ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಇರಬಹುದು; ಆದರೆ ಬಿಹಾರದಲ್ಲಿನ ಮುಖಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಈಗಲೇ ಲೋಕಸಭಾ ಚುನಾವಣೆಗೆ ಬಿಜೆಪಿ ಜತೆಗೆ ಸೀಟು ಹೊಂದಾಣಿಕೆಯ ಮಾತುಕತೆಗಾಗಿ ರಟ್ಟೆಯರಳಿಸಲು ಆರಂಭಿಸಿದೆ.
2015ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ತೋರಿರುವ ಉಜ್ವಲ ನಿರ್ವಹಣೆಯನ್ನು ದೃಷ್ಟಿಯಲ್ಲಿರಿಸಕೊಂಡೇ ಸೀಟು ಹಂಚಿಕೆ ಮಾತುಕತೆಗಳು ನಡೆಯಬೇಕೆಂದು ಜೆಡಿಯು ಪಟ್ಟು ಹಿಡಿದಿದೆ.
2105ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು 243 ಸ್ಥಾನಗಳ ಪೈಕಿ 71 ಸ್ಥಾನಗಳನ್ನು ಗೆದ್ದಿತ್ತು. ಅಧಿಕಾರಕ್ಕೆ ಬರುವ ಸಲುವಾಗಿ ಹಲವಾರು ಪಕ್ಷಗಳೊಂದಿಗೆ ಜೆಡಿಯು ಕೈಜೋಡಿಸಿತ್ತು. ಅವುಗಳಲ್ಲಿ ಮಹಾಘಟಬಂಧನದ ಆರ್‌ಜೆಡಿ ಮತ್ತು ಕಾಂಗ್ರೆಸ್ ಪಾಲುದಾರ ಪಕ್ಷಗಳು ಮುಖ್ಯವಾಗಿದ್ದವು. ಅನಂತರದಲ್ಲಿ ಮಹಾ ಘಟ ಸ್ಫೋಟವಾದಾಗ ಜೆಡಿಯು, ಎನ್‌ಡಿಎ ತೆಕ್ಕೆಯೊಳಗೆ ಬಂದಿತ್ತು. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 53 ಸ್ಥಾನಗಳನ್ನು ಮಾತ್ರವೇ ಗೆದ್ದಿತ್ತು.
ಲೋಕಸಭಾ ಚುನಾವಣೆಗಾಗಿ ಸೀಟು ಹಂಚಿಕೆ ಪ್ರಕ್ರಿಯೆ ಮುಂದಿನ ವರ್ಷವೇ ನಡೆಯಲಿದೆ. ಆರ್‌ಜೆಡಿ ಈಗಲೇ ತನ್ನ ಪಾಲನ್ನು ಭದ್ರಪಡಿಸಿಕೊಳ್ಳಲು ಮುಂದಾಗಿರುವುದಕ್ಕೆ ನಿತೀಶ್ ಕುಮಾರ್ ಅವರ ಇಮೇಜ್‌ನಿಂದಾಗಿ ಪಕ್ಷ ಬಲಪಡೆದಿರುವುದೇ ಕಾರಣವಾಗಿದೆ.
ಹಾಗಿದ್ದರೂ 2014ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ 40 ಸ್ಥಾನಗಳ ಪೈಕಿ ಜೆಡಿಯು ಗೆದ್ದದ್ದು ಕೇವಲ 2 ಸ್ಥಾನಗಳನ್ನು. ಹಾಗಾಗಿ ಮುಂದಿನ ವರ್ಷದ ಲೋಕಸಭಾ ಚುನಾವಣೆಗಾಗಿ ಬಿಹಾರದಲ್ಲಿ ಸೀಟು ಹಂಚಿಕೊಳ್ಳುವಾಗ ಬಿಜೆಪಿ ಈ ವಿಷಯವನ್ನು ಜೆಡಿಯುಗೆ ನೆನಪಿಸಿಕೊಡಲಿದೆ ಎಂದು ವರದಿಗಳು ತಿಳಿಸಿವೆ.