ನವದೆಹಲಿ: ಲೋಕಸಭಾ ಚುನಾವಣಾ ಅಖಾಡದ ಪ್ರಚಾರ ಭರಾಟೆ ಭರ್ಜರಿಯಾಗಿ ನಡೆಯುತ್ತಿರುವ ನಡುವೆಯೇ ನೀತಿ ಸಂಹಿತೆ ಉಲ್ಲಂಘನೆಯ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಚುನಾವಣಾ ಆಯೋಗ 72ಗಂಟೆಗಳ ಕಾಲ ಚುನಾವಣಾ ಪ್ರಚಾರ ನಡೆಸದಂತೆ ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಗೆ 48ಗಂಟೆಗಳ ನಿರ್ಬಂಧಿ ವಿಧಿಸಿದೆ.
ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದ ರಾಜಕೀಯ ನಾಯಕರ ವಿರುದ್ಧ ಕ್ರಮಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಆಯೋಗ ಕ್ರಮ ಕೈಗೊಂಡಿದೆ.
ಮಂಗಳವಾರ ಬೆಳಗ್ಗೆ 6ಗಂಟೆಯಿಂದ ಮುಂದಿನ 72ಗಂಟೆಗಳ ಕಾಲ ಯೋಗಿ ಆದಿತ್ಯನಾಥ್ ಯಾವುದೇ ಸಾರ್ವಜನಿಕ ಸಭೆಯನ್ನಾಗಲಿ ಅಥವಾ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಬಾರದು. ಅದೇ ರೀತಿ ಮಾಯಾವತಿಗೂ ಕೂಡಾ 48ಗಂಟೆಗಳ ಕಾಲ ನಿರ್ಬಂಧ ವಿಧಿಸಿರುವುದಾಗಿ ಆಯೋಗ ತಿಳಿಸಿದೆ.
ಏಪ್ರಿಲ್ 11ರಂದು ಯೋಗಿ ಆದಿತ್ಯನಾಥ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೇಳೆ ಈ ಬಾರಿಯ ಲೋಕಸಭಾ ಚುನಾವಣೆ ಅಲಿ ಹಾಗೂ ಬಜರಂಗಿ ಬಲಿ ನಡುವಿನ ಹೋರಾಟ ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಯೋಗಿ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು.
ಈ ಲೋಕಸಭಾ ಚುನಾವಣೆಯಲ್ಲಿ ಒಂದು ನಿಗದಿತ ಪಕ್ಷಕ್ಕೆ ಮುಸ್ಲಿಮರು ಮತ ಚಲಾಯಿಸಬಾರದು ಎಂದು ದಿಯೋಬಂದ್ ಗೆ ಮನವಿ ಮಾಡಿಕೊಳ್ಳುವುದಾಗಿ ಮಾಯಾವತಿ ಹೇಳಿಕೆ ನೀಡಿದ್ದು, ಇದಕ್ಕೆ ವಿವರಣೆ ಕೇಳಿ ಆಯೋಗ ನೋಟಿಸ್ ಜಾರಿ ಮಾಡಿತ್ತು.