳ್ಳಾಪುರದಲ್ಲಿ ಮೂರು ವಿವಿಧ ವಾಹನಗಳಿಂದ 37.14 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.
1.76 ಕೋಟಿ ರೂ.ನಗದು ವಶ: ಚಿಕ್ಕಬಳ್ಳಾಪುರ ಸುಂಕ ವಸೂಲಾತಿ ಕೇಂದ್ರದಲ್ಲಿ ಸೂಕ್ತ ದಾಖಲೆಗಳಿಲ್ಲದೆ ಇಟ್ಟಿದ್ದ ಕೋಟ್ಯಂತರ ರೂ. ನಗದನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳ ತಂಡ ರಾಜ್ಯದ ಹಾಗೂ ಆಂಧ್ರ ಪೊಲೀಸರ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ. ಸುಂಕ ವಸೂಲಾತಿ ಕೇಂದ್ರದ ವ್ಯವಸ್ಥಾಪಕ ಸುಬ್ಟಾರೆಡ್ಡಿ ಎಂಬುವರ ಕೊಠಡಿಯಲ್ಲಿ ಇಟ್ಟಿದ್ದ 1.76 ಕೋಟಿ ರೂ. ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕರಪತ್ರ ವಶಕ್ಕೆ: ಚನ್ನರಾಯಪಟ್ಟಣ ತಾಲೂಕಿನ ಗಡಿಭಾಗದ ಹಿರೀಸಾವೆ ಬಳಿಯಲ್ಲಿನ ಚೆಕ್ ಪೋಸ್ಟ್‌ನಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ 2 ಬಸ್‌ನಲ್ಲಿ ಸಾಗಿಸುತ್ತಿದ್ದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಸೇರಿದ ಸುಮಾರು 50 ಸಾವಿರ ಕರಪತ್ರ ಹಾಗೂ 2 ಬಸ್‌ಗಳನ್ನು ಚುನಾವಣಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ 2 ಬಸ್‌ಗಳಲ್ಲಿ ತಲಾ 25
ಸಾವಿರ ಕರಪತ್ರ ವಿರುವ ಬಂಡಲ್‌ಗಳು ಪತ್ತೆಯಾಗಿವೆ.