Advertisement

ರಣರಂಗದಲ್ಲಿ ವಿರಾಟ್ ವಾರ್‌

02:36 AM May 10, 2019 | Team Udayavani |

ನವದೆಹಲಿ: ‘ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ರಜೆಯ ಮೋಜಿಗಾಗಿ ಯುದ್ಧ ನೌಕೆಯನ್ನು ಬಳಸಿದ್ದರು’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯು ಗುರುವಾರ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ. ಮೋದಿ ಹೇಳಿಕೆಯನ್ನು ಬಿಜೆಪಿ ಹಾಗೂ ಶಿವಸೇನೆ ಸಮರ್ಥಿಸಿಕೊಂಡರೆ, ಕಾಂಗ್ರೆಸ್‌ ಸೇರಿದಂತೆ ಇತರೆ ಪ್ರತಿಪಕ್ಷಗಳು ಈ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

Advertisement

ಇದರ ನಡುವೆಯೇ, ಪ್ರಧಾನಿ ಮೋದಿ ಆರೋಪವನ್ನು ನೌಕಾಪಡೆಯ ಮೂವರು ನಿವೃತ್ತ ಅಧಿಕಾರಿಗಳು ಹಾಗೂ ಲಕ್ಷದ್ವೀಪದ ಅಂದಿನ ಆಡಳಿತಾಧಿಕಾರಿ ಅಲ್ಲಗಳೆದಿದ್ದಾರೆ. ರಾಜೀವ್‌ ಗಾಂಧಿ ಮತ್ತು ಕುಟುಂಬವು ಐಎನ್‌ಎಸ್‌ ವಿರಾಟ್ ಅನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ನೌಕಾಪಡೆಯ ಮತ್ತೂಬ್ಬ ನಿವೃತ್ತ ಕಮಾಂಡರ್‌ ವಿ.ಕೆ. ಜೇಟ್ಲಿ ಎಂಬವರು, ಸಮರನೌಕೆಯ ದುರ್ಬಳಕೆ ಆಗಿದ್ದು ನಿಜ ಎಂದು ಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರ ‘ಮೋಜಿಗಾಗಿ ಯುದ್ಧನೌಕೆ’ ಹೇಳಿಕೆಯು ರಾಜಕೀಯ ವಲಯದಲ್ಲಿ ಮಾತಿನ ಯುದ್ಧವನ್ನು ತೀವ್ರಗೊಳಿಸಿದೆ.

ನಾಮ್‌ಧಾರ್‌-ಕಾಮ್‌ಧಾರ್‌: ಪ್ರಧಾನಿ ಮೋದಿ ಆರೋಪಕ್ಕೆ ಧ್ವನಿಗೂಡಿಸಿರುವ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ, ‘ಕಾಮ್‌ಧಾರ್‌ಗಳು ಭಾರತದ ಯುದ್ಧನೌಕೆಯನ್ನು ಭಯೋತ್ಪಾದನೆಯ ವಿರುದ್ಧ ಹೋರಾಡಲು ಬಳಸಿದರೆ, ನಾಮ್‌ಧಾರ್‌ಗಳು ತಮ್ಮ ವೈಯಕ್ತಿಕ ರಜೆಯ ಮೋಜಿಗೆ ಬಳಸಿದ್ದಾರೆ’ ಎನ್ನುವ ಮೂಲಕ ಕಾಂಗ್ರೆಸ್‌ನ ಕಾಲೆಳೆದಿದ್ದಾರೆ.

ಮತ್ತೂಂದು ಟ್ವೀಟ್‌ನಲ್ಲಿ ಜೇಟ್ಲಿ, ‘ಅಂದು ರಾಜೀವ್‌ಗಾಂಧಿ ಹತ್ಯೆಗೆ ಡಿಎಂಕೆ ಕಾರಣ ಎಂದಿದ್ದ ಕಾಂಗ್ರೆಸ್‌, ಈಗ ತಮಿಳುನಾಡಿನಲ್ಲಿ ಅದೇ ಪ್ರಾದೇಶಿಕ ಪಕ್ಷದೊಂದಿಗೆ ಕೈಜೋಡಿಸಿದೆ’ ಎಂದೂ ಟೀಕಿಸಿದ್ದಾರೆ.

ಟ್ಯಾಕ್ಸಿಯಂತೆ ವಾಯುಪಡೆ ವಿಮಾನ ಬಳಕೆ: ಹೇಳಿಕೆಗೆ ಸಂಬಂಧಿಸಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕರಾದ ಅಭಿಷೇಕ್‌ ಸಿಂಘ್ವಿ, ರಣದೀಪ್‌ ಸುರ್ಜೇವಾಲಾ, ಪವನ್‌ ಖೇರಾ ಮತ್ತಿತರರು ಟೀಕಾಪ್ರಹಾರ ಮಾಡಿದ್ದಾರೆ, ‘ಮೋದಿಯವರೊಬ್ಬ ಸರಣಿ ಸುಳ್ಳುಗಾರ. ಅವರ ಸುಳ್ಳನ್ನು ನೌಕಾಪಡೆಯ ನಿವೃತ್ತ ಅಧಿಕಾರಿಗಳೇ ಬಯಲು ಮಾಡಿದ್ದಾರೆ’ ಎಂದಿದು ಹೇಳಿದ್ದಾರೆ. ಜತೆಗೆ, ವಾಯುಪಡೆಯ ವಿಮಾನಗಳನ್ನು ತಮ್ಮ ವೈಯಕ್ತಿಕ ಟ್ಯಾಕ್ಸಿಯಂತೆ ಬಳಸಿಕೊಂಡಿದ್ದು ಪ್ರಧಾನಿ ಮೋದಿ. ಚುನಾವಣಾ ಟ್ರಿಪ್‌ಗಾಗಿ ವಾಯುಪಡೆ ವಿಮಾನ ಬಳಸಿರುವ ಮೋದಿ ಕೇವಲ 744 ರೂ. ಪಾವತಿಸಿರುವುದು ಆರ್‌ಟಿಐ ಮಾಹಿತಿಯಿಂದ ಬಹಿರಂಗವಾಗಿದೆೆ. ನಿಮ್ಮ ಪಾಪಗಳು ನಿಮ್ಮನ್ನು ಭಯಪಡಿಸುತ್ತಿದೆ. ಹೀಗಾಗಿ, ನೀವು ನಾಚಿಕೆ ಬಿಟ್ಟು ಬೇರೊಬ್ಬರ ಮೇಲೆ ಆರೋಪ ಹೊರಿಸುತ್ತಿದ್ದೀರಿ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಆರೋಪಿಸಿದ್ದಾರೆ.

Advertisement

ಇದೇ ವೇಳೆ, ಮಿತ್ರಪಕ್ಷ ಶಿವಸೇನೆಯು ಮೋದಿ ಬೆನ್ನಿಗೆ ನಿಂತಿದ್ದು, ‘ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ರನ್ನು ಅವಮಾನಿಸಿದ್ದಕ್ಕೆ ರಾಹುಲ್ ಗಾಂಧಿ ಈಗ ತಕ್ಕ ಬೆಲೆ ತೆರುತ್ತಿದ್ದಾರೆ. ರಾಜೀವ್‌ ಬಗ್ಗೆ ಮೋದಿ ಆಡಿದ ಮಾತುಗಳಿಂದ ಎಷ್ಟು ಅವಮಾನವಾಗಿದೆ ಎಂಬುದು ಈಗ ರಾಹುಲ್ಗೆ ಮನದಟ್ಟಾಗುತ್ತಿದೆ’ ಎಂದು ಹೇಳಿದೆ.

ಮೋದಿ ಆರೋಪ ನಿರಾಕರಿಸಿದ ನೌಕಾಪಡೆಯ ನಿವೃತ್ತ ಅಧಿಕಾರಿಗಳು: ರಾಜೀವ್‌ಗಾಂಧಿ ಅವರು ಐಎನ್‌ಎಸ್‌ ವಿರಾಟ್ ಅನ್ನು ಮೋಜಿಗಾಗಿ ಬಳಸಿದ್ದರು ಎಂಬ ಪ್ರಧಾನಿ ಮೋದಿ ಹೇಳಿಕೆಯನ್ನು ನೌಕಾಪಡೆಯ ನಿವೃತ್ತ ಅಧಿಕಾರಿಗಳು ಅಲ್ಲಗಳೆದಿದ್ದಾರೆ. 1987ರಲ್ಲಿ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅವರು ರಜೆಯ ಮೋಜಿಗಾಗಿ ಬಂದಿರಲಿಲ್ಲ. ಅದು ಅವರ 2 ದಿನಗಳ ಅಧಿಕೃತ ಪ್ರವಾಸವಾಗಿತ್ತು. ಅಂದು ಎಲ್ಲ ರೀತಿಯ ಶಿಷ್ಟಾಚಾರಗಳನ್ನೂ ಪಾಲಿಸಲಾಗಿತ್ತು. ಯಾವುದೇ ವಿದೇಶಿ ವ್ಯಕ್ತಿಯಾಗಲೀ, ಇತರೆ ಅತಿಥಿಗಳಾಗಲಿ ಯುದ್ಧ ನೌಕೆಯಲ್ಲಿರಲಿಲ್ಲ ಎಂದು ನೌಕಾಪಡೆಯ ನಿವೃತ್ತ ಮುಖ್ಯಸ್ಥ ಅಡ್ಮಿರಲ್ ಎಲ್.ರಾಮ್‌ದಾಸ್‌, ವಿರಾಟ್ ಯುದ್ಧ ನೌಕೆಯ ಕಮಾಂಡಿಂಗ್‌ ಆಫೀಸರ್‌ ಆಗಿದ್ದ ನಿವೃತ್ತ ವೈಸ್‌ ಅಡ್ಮಿರಲ್ ವಿನೋದ್‌ ಪಸ್ರಿಚಾ, ವೈಸ್‌ ಅಡ್ಮಿರಲ್ ಐ.ಸಿ.ರಾವ್‌ ಗುರುವಾರ ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರ ಹೇಳಿಕೆ ಸಂಪೂರ್ಣವಾಗಿ ತಪ್ಪಿನಿಂದ ಕೂಡಿದೆ ಎಂದು ಅಂದು ಯುದ್ಧನೌಕೆಯ ಉಸ್ತುವಾರಿ ಹೊತ್ತಿದ್ದ ವಿನೋದ್‌ ಪಸ್ರಿಚಾ ಹೇಳಿದ್ದಾರೆ. ಅಂದು ರಾಜೀವ್‌ ಅವರು ಐಡಿಎ (ದ್ವೀಪಗಳ ಅಭಿವೃದ್ಧಿ ಪ್ರಾಧಿಕಾರ) ಸಭೆಯಲ್ಲಿ ಪಾಲ್ಗೊಳ್ಳಲೆಂದು ಲಕ್ಷದ್ವೀಪಕ್ಕೆ ಹೊರಟಿದ್ದರು. ಲಕ್ಷದ್ವೀಪ ಮತ್ತು ಅಂಡಮಾನ್‌ನಲ್ಲಿ ಈ ಸಭೆ ನಡೆದಿತ್ತು. ಅವರೊಂದಿಗೆ ಯಾವೊಬ್ಬ ವಿದೇಶಿಯನೂ ಇರಲಿಲ್ಲ. ನಾನು ಆಗ ದಕ್ಷಿಣ ನೌಕಾ ಕಮಾಂಡ್‌ನ‌ ಫ್ಲ್ಯಾಗ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್ ಆಗಿದ್ದೆ ಎಂದು ಅಡ್ಮಿರಲ್ ರಾಮ್‌ದಾಸ್‌ ಹೇಳಿದ್ದಾರೆ.

ದುರ್ಬಳಕೆ ಆಗಿದೆ
ನೌಕಾಪಡೆಯ ಮತ್ತೂಬ್ಬ ನಿವೃತ್ತ ಕಮಾಂಡರ್‌ ವಿ.ಕೆ. ಜೇಟ್ಲಿ ಟ್ವೀಟ್ ಮಾಡಿ, ‘ರಾಜೀವ್‌ ಮತ್ತು ಸೋನಿಯಾಗಾಂಧಿ ಬಂಗ್ರಾಮ್‌ ದ್ವೀಪದಲ್ಲಿ ರಜೆಯ ಮಜಾ ಮಾಡಲು ಐಎನ್‌ಎಸ್‌ ವಿರಾಟ್‌ನಲ್ಲಿ ಪ್ರಯಾಣಿಸಿದ್ದರು. ಅದಕ್ಕಾಗಿ ನೌಕಾಪಡೆಯ ಸಂಪನ್ಮೂಲಗಳನ್ನು ವ್ಯಾಪಕವಾಗಿ ಬಳಸಿದ್ದರು. ಇದಕ್ಕೆ ನಾನೇ ಸಾಕ್ಷಿ. ಆ ಸಮಯದಲ್ಲಿ ನಾನು ಐಎನ್‌ಎಸ್‌ ವಿರಾಟ್‌ನಲ್ಲಿ ನಿಯೋಜಿತನಾಗಿದ್ದೆ’ ಎಂದಿದ್ದಾರೆ.

ರಜೆ ಕಳೆಯಲು ಅಲ್ಲ
ನೌಕಾಪಡೆಯ ನಿವೃತ್ತ ಅಧಿಕಾರಿಗಳ ಹೇಳಿಕೆಗೆ ಲಕ್ಷದ್ವೀಪದ ಅಂದಿನ ಆಡಳಿತಾಧಿಕಾರಿಯೂ ಧ್ವನಿಗೂಡಿಸಿದ್ದಾರೆ. ರಾಜೀವ್‌ ಮತ್ತು ಸೋನಿಯಾ ರಜೆ ಕಳೆಯಲು ಬಂದಿರಲಿಲ್ಲ ಎಂದು ವಜಾಹತ್‌ ಹಬೀಬುಲ್ಲಾ (ನಿವೃತ್ತ ಐಎಎಸ್‌ ಅಧಿಕಾರಿ) ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next