ನವದೆಹಲಿ: ಆರನೇ ಹಂತದ ಲೋಕಸಭೆ ಚುನಾವಣೆಯ ಪ್ರಚಾರ ಅಂತ್ಯಗೊಂಡಿದ್ದು, ಮೇ 25(ಶನಿವಾರ)ರಂದು ಎಂಟು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ಸೇರಿದಂತೆ 58 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಇದನ್ನೂ ಓದಿ:ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ… ಅಪಾಯದಿಂದ ಪಾರಾದ ಮನೆಮಂದಿ
6ನೇ ಹಂತದ ಲೋಕಸಭೆ ಚುನಾವಣೆಯ ಪ್ರಚಾರ ಗುರುವಾರ (ಮೇ 23) ಕೊನೆಗೊಂಡಿದ್ದು, ಇದರೊಂದಿಗೆ 58 ಲೋಕಸಭಾ ಸ್ಥಾನಗಳಲ್ಲಿನ 889 ಅಭ್ಯರ್ಥಿಗಳ ಭವಿಷ್ಯ ಮತದಾರರು ಶನಿವಾರ ನಿರ್ಧರಿಸಲಿದ್ದಾರೆ.
2019ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ದೆಹಲಿ ಮತ್ತು ಹರ್ಯಾಣದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. 6ನೇ ಹಂತದ ಲೋಕಸಮರದಲ್ಲಿ ಬಿಹಾರದ 8 ಕ್ಷೇತ್ರ, ಹರ್ಯಾಣದ ಎಲ್ಲಾ 10 ಕ್ಷೇತ್ರ, ಜಮ್ಮು-ಕಾಶ್ಮೀರದ ಒಂದು, ಜಾರ್ಖಂಡ್ ನ 4, ದೆಹಲಿಯ 7 ಕ್ಷೇತ್ರ, ಒಡಿಶಾದ 6, ಉತ್ತರಪ್ರದೇಶದ 14 ಹಾಗೂ ಪಶ್ಚಿಮಬಂಗಾಳದ 8 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಲೋಕಸಭೆ ಚುನಾವಣೆ ಜೊತೆಗೆ ಮೇ 25ರಂದು ಒಡಿಶಾ ವಿಧಾನಸಭೆಯ 3ನೇ ಹಂತದ ಚುನಾವಣೆಯಲ್ಲಿ 42 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ ಎಂದು ಚುನಾವಣ ಆಯೋಗ ತಿಳಿಸಿದೆ.
ಜಮ್ಮು-ಕಾಶ್ಮೀರದ ಅನಂತ್ ನಾಗ್-ರಾಜೌರಿ, ಪಶ್ಚಿಮಬಂಗಾಳದ ತಮ್ಲುಕ್, ಮೇದಿನಿಪುರ್, ಹರ್ಯಾಣದ ಕರ್ನಲ್, ಕುರುಕ್ಷೇತ್ರ, ಗುರ್ಗಾಂವ್, ರೋಹ್ಟಕ್, ಒಡಿಶಾದ ಭುವನೇಶ್ವರ್, ಪುರಿ ಹಾಗೂ ಸಂಬಾಲ್ಪುರ್ ಸೇರಿದಂತೆ ಇವು ಪ್ರಮುಖ ಕ್ಷೇತ್ರಗಳಾಗಿವೆ.