ಶಿಕಾರಿಪುರ: ಈ ಲೋಕಸಭೆ ಚುನಾವಣೆ ದೇಶದ ಭವಿಷ್ಯ ರೂಪಿಸುವಂಥ ದ್ದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಕಪ್ಪನಹಳ್ಳಿ ಗ್ರಾಮದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಸಂಸದ ರಾಘವೇಂದ್ರ ಪರ ನಡೆದ ಚುನಾವಣ ಪ್ರಚಾರ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಸದೃಢಗೊಳಿಸುವ ಜತೆಗೆ ದೇಶದ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಜಗತ್ತು ಭಾರತ ದೇಶದ ಕಡೆ ನೋಡುವಂತೆ ಆಡಳಿತ ನಡೆಸಿದ್ದಾರೆ. 10 ವರ್ಷ ಸುದೀರ್ಘ ಆಡಳಿತ ನಡೆಸಿದರೂ ಪ್ರಧಾನಿ ನರೇಂದ್ರಮೋದಿ ಜನಪ್ರಿಯತೆ ಕುಗ್ಗಿಲ್ಲ. ಜನಪರ ಆಡಳಿತ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜನಮನ್ನಣೆ ಗಳಿಸಿದ್ದಾರೆ ಎಂದರು.
ನೀವು ನನ್ನನ್ನು ಶಾಸಕನಾಗಿ ಅಯ್ಕೆ ಮಾಡಿದ ಪರಿಣಾಮ ಅನೇಕ ಬಿಜೆಪಿ ಹಿರಿಯ ನಾಯಕರ ಸಹಕಾರ ಹಾಗೂ ಆಶೀರ್ವಾದದಿಂದ ರಾಜ್ಯಾಧ್ಯಕ್ಷನಾಗಿದ್ದೇನೆ.
ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾ ಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ರಾಘವೇಂದ್ರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ರೈತರಿಗಾಗಿ ಕೃಷಿ ಸಮ್ಮಾನ್ ಯೋಜನೆ, ಯುವಕ- ಯುವತಿಯರಿಗೆ ವಿಶ್ವಕರ್ಮ ಯೋಜನೆ, ಉಜ್ವಲ ಯೋಜನೆ ಸಹಿತ ಹಲವು ಜನಪರ ಯೋಜನೆ ನೀಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ತಾಲೂಕಿನಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಿದ್ದಾರೆ. ಸಚಿವ ಮಧು ಬಂಗಾರಪ್ಪ ನಮ್ಮ ಬಿಜೆಪಿ ಕಾರ್ಯಕರ್ತರನ್ನು ಚೇಲಾಗಳೆಂದು ಕರೆದಿರುವುದು ಖಂಡನೀಯ ಎಂದರು.