Advertisement

Lok Sabha Elections;ಐಎನ್‌ಡಿಐಎಯಲ್ಲಿ ಮತ್ತೆ ಒಡಕು?290 ಕ್ಷೇತ್ರಗಳಿಗೆ ಕಾಂಗ್ರೆಸ್‌ ಪಟ್ಟು

01:06 AM Jan 02, 2024 | Team Udayavani |

ಹೊಸದಿಲ್ಲಿ: ಮುಂದಿನ ಲೋಕ ಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂಬ ಹುರುಪಿನಿಂದ ರಚನೆ ಆಗಿರುವ ಐಎನ್‌ಡಿಐಎ ಮೈತ್ರಿ ಕೂಟದಲ್ಲಿ ಸ್ಥಾನ ಹೊಂದಾಣಿಕೆಯೇ ಅಡ್ಡಗೋಡೆ ಯಾಗಿದೆ.

Advertisement

ವಿಪಕ್ಷಗಳ ಮೈತ್ರಿಕೂಟದ ಪ್ರಧಾನ ಪಕ್ಷವಾಗಿರುವ ಕಾಂಗ್ರೆಸ್‌ ದೇಶದ 290 ಲೋಕಸಭಾ ಕ್ಷೇತ್ರಗಳಲ್ಲಿ ತಾನೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಮುಂದಾಗಿದೆ ಎಂದು ಹಲವು ಆಂಗ್ಲ ಸುದ್ದಿ ವೆಬ್‌ಸೈಟ್‌ಗಳು ವರದಿ ಮಾಡಿವೆ.

ಡಿ. 29 ಮತ್ತು 30ರಂದು ನಡೆದಿದ್ದ ಕಾಂಗ್ರೆಸ್‌ನ ಸ್ಥಾನ ಹೊಂದಾಣಿಕೆ ವಿಚಾರಕ್ಕಾಗಿ ಇರುವ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಕುತೂಹಲಕಾರಿ ಅಂಶವೆಂದರೆ ಜೆಡಿಯು, ಆಪ್‌ ಮತ್ತಿತರ ಪಕ್ಷಗಳ ಜತೆಗೆ ಜ. 4ರಂದು ಸ್ಥಾನ ಕಾಂಗ್ರೆಸ್‌ ವತಿಯಿಂದ ಸ್ಥಾನ ಹೊಂದಾಣಿಕೆ ಬಗ್ಗೆ ಮಾತುಕತೆ ಆರಂಭವಾಗಲಿತ್ತು. ಅದಕ್ಕೆ ಮುನ್ನವೇ ವಿಪಕ್ಷಗಳ ಮೈತ್ರಿ ಕೂಟದಲ್ಲಿ ಸ್ಥಾನ ಹೊಂದಾಣಿಕೆ ವಿಷಯದಲ್ಲಿ ಹೊಸ ತಕರಾರು ಉದ್ಭವವಾಗಿದೆ.

250ರಿಂದ 300 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ಚಿಂತನೆ ನಡೆಸಿದೆ. ಈ ಬಗ್ಗೆ ಜ. 4ರಂದು ನಡೆಯುವ ಐಎನ್‌ಡಿಐಎ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಹಿರಿಯ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬಿಜೆಪಿಯು 350 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿ ಹಾಕಿಕೊಂಡಿರುವಂತೆಯೇ ಕಾಂಗ್ರೆಸ್‌ನಲ್ಲಿಯೂ 290 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆದಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಕಾಂಗ್ರೆಸ್‌ ಮುಂದಾಗಿದೆ. ಹೀಗಾಗಿ ಸ್ಥಾನ ಹೊಂದಾಣಿಕೆ ಮಾತುಕತೆ ವೇಳೆ ಸಿಂಹಪಾಲು ತನಗೇ ಬೇಕು ಎಂದು ವಾದಿಸುವ ಸಾಧ್ಯತೆ ಅಧಿಕವಾಗಿದೆ.

ಪಶ್ಚಿಮ ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌, ಮಹಾರಾಷ್ಟ್ರದಲ್ಲಿ ಶಿವಸೇನೆಯ ಉದ್ಧವ್‌ ಠಾಕ್ರೆ ಬಣ ಈಗಾಗಲೇ ಹೆಚ್ಚಿನ ಸ್ಥಾನಗಳನ್ನು ನೀಡುವ ಬಗ್ಗೆ ಕಾಂಗ್ರೆಸ್‌ ನಾಯಕತ್ವದ ಮುಂದೆ ಬೇಡಿಕೆ ಇರಿಸಿದ್ದರೂ ಅದಕ್ಕೆ ಸಮ್ಮತಿ ವ್ಯಕ್ತವಾಗಿಲ್ಲ. ಇದರ ಜತೆಗೆ ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ ಕೂಡ ಸ್ಥಾನ ಹೊಂದಾಣಿಕೆ ವಿಚಾರದಲ್ಲಿ ತಗಾದೆ ತೆಗೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಅಭ್ಯರ್ಥಿ ಎಂಬ ಪ್ರಸ್ತಾವಕ್ಕೆ ಜೆಡಿಯು ಆಂತರಿಕವಾಗಿ ಸಹಮತ ಹೊಂದಿಲ್ಲ. ಇವೆಲ್ಲವುಗಳ ನಡುವೆ ಕಾಂಗ್ರೆಸ್‌ ಕೂಡ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಸಿಂಹಪಾಲಿಗೆ ಬೇಡಿಕೆ ಇಟ್ಟಿದೆ ಎನ್ನಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next