Advertisement

Lok Sabha Election ದೇಶದಲ್ಲೇ ಸದ್ದು ಮಾಡುತ್ತಿರುವ ಮಂಡ್ಯ ರಾಜಕೀಯ

11:03 PM Mar 19, 2024 | Team Udayavani |

ಮಂಡ್ಯ: ಮಂಡ್ಯ ರಾಜಕಾರಣವೇ ವಿಭಿನ್ನವಾಗಿದ್ದು, ಜಿಲ್ಲೆಯ ರಾಜಕೀಯ ದೇಶದಲ್ಲೂ ಸದ್ದು ಮಾಡುತ್ತದೆ ಎಂಬ ಮಾತಿದೆ. ಘಟನಾನುಘಟಿ ನಾಯಕರು ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ. ಮೊದಲು ಕಾಂಗ್ರೆಸ್‌ ಹಿಡಿತದಲ್ಲಿದ್ದ ಮಂಡ್ಯ ಲೋಕಸಭಾ ಕ್ಷೇತ್ರ ಅನಂತರ ಜೆಡಿಎಸ್‌ ತೆಕ್ಕೆಗೆ ಜಾರಿತು.

Advertisement

ಮಂಡ್ಯ ರಾಜಕಾರಣ ದಿಲ್ಲಿ ಮಟ್ಟದಲ್ಲಿ ಸದ್ದು ಮಾಡುತ್ತದೆ. ಅದು ಹಲವಾರು ಬಾರಿ ಸಾಬೀತಾಗಿದೆ. ಇದೀಗ ಲೋಕಸಭೆ ಚುನಾವಣೆ ಎದುರಾಗುತ್ತಿರುವುದರಿಂದ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ಜಿಲ್ಲೆಯ ರಾಜಕಾರಣ ಹಲವು ಮಜಲುಗಳನ್ನು ಕಂಡಿದೆ.

ಅತೀ ಹೆಚ್ಚು ಬಾರಿ ಕಾಂಗ್ರೆಸ್‌
ಇದುವರೆಗೂ ಉಪಚುನಾವಣೆ ಸೇರಿ 20 ಚುನಾವಣೆಗಳನ್ನು ಎದುರಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 13 ಬಾರಿ ಕಾಂಗ್ರೆಸ್‌ ಗೆದ್ದಿದ್ದರೆ, ಒಂದು ಬಾರಿ ಪ್ರಜಾ ಸೋಷಿಯಲಿಸ್ಟ್‌ ಪಕ್ಷ, 5 ಬಾರಿ ಜೆಡಿಎಸ್‌ ಹಾಗೂ ಒಂದು ಬಾರಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿ ಸಿದ್ದಾರೆ. ಮೊದಲು ಕ್ಷೇತ್ರವನ್ನು ಆಳಿದ್ದು ಕಾಂಗ್ರೆಸ್‌ ಪಕ್ಷವಾಗಿದೆ. ಎಂ.ಕೆ. ಶಿವನಂಜಪ್ಪ ಅವರಿಂದ ಹಿಡಿದು ಈಗಿನ ಹಾಲಿ ಸಂಸದೆ ಸುಮಲತಾ ಅಂಬರೀಷ್‌ವರೆಗೂ ಕಾಂಗ್ರೆಸ್‌ ಪಕ್ಷ ನಿರ್ಣಾಯಕ ಪಾತ್ರ ವಹಿಸಿದೆ.

1952ರ ಮೊದಲ ಚುನಾವಣೆಯಿಂದ 1967ರವರೆಗೆ ನಾಲ್ಕು ಬಾರಿ ಎಂ.ಕೆ. ಶಿವನಂಜಪ್ಪ ಸಂಸದರಾಗಿದ್ದರು. 1968ರ ಉಪಚುನಾವಣೆಯಲ್ಲಿ ಹಾಗೂ 1971ರ 2 ಬಾರಿ ಎಸ್‌.ಎಂ. ಕೃಷ್ಣ, 1972, 1977ರಲ್ಲಿ ಕೆ. ಚಿಕ್ಕಲಿಂಗಯ್ಯ 2 ಬಾರಿ, 1980ರಲ್ಲಿ ಮತ್ತೆ ಎಸ್‌.ಎಂ. ಕೃಷ್ಣ, 1984ರಲ್ಲಿ ಕೆ.ವಿ. ಶಂಕರಗೌಡ, 1989, 1991ರಲ್ಲಿ ಜಿ. ಮಾದೇಗೌಡ, 1996ರಲ್ಲಿ ಕೆ.ಆರ್‌. ಪೇಟೆ ಕೃಷ್ಣ, 1998, 1999, 2004ರಲ್ಲಿ ಎಂ.ಎಚ್‌. ಅಂಬರೀಷ್‌ 3 ಬಾರಿ, 2009ರಲ್ಲಿ ಎನ್‌. ಚಲುವರಾಯಸ್ವಾಮಿ, 2023ರ ಉಪಚುನಾವಣೆಯಲ್ಲಿ ರಮ್ಯಾ, 2014ರಲ್ಲಿ ಸಿ.ಎಸ್‌. ಪುಟ್ಟರಾಜು ಹಾಗೂ ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಷ್‌ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪ ರ್ಧಿಸಿ ಗೆಲುವು ಸಾಧಿ ಸುವ ಮೂಲಕ ಇತಿಹಾಸ ಬರೆದಿದ್ದಾರೆ. ಬಿಜೆಪಿ ಇಲ್ಲಿ ಒಮ್ಮೆಯೂ ಗೆದ್ದಿಲ್ಲ.

ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಹಾವು ಏಣಿ ಆಟ ನಡೆಯುತ್ತಲೇ ಇದೆ. ಮೊದಲ 1952ರ ಚುನಾವಣೆಯಿಂದ 1967ರ ವರೆಗೂ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು.

Advertisement

ಅನಂತರ 1968ರ ಮೊದಲ ಉಪಚುನಾವಣೆಯಲ್ಲಿ ಎಸ್‌.ಎಂ. ಕೃಷ್ಣ ಅವರು ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿಯಿಂದ ಗೆಲುವು ಸಾಧಿ ಸುವ ಮೂಲಕ ಕಾಂಗ್ರೆಸ್‌ ಹಿಡಿತ ತಪ್ಪುವಂತೆ ಮಾಡಿದ್ದರು. 1972, 1977ರಲ್ಲೂ ಕಾಂಗ್ರೆಸ್‌ ಗೆಲುವು ಸಾಧಿ ಸಿತ್ತು. 1984ರಲ್ಲಿ ಜನತಾ ಪಕ್ಷದಿಂದ ಕೆ.ವಿ. ಶಂಕರಗೌಡ ಗೆಲುವು ಸಾಧಿ ಸುವ ಮೂಲಕ ಜನತಾ ಪರಿವಾರದ ಹಿಡಿತಕ್ಕೆ ತಂದರು. 1998ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪ ರ್ಧಿಸಿದ್ದ ನಟ ಅಂಬರೀಷ್‌ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರೆ, 1999ರ ಚುನಾವಣೆ ವೇಳೆಗೆ ಮತ್ತೆ ಕಾಂಗ್ರೆಸ್‌ಗೆ ವಾಪಸ್‌ ಆಗುವ ಅಂಬರೀಷ್‌ ಅಲ್ಲಿಯೂ ಗೆಲುವಿನ ನಾಗಾಲೋಟ ಮುಂದುವರಿಸಿದ್ದರು. ಮತ್ತೆ 2004ರಲ್ಲೂ ಅಂಬರೀಷ್‌ ಜಯ ಗಳಿಸಿದ್ದರು.

ಒಕ್ಕಲಿಗರ ಪ್ರಾಬಲ್ಯ
ಮಂಡ್ಯ ಜಿಲ್ಲೆ ಒಕ್ಕಲಿಗರ ಭದ್ರಕೋಟೆಯಾಗಿದೆ. ಲೋಕಸಭಾ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ, ಕೆ.ಆರ್‌. ಪೇಟೆ ಹಾಗೂ ಮೈಸೂರು ಜಿಲ್ಲೆಯ ಕೆ.ಆರ್‌. ನಗರ ಕ್ಷೇತ್ರಗಳನ್ನೊಳಗೊಂಡಿವೆ. ಇಲ್ಲಿ ಒಕ್ಕಲಿಗ ಮತದಾರರೇ ಮೊದಲ ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಅನಂತರ ಕುರುಬ, ಲಿಂಗಾಯತ, ಮುಸ್ಲಿಂ ಸೇರಿ ಇತರ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಮೂವರು ಸಿನೆಮಾದವರಿಗೆ ಮಣೆ
ಮಂಡ್ಯದ ಮತದಾರರು 3 ಮಂದಿ ಸಿಮೆಮಾ ನಟ-ನಟಿಯರಿಗೆ ಮಣೆ ಹಾಕಿದ್ದಾರೆ. 3 ಬಾರಿ ನಟ ಅಂಬರೀಷ್‌ ಸಂಸದರಾಗಿದ್ದರು. ಅನಂತರ 2013ರ ಉಪಚುನಾವಣೆಯಲ್ಲಿ ನಟಿ ರಮ್ಯಾ ಗೆಲ್ಲುವ ಮೂಲಕ ಮೊದಲ ಮಹಿಳಾ ಸಂಸದೆಯಾಗಿ ಆಯ್ಕೆಯಾಗಿದ್ದರು. ಅನಂತರ 2019ರಲ್ಲಿ ಹಾಲಿ ಸಂಸದೆ ಸುಮಲತಾ ಅಂಬರೀಷ್‌ ಅವರನ್ನು ಗೆಲ್ಲಿಸುವ ಮೂಲಕ ನಟರಿಗೂ ಮಣೆ ಹಾಕಿದ ಕ್ಷೇತ್ರವಾಗಿ ಬಿಂಬಿತವಾಗಿದೆ.

– ಎಚ್‌. ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next