Advertisement
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರೂ ಆಗಿರುವ ಡಿ.ವಿ. ಸದಾನಂದಗೌಡ ಪ್ರತಿನಿಧಿಸುತ್ತಿರುವ ಲೋಕ ಸಭಾ ಕ್ಷೇತ್ರ ಬೆಂಗಳೂರು ಉತ್ತರ. ಹಲವು ಕಾರಣಗಳಿಂದ ಕೌತುಕದ ಕೇಂದ್ರ ಬಿಂದು ಇದು. ಪ್ರಧಾನಿ ಮೋದಿ ಅವರ ಸರಕಾರದಲ್ಲಿ ಇತ್ತೀಚಿನ ವರೆಗೆ ಮಂತ್ರಿಯಾಗಿದ್ದ ಸದಾನಂದ ಗೌಡರು ಬಹಿರಂಗವಾಗಿ ಚುನಾ ವಣಾ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಇದರೊಂದಿಗೆ ಬಿಜೆಪಿ ಈ ಬಾರಿ ಹೊಸಬರಿಗೆ ಟಿಕೆಟ್ ನೀಡುವುದು ನಿಶ್ಚಿತ ಎಂಬಂ ತಾಗಿತ್ತು. ಆದರೆ, ಕಳೆದ ವಾರವಷ್ಟೇ ಸದಾನಂದ ಗೌಡರು “ಸ್ಪರ್ಧೆಗೆ ಜನರ ಒತ್ತಾಯವಿದೆ’ ಎನ್ನುವ ಮೂಲಕ ಮತ್ತೂಮ್ಮೆ ಸ್ಪರ್ಧಿಸುವ ಇಂಗಿತ ಹೊರಹಾಕಿ ದ್ದಾರೆ.ಬೆಂಗಳೂರು ಉತ್ತರ 1999ರವರೆಗೆ (1996ರಲ್ಲಿ ಜನತಾದಳ ಗೆದ್ದದ್ದು ಹೊರತುಪಡಿಸಿದರೆ) 12 ಚುನಾವಣೆ ಗಳಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿ ಇದ್ದ ಕ್ಷೇತ್ರ. ಆದರೆ, ಕಳೆದ 4 ಚುನಾವಣೆಗಳಿಂದ ಇದು ಬಿಜೆಪಿ ಭದ್ರಕೋಟೆ ಯಾಗಿ ಮಾರ್ಪಟ್ಟಿದೆ. ಅದರಲ್ಲೂ ಕಳೆದ 3 ಚುನಾವಣೆ ಯಲ್ಲಿ ಒಕ್ಕಲಿಗ ಅಭ್ಯರ್ಥಿಗಳೇ ಜಯಶಾಲಿಯಾಗಿದ್ದಾರೆ. ಈ ಬಾರಿಯೂ ಪರಿಸ್ಥಿತಿ ಭಿನ್ನವಾಗಿರುವ ಲಕ್ಷಣಗಳಿಲ್ಲ. ಹಾಗಾಗಿ, ಬಿಜೆಪಿ- ಜೆಡಿಎಸ್ ಮೈತ್ರಿ ಹಾಗೂ ಕಾಂಗ್ರೆಸ್‌ನಿಂದ ಒಕ್ಕಲಿಗ ಅಭ್ಯರ್ಥಿಯೇ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಈ ಕ್ಷೇತ್ರವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಗೆದ್ದಿದ್ದರೆ, 3ರಲ್ಲಿ ಕಾಂಗ್ರೆಸ್ ಶಾಸಕರಿ ದ್ದಾರೆ. ಸಹಜವಾಗಿ ಕ್ಷೇತ್ರದ ಮೇಲೆ ಬಿಜೆಪಿ ಹಿಡಿತ ಹೊಂದಿದೆ.
ಈ ಬಾರಿಯ ಲೋಕ ಸಭಾ ಚುನಾ ವಣೆಗೆ ಜೆಡಿಎಸ್ ಜತೆ ಮೈತ್ರಿ ಮಾಡಿ ಕೊಂಡಿರುವ ಬಿಜೆಪಿ, ರಾಜ್ಯದಲ್ಲಿ ತನ್ನ ಈ ಹಿಂದಿನ (25 ಸ್ಥಾನಗಳ ಗೆಲುವು) ಸಾಧನೆ ಪುನರಾವರ್ತಿಸುವ ಗುರಿ ಹೊಂದಿದೆ. 2009ರಲ್ಲಿ ಚಿಕ್ಕಮಗ ಳೂರಿನ ಡಿ.ಬಿ. ಚಂದ್ರೇಗೌಡರು, 2014 ಹಾಗೂ 2019ರಲ್ಲಿ ದಕ್ಷಿಣ ಕನ್ನಡ ಮೂಲದ ಡಿ.ವಿ. ಸದಾನಂದ ಗೌಡರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡಿರುವ ಬಿಜೆಪಿ ಈ ಬಾರಿ ಯಾರನ್ನು ಕಣಕ್ಕಳಿಸಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ವಿಶೇಷ ಎಂದರೆ, ಬಿಜೆಪಿ ಈ ಕ್ಷೇತ್ರ ದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕಿಳಿಸಿಯೇ ಇಲ್ಲ. ಚಂದ್ರೇಗೌಡರಿಗಿಂತ ಮೊದಲು ಮಿಜೋರಾಂ ಮೂಲದ ಐಪಿಎಸ್ ಅಧಿಕಾರಿ ಎಚ್.ಟಿ. ಸಾಂಗ್ಲಿಯಾನರನ್ನು ಇಳಿಸಿ ಗೆಲ್ಲಿಸಿಕೊಂಡಿದ್ದು ಇದಕ್ಕೆ ಇನ್ನೊಂದು ಉದಾಹರಣೆ. ಈ ಬಾರಿ ಉಡುಪಿ-ಚಿಕ್ಕಮಗಳೂರು ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರದಲ್ಲಿ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆಗಳಿದ್ದವು. ಹಾಗಾದಲ್ಲಿ, ಉಡುಪಿ-ಚಿಕ್ಕಮಗಳೂರಿನಿಂದ ಸ್ಪರ್ಧಿಸಲು ಸಿ.ಟಿ.ರವಿ ಉತ್ಸುಕರಾಗಿದ್ದರು. ಉಡುಪಿ-ಚಿಕ್ಕಮಗಳೂರಿನಿಂದ ಶೋಭಾ ಅವರೇ ಸ್ಪರ್ಧಿಸಿದರೆ, ಬೆಂಗಳೂರು ಉತ್ತರಕ್ಕೆ ತಾನು ಬರುವ ಇಂಗಿತವನ್ನೂ ಸಿ.ಟಿ.ರವಿ ಹೊಂದಿದ್ದಾರೆ ಎನ್ನಲಾಗಿದೆ. ಏತನ್ಮಧ್ಯೆ, ಚಿಕ್ಕಬಳ್ಳಾಪುರ ಮೂಲದ ಮಾಜಿ ಸಚಿವ ಡಾ| ಕೆ. ಸುಧಾಕರ್ ಅವರೂ ಇಲ್ಲಿಂದ ಸ್ಪರ್ಧಿಸುವ ಉಮೇದಿನಲ್ಲಿದ್ದಾರೆ. ಇದೇ ವೇಳೆ, ಮಿತ್ರಪಕ್ಷ ಜೆಡಿಎಸ್‌ಗೆ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವುದಾದರೆ ಅಲ್ಲಿ ಹಾಲಿ ಸಂಸದೆ ಸುಮಲತಾ ಅಂಬರೀಷ್‌ರನ್ನು ಬೆಂಗಳೂರು ಉತ್ತರಕ್ಕೆ ಕರೆತಂದು ಕಣಕ್ಕಿಳಿಸುವ ಚಿಂತನೆಯೂ ಬಿಜೆಪಿ ಯಲ್ಲಿದೆ ಎನ್ನಲಾಗಿದೆ. ಆದರೆ, ಇನ್ನೇನು ನಿವೃತ್ತರಾದರು ಎಂದುಕೊಳ್ಳುವಷ್ಟರಲ್ಲಿ ಸದಾನಂದಗೌಡರು ಮತ್ತೆ ಉಮೇದುವಾರರಾಗುವ ಬಯಕೆ ಹೊರ ಹಾಕಿರುವುದು ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ. ಸದಾನಂದ ಗೌಡರ ಸ್ಪರ್ಧೆಗೆ ಬೆಂಗಳೂರು ಭಾಗದ ಪ್ರಭಾವಿ ಬಿಜೆಪಿ ನಾಯಕ, ಮಲ್ಲೇಶ್ವರ ಕ್ಷೇತ್ರದ ಶಾಸಕ ಡಾ| ಸಿ.ಎನ್.ಅಶ್ವತ್ಥ ನಾರಾಯಣ ಒತ್ತಾಸೆಯೂ ಇದೆ ಎನ್ನಲಾಗುತ್ತಿದೆ.
Related Articles
ಕ್ಷೇತ್ರದಲ್ಲಿ ಕಳೆದ 4 ಬಾರಿಯಿಂದ ಸೋಲುತ್ತಿರುವ ಕಾಂಗ್ರೆಸ್, ಈ ಬಾರಿ ಶತಾಯಗತಾಯ ಗೆಲ್ಲಲೇಬೇಕು ಎಂಬ ಪಣ ತೊಟ್ಟಿದೆ. ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ ಎಂದೇ ಹೇಳಲಾಗುತ್ತಿರುವ ಪ್ರಭಾವಿ ಒಕ್ಕಲಿಗ ಮುಖಂಡ, ಯಶವಂತಪುರದ ಶಾಸಕ ಎಸ್.ಟಿ. ಸೋಮಶೇಖರ್ ಗಟ್ಟಿ ನಿರ್ಧಾರ ಮಾಡಿ ಪಕ್ಷಾಂತರ ಮಾಡಿದ್ದೇ ಆದಲ್ಲಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಆದ್ಯತೆ ನೀಡುವ ಸಾಧ್ಯತೆ ಇದೆ. ಇದಲ್ಲದೆ, ಕಂದಾಯ ಸಚಿವ ಕೃಷ್ಣಬೈರೇಗೌಡರನ್ನೂ ಕಣಕ್ಕಿಳಿಸುವ ಒಲವು ಕಾಂಗ್ರೆಸ್‌ಗಿದೆ. ಆದರೆ, ಕೃಷ್ಣಬೈರೇಗೌಡರು ಲೋಕಸಭೆಗೆ ಸ್ಪರ್ಧಿಸಲು ಅಷ್ಟಾಗಿ ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ. ರಾಜ ರಾಜೇಶ್ವರಿನಗರದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದ ಕುಸುಮಾ ಹನುಮಂತರಾಯಪ್ಪ ಅವರನ್ನು ಲೋಕಸಭಾ ಕಣಕ್ಕಿಳಿಸಲು ಕಾಂಗ್ರೆಸ್‌ನ ಒಂದು ಬಣ ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಅಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್‌ನ ಏಕೈಕ ಹಾಲಿ ಸಂಸದ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಅವರ ಹೆಸರೂ ಈ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಹಾಗೊಂದು ವೇಳೆ ಸುರೇಶ್ ಬೆಂ.ಉತ್ತರದಿಂದ ಕಣಕ್ಕಿಳಿದರೆ, ಕುಸುಮಾ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಆಗುವ ಸಾಧ್ಯತೆ ಇದೆ. ಇವರ ಲ್ಲದೆ, 1996ರಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಗೆದ್ದಿದ್ದ ಸಿ. ನಾರಾಯಣಸ್ವಾಮಿ ಈ ಬಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
Advertisement
ಡಿ.ವಿ.ಸದಾನಂದಗೌಡ, ಹಾಲಿ ಸಂಸದ (ಬಿಜೆಪಿ)
ಬಿಜೆಪಿ-ಜೆಡಿಎಸ್ ಸಂಭಾವ್ಯರು
1.ಡಿ.ವಿ.ಸದಾನಂದಗೌಡ
2. ಸುಮಲತಾ
3. ಶೋಭಾ ಕರಂದ್ಲಾಜೆ
4. ಸಿ.ಟಿ.ರವಿ
5. ಡಾ|ಕೆ.ಸುಧಾಕರ್ ಕಾಂಗ್ರೆಸ್ ಸಂಭಾವ್ಯರು
1. ಎಸ್.ಟಿ.ಸೋಮಶೇಖರ್
2. ಡಿ.ಕೆ.ಸುರೇಶ್
3. ಕುಸುಮಾ ಹನುಮಂತರಾಯಪ್ಪ
4. ಕೃಷ್ಣ ಬೈರೇಗೌಡ
5. ಸಿ.ನಾರಾಯಣಸ್ವಾಮಿ -ಶೇಷಾದ್ರಿ ಸಾಮಗ