ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ಸಮೀಪದ ಬೆನ್ನಲ್ಲೇ ಕ್ಷೇತ್ರದಲ್ಲಿ ಟಿಕೆಟ್ ಕಲಹ ಎಲ್ಲಾ ಪಕ್ಷಗಳಿಗೂ ವಿಸ್ತರಿಸ ತೊಡಗಿದೆ. ಕಾಂಗ್ರೆಸ್ ಪಾಳೆಯದಲ್ಲಿ ಮಾತ್ರ ಕಾಣುತ್ತಿದ್ದ ಟಿಕೆಟ್ ಆಕಾಂಕ್ಷಿಗಳ ಶೀತಲ ಸಮರ ಇದೀಗ ಬಿಜೆಪಿಗೂ ಅಂಟಿಕೊಂಡಿದೆ.
ಹೌದು, ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನಡುವೆ ಕಮಲ ಟಿಕೆಟ್‌ಗೆ ಪೈಪೋಟಿ ಶುರುವಾಗಿರು ವುದು ಕ್ಷೇತ್ರದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದ್ದು, ಟಿಕೆಟ್ ಕದನದಲ್ಲಿ ಗೆಲ್ಲುವ ಕುದುರೆ ಯಾರೆಂದು ಕ್ಷೇತ್ರದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಂಚಲನ ತಂದ ಡಾ.ಕೆ.ಸುಧಾಕರ್ ಹೇಳಿಕೆ: ಲೋಕಸಭಾ ಚುನಾವಣೆಗೆ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನನಗೆ ಒಂದು ರೀತಿ ಹಸಿರು ನಿಶಾನೆ ತೋರಿದ್ದಾರೆಂದು, ಮುಂದಿನ ಲೋಕ ಸಭಾ ಚುನಾವಣೆಗೆ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿರುವ ಮಾಜಿ ಆರೋಗ್ಯ ಸಚಿವ ರಾದ ಡಾ.ಕೆ.ಸುಧಾಕರ್ ಭಾನುವಾರ ಚೇಳೂರು ತಾಲೂಕಿನ ಚಾಕವೇಲು ಗ್ರಾಮದಲ್ಲಿ ನೀಡಿರುವ ಹೇಳಿಕೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಒಂದು ರೀತಿ ಸಂಚಲನ ಸೃಷ್ಠಿಸಿದೆ.
ಕಳೆದ ಸಂಕ್ರಾಂತಿಯೆಂದೇ ಎನ್‌ಡಿಎ ಮೈತ್ರಿ ಭಾಗವಾಗಿರುವ ಜೆಡಿಎಸ್ ಪಕ್ಷದ ವರಿಷ್ಠರನ್ನು ಭೇಟಿ ಬಳಿಕ ದೆಹಲಿ ಅಂಗಳದಲ್ಲಿ ಬಿಜೆಪಿ ರಾಷ್ಟ್ರೀಯ ವರಿಷ್ಠರನ್ನು ಭೇಟಿ ಮಾಡಿ ಬಂದಿರುವ ಡಾ.ಕೆ.ಸುಧಾಕರ್, ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಭರದ ತಯಾರಿ ನಡೆಸಿದ್ದು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಇದು ಸಹಜವಾಗಿಯೇ ಲೋಕಸಭಾ ಕ್ಷೇತ್ರದ ಟಿಕೆಟ್ ಕಣ್ಣಿಟ್ಟಿರುವ ಮೊತ್ತೂಬ್ಬ ಶಾಸಕ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಕಣ್ಣು ಕೆಂಪಗಾಗಿಸಿದೆ. ವಿಶ್ವನಾಥ್ ತಮ್ಮ ಪುತ್ರ ಅಲೋಕ್ ವಿಶ್ವನಾಥ್‌ಗೆ ಟಿಕೆಟ್ ಕೊಡಿಸಲು ತೆರೆಮೆರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಓಡಾಡಿ ಪಕ್ಷದ ಮುಖಂಡರನ್ನು ಅದರಲ್ಲೂ ಜೆಡಿಎಸ್ ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಅನ್ಯಪಕ್ಷಗಳ ಮುಖಂಡರಿಗೆ ಉಚಿತವಾಗಿ ತಿರುಮಲ ತಿರುಪತಿ ದರ್ಶನ ಮಾಡಿ ಮನ ವೊಲಿಸುತ್ತಿದ್ದಾರೆ. ಯಲಹಂಕ ದೊಡ್ಡ ಕ್ಷೇತ್ರವಾಗಿದ್ದು ತನ್ನ ಪುತ್ರನಿಗೆ ಟಿಕೆಟ್ ಕೊಡಿ ಎಂದು ಶಾಸಕ ವಿಶ್ವನಾಥ್ ಪಕ್ಷದ ವರಿಷ್ಠರಿಗೆ ಒತ್ತಡ ಹಾಕುತ್ತಿದ್ದಾರೆ.
ಸುಧಾಕರ್ ಜೆಡಿಎಸ್‌ನಿಂದ ಸ್ಪರ್ಧಿಸುವ ರೀತಿ ಕಾಣುತ್ತಿದೆ. ನಾನು ಕೂಡ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ನನ್ನ ಮಗನಿಗೆ ಟಿಕೆಟ್ ಕೊಡಬೇಕೆಂದು ಒತ್ತಾಯಿಸಿ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಸುಧಾಕರ್‌ಗೆ ಯಾರು ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಏಕಪಕ್ಷೀಯವಾಗಿ ವರ್ತಿಸಬಾರದು. ಸುಧಾಕರ್ ನಮ್ಮ ಪಕ್ಷದವರಾಗಿದ್ದರೆ ಮೋದಿ, ಅಮಿತ್ ಶಾ , ಹೆಸರು ಹೇಳದೇ ಎಚ್‌ಡಿಡಿ,ಎಚ್‌ಡಿಕೆ ಹೆಸರು ಏಕೆ ಹೇಳಿದರು? ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯವರೇ ಮತ್ತೆ ಸಂಸದರಾಗಬೇಕು.
-ಎಸ್.ಆರ್.ವಿಶ್ವನಾಥ್, ಯಲಹಂಕ ಶಾಸಕ
ಬಿಜೆಪಿ ಪಕ್ಷದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಹಾಗೂ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಲು ನನ್ನ ಶ್ರಮ ಹಾಗೂ ತ್ಯಾಗ ಇದೆ. ನಮಗೆ ಈಗ ಅನ್ಯಾಯವಾ ಗಿದೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ಕೊಡುವಂತೆ ಕೇಳುವುದರಲ್ಲಿ ತಪ್ಪೇನಿದೆ? ವರಿಷ್ಠರನ್ನು ಟಿಕೆಟ್ ಕೇಳದೇ ಮತ್ತೆ ಯಾರನ್ನು ಕೇಳಬೇಕು.
-ಡಾ.ಕೆ.ಸುಧಾಕರ್, ಮಾಜಿ ಸಚಿವ
– ಕಾಗತಿ ನಾಗರಾಜಪ್ಪ