ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಸತತ 3ನೇ ಬಾರಿಗೆ ಅಧಿಕಾರಕ್ಕೇರಲು ಸಜ್ಜಾಗಿದೆ. ಈ ಬಾರಿ ಮೈತ್ರಿಕೂಟ 295 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಬಿಜೆಪಿ 243 ಸ್ಥಾನಗಳನ್ನು ಗೆದ್ದಿದೆ. ಆದರೆ ಕಳೆದ ಚುನಾವಣೆಗೆ ಹೋಲಿಸಿದರೆ ಮೈತ್ರಿಕೂಟ 59 ಸ್ಥಾನಗಳ ಹಿನ್ನಡೆಯನ್ನು ಅನುಭವಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು, ಭಾರತದ ವಿದೇಶಾಂಗ ನೀತಿ, ಮೇಕ್ ಇನ್ ಇಂಡಿಯಾ ಯೋಜನೆಗಳು ಈ ಬಾರಿಯೂ ಮೈತ್ರಿಕೂಟ ಕೈ ಹಿಡಿದಿವೆ. ಇದಲ್ಲದೇ ಚುನಾವಣೆಗೆ ಕೆಲವು ದಿನಗಳು ಬಾಕಿ ಇರುವಾಗ ವಿಪಕ್ಷದೊಟ್ಟಿಗಿದ್ದ ಪ್ರಮುಖ ಪಕ್ಷಗಳಾದ ಟಿಡಿಪಿ ಮತ್ತು ಜೆಡಿಯುಗಳನ್ನು ಮೈತ್ರಿಕೂಟಕ್ಕೆ ಸೇರಿಸಿಕೊಂಡಿದ್ದು ಪಕ್ಷಕ್ಕೆ ಅನುಕೂಲ ಒದಗಿಸಿತು. ಚುನಾವಣೆ ಘೋಷಣೆಗೂ ಮುನ್ನ ತನ್ನ ಹಳೆಯ ಮಿತ್ರರನ್ನು ಒಟ್ಟುಗೂಡಿಸಿಕೊಂಡು ಚುನಾವಣೆ ಎದುರಿಸಿದ್ದು ಬಿಜೆಪಿಯ ಚಾಣಾಕ್ಷ ನಡೆ ಎಂದೇ ಹೇಳಬಹುದು.
ಮೋದಿ ವರ್ಚಸ್ಸು: ಕಳೆದ 2 ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಯ ಕೈ ಹಿಡಿದದ್ದು ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು, ಇದು ಈ ಚುನಾವಣೆಯಲ್ಲೂ ಹಲವು ಕ್ಷೇತ್ರಗಳಲ್ಲಿ ಪಕ್ಷದ ಕೈ ಹಿಡಿದಿದೆ. ಅಲ್ಲದೇ ಪಕ್ಷದಲ್ಲಿನ ಸ್ಥಳೀಯ ನಾಯಕರ ವರ್ಚಸ್ಸು ಈ ಬಾರಿ ಕೆಲಸ ಮಾಡಿದೆ.
ಕೇಂದ್ರದ ಯೋಜನೆಗಳು: 10 ವರ್ಷಗಳ ಆಡಳಿತದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಮೇಕ್ ಇನ್ ಇಂಡಿಯಾ, ಪಡಿತರ ವಿತರಣೆ, ರಾಮಮಂದಿರ ನಿರ್ಮಾಣ, ಮುದ್ರಾ ಯೋಜನೆ, ಕೌಶಲ್ಯ ಭಾರತದಂತಹ ಯೋಜನೆಗಳು ಸರ್ಕಾರದ ಮೇಲೆ ಜನರ ವಿಶ್ವಾಸವನ್ನು ಹೆಚ್ಚಳ ಮಾಡಿದವು. ಮೋದಿ ಅವರ ಆಡಳಿತದ ಅವಧಿಯಲ್ಲಿ ವಿದೇಶಗಳಲ್ಲಿ ಭಾರತದ ಹೆಸರು ಜನಪ್ರಿಯತೆ ಪಡೆದುಕೊಂಡಿದ್ದು ಸಹ ಮತ್ತೂಮ್ಮೆ ಎನ್‌ಡಿಎ ಮೈತ್ರಿಕೂಟದ ಗೆಲುವಿಗೆ ಕಾರಣವಾಗಿವೆ.
ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿದರೂ ಕಳೆದ ಚುನಾವಣೆಗೆ ಹೋಲಿಸಿದರೆ ಭಾರಿ ಹಿನ್ನಡೆ ಕಂಡಿದೆ. ಲೋಕಸಭೆ ಚುನಾವಣೆಯ ಮೊದಲ 2 ಹಂತಗಳಲ್ಲಿ ರಾಷ್ಟ್ರೀಯ ನಾಯಕರು ವಿಕಸಿತ ಭಾರತದ ಬಗ್ಗೆ ಮಾತನಾಡುತ್ತಿದ್ದರೂ ಬಳಿಕ ಹಿಂದೂ ಮುಸ್ಲಿಂ ಸಂಘರ್ಷ ವಿಷಯವನ್ನು ಪ್ರಮುಖವಾಗಿಸಿಕೊಂಡರು. ಇದರಿಂದ ಒಂದಿಡೀ ವರ್ಗದ ಮತಗಳು(ಮುಸ್ಲಿಂ) ಕ್ರೋಡೀಕರಣಗೊಂಡವು. ಮುಸ್ಲಿಂ ಮತಗಳೆಲ್ಲ ಇಂಡಿಯಾ ಒಕ್ಕೂಟದತ್ತ ತಿರುಗಿ, ವಿಪಕ್ಷಗಳ ಒಕ್ಕೂಟಕ್ಕೆ ಲಾಭ ಉಂಟುಮಾಡಿತು. ಇದೇ ವೇಳೆ, ಹಲವು ನಾಯಕರು ಸಂವಿಧಾನ ಬದಲಾವಣೆಯಂತಹ ಹೇಳಿಕೆ ನೀಡಿದ್ದು ಪಕ್ಷಕ್ಕೆ ಹಿನ್ನಡೆಯುಂಟು ಮಾಡಿತು.
ಬಿಜೆಪಿಯ ಹಾರ್ಟ್‌ಲ್ಯಾಂಡ್ ಎಂದು ಕರೆಸಿಕೊಳ್ಳುವ ಉತ್ತರ ಪ್ರದೇಶದಲ್ಲಿ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿ ಕಡೆಗಣಿಸಿದ್ದು ಪಕ್ಷಕ್ಕೆ ಮುಳುವಾ ಯಿತು. ಅಲ್ಲದೇ ಬಿಜೆಪಿ ಪ್ರಮುಖವಾಗಿ ನಂಬಿಕೊಂಡಿದ್ದ ರಾಮಮಂದಿರ ಈ ಬಾರಿ ಅಷ್ಟಾಗಿ ಪಕ್ಷದ ಕೈ ಹಿಡಿಯಲಿಲ್ಲ.
ಗೆಲುವಿಗೆ ಕಾರಣಗಳೇನು?
ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು
ಟಿಡಿಪಿ, ಜೆಡಿಯು ಉತ್ತಮ ಪ್ರದರ್ಶನ
ಎನ್‌ಡಿಎ ಮೈತ್ರಿಕೂಟದ ಪುನಶ್ಚೇತನ
ದೇಶಾದ್ಯಂತ ನಾಯಕರು ಕೈಗೊಂಡ ಪ್ರಚಾರ
ಮೇಕ್ ಇನ್ ಇಂಡಿಯಾದಂತಹ ಯೋಜನೆಗಳು