ಬೆಂಗಳೂರು: ಟಿಕೆಟ್ ಹಂಚಿಕೆಯಾದ ಬಳಿಕ ಸೃಷ್ಟಿಯಾಗಿರುವ ಅಸಮಾಧಾನ ಶಮನದ ಜತೆಗೆ ಚುನಾವಣಾ ಕಾವು ತೀವ್ರಗೊಳಿಸಲು ಬಿಜೆಪಿ ತಂತ್ರಗಾರಿಕೆ ಪ್ರಾರಂಭಿಸಿದ್ದು, ಏಪ್ರಿಲ್ 5ರೊಳಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳನ್ನು ಸೆಕ್ಟರ್‌ಗಳಾಗಿ ವಿಭಜಿಸಿ ಅಲ್ಲಿಗೆ ರಾಷ್ಟ್ರೀಯ ನಾಯಕರನ್ನು ಕರೆಸುವ ತಂತ್ರವನ್ನು ಬಿಜೆಪಿ ನಡೆಸಿದೆ. ಕಲಬುರಗಿ ಹಾಗೂ ಶಿವಮೊಗ್ಗ ಸೆಕ್ಟರ್‌ಗೆ ಈಗಾಗಲೇ ಪ್ರಧಾನಿ ಮೋದಿ ಭೇಟಿ ನೀಡಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆದರೆ ಈಗ ಅಸಮಾಧಾನ ತಣ್ಣಗಾಗಿಸುವ ಜತೆಗೆ ಚುನಾವಣಾ ವಾತಾವರಣ ನಿರ್ಮಾಣ ಮಾಡಬೇಕಾಗಿದೆ.
ಹೀಗಾಗಿ ದಾವಣಗೆರೆ, ಚಿತ್ರದುರ್ಗ, ಹಾವೇರಿ, ತುಮಕೂರು ಭಾಗದಲ್ಲಿ ಪ್ರಭಾವ ಬೀರುವುದಕ್ಕಾಗಿ ದಾವಣಗೆರೆಯಲ್ಲಿ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.
ಬಿಜೆಪಿ ಮೂಲಗಳ ಪ್ರಕಾರ ದಾವಣಗೆರೆಯಲ್ಲಿ ಭರ್ಜರಿ ರೋಡ್ ಶೋ ಅಥವಾ ಸಮಾವೇಶ ನಡೆಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಏಪ್ರಿಲ್ 5ರೊಳಗೆ ಮೋದಿ ಮತ್ತೆ ಕರ್ನಾಟಕಕ್ಕೆ ಭೇಟಿ ಕೊಡುವ ಸಾಧ್ಯತೆ ನಿಚ್ಚಳವಾಗಿದೆ.