Advertisement

ಜಯಕ್ಕೆ ಬೆದರಿಕೆ ಸೂತ್ರ

02:38 AM Apr 02, 2019 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸೀಟು ಹೊಂದಾಣಿಕೆ ಮಾಡಿಕೊಂಡಿದ್ದರೂ ಒಳ ಏಟಿನ ಆತಂಕ ಎದುರಿಸುತ್ತಿರುವ ಕಾಂಗ್ರೆಸ್‌-ಜೆಡಿಎಸ್‌ ಪರಸ್ಪರ ಹೊಸ ಸೂತ್ರಕ್ಕೆ ಮುಂದಾಗಿದೆ.

Advertisement

ಕಾಂಗ್ರೆಸ್‌ ಅಭ್ಯರ್ಥಿಗಳು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರು 2018ರ ಚುನಾವಣೆಯಲ್ಲಿ ಗಳಿಸಿದ್ದ ಮತಗಳನ್ನು ಕೊಡಿಸಬೇಕು. ಅದೇ ರೀತಿ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರು. ತಾವು ಪಡೆದಿದ್ದ ಮತಗಳನ್ನು ಕೊಡಿಸಬೇಕು.

ಒಂದೊಮ್ಮೆ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಶಾಸಕರು ಇಲ್ಲದಿದ್ದರೆ ಕಳೆದ ಚುನಾವಣೆಯಲ್ಲಿ ಆಯಾ ಪಕ್ಷಗಳಿಂದ ಸೋತವರು ಪಡೆದಿದ್ದ ಮತಗಳ ಪೈಕಿ ಹೆಚ್ಚಿನ ಮತ ಕೊಡಿಸಬೇಕು. ಇದರಲ್ಲಿ ವ್ಯತ್ಯಾಸವಾದರೆ ಸಂಬಂಧಪಟ್ಟವರ ವಿರುದ್ಧ ಎರಡೂ ಪಕ್ಷಗಳು ಕ್ರಮ ಕೈಗೊಳ್ಳಬೇಕು. ಆ ಮೂಲಕ ಪಕ್ಷ ವಿರೋಧಿ ಚಟುವಟಿಕೆ ಮಾಡದಂತೆ ಎಚ್ಚರಿಕೆ ನೀಡಬೇಕು ಎಂಬ ಮೌಖೀಕ ಒಪ್ಪಂದಕ್ಕೆ ಬರಲಾಗಿದೆ ಎಂದು ಹೇಳಲಾಗಿದೆ. ಇದು ಒಂದು ರೀತಿಯಲ್ಲಿ ಎರಡೂ ಪಕ್ಷಗಳ ಶಾಸಕರಿಗೆ ಬೆದರಿಕೆ ತಂತ್ರವೂ ಹೌದು ಎಂದೇ ವಿಶ್ಲೇಷಿಸಲಾಗುತ್ತಿದೆ.

ಪ್ರಮುಖವಾಗಿ ಮಂಡ್ಯ, ಹಾಸನ, ತುಮಕೂರು, ಬೆಂಗಳೂರು ಉತ್ತರ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಿಗೆ ಅನ್ವಯಿಸಲು ತೀರ್ಮಾನಿಸಲಾಗಿದೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸ್ಪರ್ಧೆ ಮಾಡಿರುವ ತುಮಕೂರು, ನಿಖೀಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡಿರುವ ಮಂಡ್ಯ, ಪ್ರಜ್ವಲ್‌ ರೇವಣ್ಣ ಸ್ಪರ್ಧೆ ಮಾಡಿರುವ ಹಾಸನ, ಕೇಂದ್ರದ ಮಾಜಿ ಸಚಿವರಾದ ಕೆ.ಎಚ್‌.ಮುನಿಯಪ್ಪ ಹಾಗೂ ಎಂ.ವೀರಪ್ಪಮೊಯಿಲಿ ಸ್ಪರ್ಧಿಸಿರುವ ಕೋಲಾರ ಹಾಗೂ ಚಿಕ್ಕಬಳ್ಳಾಪುರ, ಹಾಲಿ ಸಂಸದ ಎಂ.ಚಂದ್ರಪ್ಪ ಸ್ಪರ್ಧೆ ಮಾಡಿರುವ ಚಿತ್ರದುರ್ಗ, ಮಾಜಿ ಸಚಿವ ಆನಂದ್‌ ಆಸ್ನೋಟಿಕರ್‌ ಸ್ಪರ್ಧೆ ಮಾಡಿರುವ ಉತ್ತರ ಕನ್ನಡ, ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಸ್ಪರ್ಧೆ ಮಾಡಿರುವ ಶಿವಮೊಗ್ಗ ಕ್ಷೇತ್ರಗಳು ಎರಡೂ ಪಕ್ಷಗಳಿಗೆ ಪ್ರತಿಷ್ಠೆಯಾಗಿವೆ.

Advertisement

ಹೀಗಾಗಿ, ಮೇಲ್ಕಂಡ ಕ್ಷೇತ್ರಗಳನ್ನು ಗೆಲ್ಲಲು ಎರಡೂ ಪಕ್ಷಗಳ ನಾಯಕರು ಪರಸ್ಪರ ಈ ಸೂತ್ರ ರಚಿಸಿಕೊಂಡಿದ್ದಾರೆ. ಈ ಬಗ್ಗೆ ಕ್ಷೇತ್ರಾವಾರು ಸಭೆ ನಡೆಸಿ ಶಾಸಕರು ಹಾಗೂ ಮಾಜಿ ಶಾಸಕರುಗಳಿಗೆ ಸ್ಪಷ್ಟ ಸೂಚನೆಯನ್ನೂ ನೀಡಲಿದ್ದಾರೆ.

ಅನುಮಾನ ಕಾರಣ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಡೆದಿದ್ದ ಪೂರ್ಣ ಪ್ರಮಾಣದ ಮತಗಳು ಬರದಿದ್ದರೂ ಆದಷ್ಟು ಹೆಚ್ಚು ಮತಗಳನ್ನು ಶಾಸಕರು, ಮಾಜಿ ಶಾಸಕರು ಕೊಡಿಸಲು ಹೊಣೆಗಾರಿಕೆ ನೀಡಿದರೆ ಮಾತ್ರ ಹೊಂದಾಣಿಕೆ ಯಶಸ್ವಿಯಾಗುತ್ತದೆ ಎಂಬ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಾಗಿದೆ.

ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಚಿತ್ರದುರ್ಗ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಜೆಡಿಎಸ್‌ನವರು ಪೂರ್ಣ ಮನಸ್ಸಿನಿಂದ ಕೆಲಸ ಮಾಡುವ ಅನುಮಾನ ಇದೆ. ಅದೇ ರೀತಿ ಹಾಸನ, ಮಂಡ್ಯ, ತುಮಕೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಾಂಗ್ರೆಸ್‌ನವರು ಕೆಲಸ ಮಾಡುತ್ತಾರಾ ಎಂಬ ಸಂದೇಹವಿದೆ.

ಸೀಟು ಹೊಂದಾಣಿಕೆಯಡಿ ಚುನಾವಣೆ ಎದುರಿಸುತ್ತಿರುವುದರಿಂದ ಫ‌ಲಿತಾಂಶದಲ್ಲಿ ವ್ಯತ್ಯಾಸವಾದರೆ ಸಮ್ಮಿಶ್ರ ಸರ್ಕಾರದ ಮೇಲೂ ಪರಿಣಾಮ ಬೀರಬಹುದು ಎಂದು ಕಾಂಗ್ರೆಸ್‌ನವರು ಕೆಲವರು ಕಡೆ ಎಚ್ಚರಿಕೆ ರೂಪದಲ್ಲೇ ಹೇಳುತ್ತಿದ್ದಾರೆ. ಅದೇ ರೀತಿ ಕಾಂಗ್ರೆಸ್‌ನವರು ಹೆಚ್ಚು ಕಡಿಮೆ ಮಾಡಿದರೆ ನಾವೂ ನೋಡಿಕೊಳ್ಳಬೇಕಾಗುತ್ತದೆ ಎಂದು ಜೆಡಿಎಸ್‌ನವರು ಬೆದರಿಕೆ ಸಹ ಹಾಕಿದ್ದಾರೆ. ಇದು, ಮತ್ತಷ್ಟು ವಿಕೋಪಕ್ಕೆ ಹೋಗುವುದು ಬೇಡ ಎಂಬ ಕಾರಣಕ್ಕೆ ಎರಡೂ ಪಕ್ಷಗಳ ನಾಯಕರು ಇಂತದ್ದೊಂದು ತೀರ್ಮಾನಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ

ನಾಲ್ಕರ ಮೇಲೆ ಕಣ್ಣು
ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಚಿತ್ರದುರ್ಗದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಡೆದಿದ್ದ ಮತಗಳಷ್ಟೂ ಕಾಂಗ್ರೆಸ್‌ಗೆ ವರ್ಗಾವಣೆಯಾದರೆ ಮಾತ್ರ ಗೆಲುವು ಸಾಧ್ಯ. ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಲಾಭವಾಗುವುದು ನಾಲ್ಕು ಕ್ಷೇತ್ರಗಳಲ್ಲಿ ಮಾತ್ರವೇ ಎಂಬುದು ಆಂತರಿಕವಾಗಿ ನಡೆಸಿರುವ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಹೀಗಾಗಿ, ಕಾಂಗ್ರೆಸ್‌ ನಾಯಕರು ಕಳೆದ ವಿಧಾನಸಭೆ ಚುನಾವಣೆಯ ಮತಗಳ ಸೂತ್ರ ಮುಂದಿಟ್ಟಿದ್ದು ಮಂಡ್ಯ, ಹಾಸನ, ತುಮಕೂರಿನಲ್ಲಿ ಒಳ ಏಟಿನ ಆತಂಕ ಎದುರಿಸುತ್ತಿರುವ ಜೆಡಿಎಸ್‌ ಸಹ ಅದಕ್ಕೆ ಒಪ್ಪಿಕೊಂಡಿದೆ.

ಉಮೇಶ್‌ ಜಾಧವ್‌
ರಾಜೀನಾಮೆ ಅಂಗೀಕಾರ
ಬೆಂಗಳೂರು: ಪಕ್ಷದ ನಾಯಕರ ವಿರುದ್ಧ ಬಂಡಾಯವೆದ್ದು ಚಿಂಚೊಳ್ಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಡಾ. ಉಮೇಶ್‌ ಜಾಧವ್‌ ಅವರ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ ಅಂಗೀಕರಿಸಿದ್ದಾರೆ. ಈ ಮೂಲಕ ಕಳೆದ ಇಪ್ಪತ್ತೈದು ದಿನಗಳಿಂದ ನಡೆದಿದ್ದ ಜಾಧವ್‌ ಅವರ ರಾಜೀನಾಮೆ ಪ್ರಹಸನಕ್ಕೆ ತೆರೆ ಬಿದ್ದಿದೆ.

ಡಾ.ಉಮೇಶ್‌ ಜಾಧವ್‌ ಕರ್ನಾಟಕ ವಿಧಾನಸಭೆಯ ಕಾರ್ಯ ವಿಧಾನ ಮತ್ತು ನಡವಳಿಕೆ ನಿಯಮಾವಳಿಗಳ ನಿಯಮ 202 ಪ್ರಕಾರ ನಿಗದಿತ ನಮೂನೆಯಲ್ಲಿ ರಾಜೀನಾಮೆ ಸಲ್ಲಿಸಿರುವುದರಿಂದ ಹಾಗೂ ಸ್ವ ಇಚ್ಚೆಯಿಂದ ರಾಜಿನಾಮೆ ಸಲ್ಲಿಸಿದ್ದಾರೆ ಎಂದು ಮನವರಿಕೆಯಾಗಿದೆ. ಈ ಕಾರಣಕ್ಕಾಗಿ ಸಂವಿಧಾನದ ಅನುಚ್ಚೇದ 190 (3) ಬಿ ಪ್ರಕಾರ ಸಭಾಧ್ಯಕ್ಷರಿಗೆ ಇರುವ ಅಧಿಕಾರ ಚಲಾಯಿಸಿ ನನ್ನ ಸ್ವಂತ ನ್ಯಾಯಿಕ ಪ್ರಜ್ಞೆಯ ಮೇರೆಗೆ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ತಿಳಿಸಿದ್ದಾರೆ.

-ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next