Advertisement

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

11:54 PM Apr 23, 2024 | Team Udayavani |

ಬೇಸಗೆ ಝಳದಲ್ಲಿ ಬೇಯುತ್ತಿರುವ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಲೋಕಸಭೆ ಚುನಾವಣೆಯ ಕಾವೂ ಹೆಚ್ಚಿದ್ದು, ರಾಜಧಾನಿಯ ಗದ್ದುಗೆ ಹಿಡಿಯಲು ನಡೆಯುತ್ತಿರುವ ಗುದ್ದಾಟವೂ ಬಿರುಸಾಗಿಯೇ ಇದೆ. ಕಳೆದೆರಡು ಲೋಕಸಭೆ ಚುನಾವಣೆಗಳಲ್ಲಿ ಎಲ್ಲ 7 ಕ್ಷೇತ್ರಗಳಲ್ಲಿಯೂ ವಿಜಯ ಪತಾಕೆ ಹಾರಿಸಿದ್ದ ಬಿಜೆಪಿ ಈ ಬಾರಿಯೂ ಗೆಲುವಿನ ನಗೆ ಬೀರುವ ಹುಮ್ಮಸ್ಸಿನಲ್ಲಿದೆ.

Advertisement

ಇತ್ತ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದರೂ ಕಳೆದ 10 ವರ್ಷಗಳಿಂದಲೂ ಲೋಕಸಭೆಯ ಒಂದೂ ಸ್ಥಾನವನ್ನೂ ಗೆಲ್ಲಲಾಗದ ಆಮ್‌ ಆದ್ಮಿ ಪಕ್ಷ ಈ ಬಾರಿ ಇಂಡಿಯಾ ಒಕ್ಕೂಟದ ಜತೆಗೆ ಕೈ ಜೋಡಿಸಿ ಖಾತೆ ತೆರೆದೇ ಸಿದ್ಧ ಎಂಬಂತೆ ಟೊಂಕ ಕಟ್ಟಿದೆ.  2009ರ ಚುನಾವಣೆಯಲ್ಲಿ 7ಕ್ಕೆ 7 ಕ್ಷೇತ್ರಗಳನ್ನೂ ಗೆದ್ದು ಆ ಬಳಿಕ ಹೇಳ ಹೆಸರಿಲ್ಲದಂತಾಗಿರುವ ಕಾಂಗ್ರೆಸ್‌ಗೆ ಈ ಚುನಾವಣೆ ಅಳಿವು-ಉಳಿವಿನ ಪ್ರಶ್ನೆಯಾಗಿದ್ದು 7 ಲೋಕಸಭಾ ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು  ಕಣಕ್ಕಿಳಿಸಿ, 4 ಕ್ಷೇತ್ರಗಳನ್ನು ಮಿತ್ರ ಪಕ್ಷ ಆಪ್‌ಗೆ ಬಿಟ್ಟುಕೊಟ್ಟಿದೆ.

ಇನ್ನು ಆಡಳಿತಾರೂಢ ಆಪ್‌ ಹಾಗೂ ಕೇಂದ್ರ ಸರಕಾರದ ನಡುವಿನ ವೈಮನಸ್ಸು ಮತ್ತು ಲೆಫ್ಟಿನೆಂಟ್‌ ಗವರ್ನರ್‌ ಜತೆಗೆ ಕೇಜ್ರಿವಾಲ್‌ ಸರಕಾರದ ಕಾದಾಟಗಳನ್ನು ದಿಲ್ಲಿಯ ಮತದಾರರು ನೋಡುತ್ತಲೇ ಬಂದಿದ್ದಾರೆ. ಏತನ್ಮಧ್ಯೆ ಭ್ರಷ್ಟಾಚಾರ ಆರೋಪಗಳು, ಕೇಜ್ರಿವಾಲ್‌ ಅವರ ಬಂಧನವು ಈವರೆಗಿನ ಲೆಕ್ಕಾಚಾರವನ್ನೇ ಬದಲಿಸುವ ಸಾಧ್ಯತೆಗಳಿವೆ. ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿಪಕ್ಷ ನಾಯಕರನ್ನು ಮೋದಿ ಸರಕಾರ ಹಣಿಯುತ್ತಿದೆ ಎಂಬ ವಾದ ಆಪ್‌ನತ್ತ ಜನರ ಅನುಕಂಪದ ಅಲೆ ಬೀಸಲು ಕಾರಣವಾಗುತ್ತಿದೆ. ಇನ್ನು ಅಬಕಾರಿ ನೀತಿ ಹಗರಣವನ್ನು ಮುಂದಿಟ್ಟು ಕೇಂದ್ರ ಬೀಸುತ್ತಿರುವ ಗಾಳಕ್ಕೆ ಮತದಾರ ಸಿಕ್ಕಿಬೀಳುವ ಸಾಧ್ಯತೆಯೂ ಇದೆ. ಇದೆಲ್ಲದರ ನಡುವೆ ಮೇ 25 ರಂದು ದಿಲ್ಲಿಯಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಆ ಬಳಿಕ ಬಿಜೆಪಿಯ ತೆಕ್ಕೆಗೆ ಮತ್ತೆ ರಾಜಧಾನಿ ಸಿಕ್ಕಲಿದೆಯಾ? ಆಪ್‌ಗೆ ಈ ಬಾರಿಯಾದರೂ ಖಾತೆ ತೆರೆಯಲು ಸಾಧ್ಯವಾಗಲಿದೆಯಾ? ಕಾಂಗ್ರೆಸ್‌ನ ಗತ ವೈಭವ ಮರಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಮೈತ್ರಿ ಹೊಂದಾಣಿಕೆ ಸ್ಥಿತಿ: ಬಿಜೆಪಿ ನೇತೃತ್ವದ ಎನ್‌ಡಿಎ ಮಣಿಸಲು ರಚನೆಯಾಗಿರುವ ಇಂಡಿಯಾ ಒಕ್ಕೂಟದ ಭಾಗವಾಗಿಯೇ ಆಪ್‌ ಮತ್ತು ಕಾಂಗ್ರೆಸ್‌ ಲೋಕಸಭೆ ಸೀಟು ಹಂಚಿಕೆ ಮಾಡಿಕೊಂಡಿವೆ. ಇದು ಬಿಜೆಪಿ ವಿರೋಧಿ ಮತಗಳನ್ನು ಸೆಳೆಯುವಲ್ಲಿ ಪ್ರಧಾನ ಪಾತ್ರ ವಹಿಸಲಿದೆ. ಆಪ್‌ ಮತ್ತು ಕಾಂಗ್ರೆಸ್‌ನ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳುವ ಜಾಣ ನಡೆ ಇದಾಗಿದ್ದು, ಬಿಜೆಪಿಗೆ ಎದುರಾಗಿ ಇಂಡಿಯಾ ಒಕ್ಕೂಟದಿಂದ ಜಿದ್ದಾಜಿದ್ದಿನ ಫೈಟ್‌ ನಿರೀಕ್ಷಿಸಬಹುದು. ಉಳಿದಂತೆ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಜನಪರ ಯೋಜನೆಗಳು, ರಾಜಧಾನಿಯಲ್ಲಿನ ಅಭಿವೃದ್ಧಿ ಕಾರ್ಯಗಳು ಈ ಬಾರಿ ವರವಾಗುವ ಸಾಧ್ಯತೆಯೂ ಹೆಚ್ಚಿದೆ. ಅಲ್ಲದೇ ಅವರ ಬಂಧನದ ಬಳಿಕ ಆಪ್‌ ಕಾರ್ಯಕರ್ತರು ಹಮ್ಮಿಕೊಂಡಿರುವ  ಸರಣಿ ಪ್ರತಿಭಟನೆಗಳು ಕೇಂದ್ರ ಸರಕಾರದ ವಿರುದ್ಧದ ಅಲೆಯನ್ನು ರಾಜಧಾನಿಯಲ್ಲಿ ಸೃಷ್ಟಿಸುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಜನರಿಗೆ ಈಗಾಗಲೇ ಕೇಜ್ರಿವಾಲ್‌ ಅವರ ಬಗ್ಗೆ ಸಹಾನುಭೂತಿ ಮೂಡಿರುವುದು ಕೂಡ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆಪ್‌ ಮತ್ತು ಕಾಂಗ್ರೆಸ್‌ ಮೈತ್ರಿಗೆ ಬಲ ನೀಡಲಿವೆ ಎನ್ನಬಹುದು.

ಬಿಜೆಪಿಗೂ ಸವಾಲುಗಳಿವೆ:  ಹಿಂದಿನ 2 ಬಾರಿಯಂತೆ ಈ ಬಾರಿಯೂ ದಿಲ್ಲಿಯ ಎಲ್ಲ ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಬಿಜೆಪಿಗೆ ನಿರಾಯಾಸವಂತೂ ಖಂಡಿತ ಅಲ್ಲ. ಮೈತ್ರಿ ಪಕ್ಷಗಳ ಮತ ಧ್ರುವೀಕರಣದ ಸವಾಲನ್ನು ಬಿಜೆಪಿ ಎದುರಿಸಲೇಬೇಕಿದೆ. ಚುನಾವಣೆ ಬಾಂಡ್‌ ಕುರಿತಾದ ಇತ್ತೀಚೆಗಿನ ಬೆಳವಣಿಗೆ, ಬಿಜೆಪಿ ವಿರುದ್ಧ ಕೇಳಿ ಬರುತ್ತಿರುವ ಭ್ರಷ್ಟಾಚಾರ ಆರೋಪಗಳು ಕೂಡ ಬಿಜೆಪಿ ಮುಂದಿರುವ ಪ್ರಮುಖ ಸವಾಲುಗಳು. ಇದಲ್ಲದೇ ಸ್ಥಳೀಯ ನಾಯಕರಿಗೆ ಬಿಜೆಪಿ ಮಣೆ ಹಾಕುತ್ತಿಲ್ಲ ಎಂಬ ವಾದವೂ ಇದ್ದು ಹಲವು  ಕ್ಷೇತ್ರಗಳಲ್ಲಿ ಹಾಲಿ ಸಂಸದರ ನಡೆ ಬಗ್ಗೆ ಕಾರ್ಯಕರ್ತರಿಂದ ಅಸಮಾಧಾನ ವ್ಯಕ್ತವಾಗಿದೆ. ಅದನ್ನೂ ಬಿಜೆಪಿ ಶಮನಗೊಳಿಸಬೇಕಾಗಿದೆ.

Advertisement

ಜಾತಿ ಕಾಂಬಿನೇಶನ್‌: ದಲಿತ ಮತಗಳು ಹಾಗೂ ಅಲ್ಪಸಂಖ್ಯಾಕ ಮತಗಳು ದಿಲ್ಲಿ ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಜಾಟರು, ವಾಲ್ಮೀಕಿ ಸಮುದಾಯ, ಯಾದವರು ಹಾಗೂ ದಲಿತ ಸಮುದಾಯಗಳು ಈ ಹಿಂದಿನಿಂದಲೂ ಆಪ್‌ ಅನ್ನು ಬೆಂಬಲಿಸುತ್ತಾ ಬಂದಿವೆ. ಅಲ್ಪಸಂಖ್ಯಾಕ ಸಮುದಾಯಗಳ ಒಲವೂ ಆಪ್‌ನ ಮೇಲಿದೆ. ಉಳಿದಂತೆ ಮುಸ್ಲಿಂ ಸಮುದಾಯ, ಗುಜ್ಜರ್‌ ಮತಗಳು ಬಹುತೇಕ ಕಾಂಗ್ರೆಸ್‌ ಪರವಾಗಿದ್ದರೆ ಬ್ರಾಹ್ಮಣರು, ರಜಪೂತರು, ವೈಶ್ಯರು ಸೇರಿದಂತೆ ವಿವಿಧ ಮೇಲ್ವರ್ಗ ಮತ್ತು ಮಧ್ಯಮ ವರ್ಗದ ಜಾತಿ ಮತಗಳು ಬಿಜೆಪಿ ಪರವಾಗಿವೆ ಎನ್ನಲಾಗಿದೆ.

ಈಶಾನ್ಯ ದಿಲ್ಲಿ ಕ್ಷೇತ್ರದಲ್ಲಿ  ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್‌ನನ್ನು ಕಾಂಗ್ರೆಸ್‌ಕಣಕ್ಕಿಳಿಸಿದ್ದು, ಪ್ರತಿಯಾಗಿ ಸಂಸದ ಮನೋಜ್‌ ತಿವಾರಿಗೆ ಬಿಜೆಪಿ ಟಿಕೆಟ್‌ ಘೋಷಿಸಿದೆ. ಇನ್ನೊಂದೆಡೆ ಹೊಸದಿಲ್ಲಿ ಕ್ಷೇತ್ರದಿಂದ ಮಾಜಿ ಕೇಂದ್ರ ಸಚಿವೆ ದಿ.ಸುಷ್ಮಾ ಸ್ವರಾಜ್‌ ಅವರ ಪುತ್ರಿ ಭಾನ್ಸುರಿ ಸ್ವರಾಜ್‌ ಬಿಜೆಪಿ ಅಭ್ಯರ್ಥಿಯಾಗಿ ಈ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ಅವರಿಗೆ ಎದುರಾಳಿಯಾಗಿ ಆಪ್‌ನಿಂದ ಸೋಮನಾಥ ಭಾರ್ತಿ ಅವರನ್ನು ಕಣಕ್ಕಿಳಿಸಲಾಗಿದೆ.

ಅಶ್ವಿ‌ನಿ ಸಿ. ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next