ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಹಂಚಿಕೆ ಮಾಡಿರುವ ಹಣದಲ್ಲಿ ಖೋಟಾ ನೋಟುಗಳು ಚಲಾವಣೆ ಮಾಡಿರುವ ಪ್ರಸಂಗ ಬೆಳಕಿಗೆ ಬಂದಿದ್ದು, ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಇದೀಗ ಖೋಟಾನೋಟಗಳ ಕಾರುಬಾರಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ರಾಜಕೀಯ ಪಕ್ಷಗಳು ಶತಾಯಗತಾಯ ಕ್ಷೇತ್ರದಲ್ಲಿ ಗೆಲ್ಲಬೇಕೆಂದು ಪ್ರತಿಷ್ಠೆ ಪಣಕ್ಕಿಟ್ಟು ಚುನಾವಣೆ ನಡೆಸಿ ಕ್ಷೇತ್ರದ ಮತದಾರರಿಗೆ ವಿವಿಧ ಆಸೆ, ಆಮಿಷ ನೀಡಿದ್ದು ಈ ವೇಳೆ ಮತದಾರರಿಗೆ ಹಣ ಹಂಚಿಕೆಯ ಸಂದರ್ಭದಲ್ಲಿ ರಾಜಕೀಯ ಪಕ್ಷವೊಂದು ಮತದಾರರಿಗೆ 100 ರೂ. ಮುಖ ಬೆಲೆಯ ಖೋಟೋ ನೋಟುಗಳನ್ನು ಹಂಚಿಕೆ ಮಾಡಿದೆಯೆಂಬ ಆರೋಪ ಪ್ರಬಲವಾಗಿ ಕೇಳಿ ಬಂದಿದ್ದು, ಹಣದ ಆಸೆಗೆ ಬಿದ್ದು ಮತ ಮಾರಿಕೊಂಡ ಮತದಾರರು ಈಗ ಹಣ ಚಲಾವಣೆಯಾಗದಿದ್ದರಿಂದ ಹಿಡಿಶಾಪ ಹಾಕುತ್ತಿದ್ದಾರೆ.
ಈ ಬಾರಿ ಲೋಕಸಭಾ ಚುನಾವಣೆಯ ಕಣ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ಕ್ಷೇತ್ರದ ಹಾಲಿ ಸಂಸದ ಎಂ.ವೀರಪ್ಪ ಮೊಯ್ಲಿ, ಬಿಜೆಪಿಯ ಬಿ.ಎನ್.ಬಚ್ಚೇಗೌಡ, ಉಳಿದಂತೆ ಬಿಎಸ್ಪಿ, ಸಿಪಿಎಂ ಹಾಗೂ ಪಕ್ಷೇತರರು ಕಣದಲ್ಲಿದ್ದರು. ಆದರೆ ಕಾಂಗ್ರೆಸ್, ಬಿಜೆಪಿ ನಡುವೆಯೇ ಈ ಬಾರಿ ನೇರ ಸ್ಪರ್ಧೆ ಏರ್ಪಟ್ಟಿದ್ದರಿಂದ ತಮ್ಮ ಗೆಲುವಿಗಾಗಿ ರಾಜಕೀಯ ಪಕ್ಷಗಳು ಅಡ್ಡದಾರಿ ಹಿಡಿದು ಮತದಾರರಿಗೆ ಖೋಟಾ ನೋಟುಗಳನ್ನು ವಿತರಿಸುವ ಮೂಲಕ ಮಕ್ಮಲ್ ಟೋಪಿ ಹಾಕಿರುವುದು ಈಗ ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ.
ಶನಿವಾರ ಬೆಳಕಿಗೆ: ಮತದಾನ ನಡೆದ ಎರಡು ದಿನಗಳ ಬಳಿಕ ರಾಜಕೀಯ ಪಕ್ಷಗಳು ಮತದಾರರಿಗೆ ಖೋಟಾ ನೋಟುಗಳನ್ನು ಹಂಚಿರುವುದು ಬೆಳಕಿಗೆ ಬಂದಿದೆ. ಬಹಳಷ್ಟು ಮತದಾರಿಗೆ ಜಿಲ್ಲೆಯಲ್ಲಿ ಒಂದು ಮತಕ್ಕೆ 100, 150, 200, 300 ರೂ. ಕೊಟ್ಟಿದ್ದು ಹಣದ ಹೊಳೆ ಹರಿಸಿವೆ. ಆದರೆ ಮತದಾರರಿಗೆ ಹಣ ನೀಡುವ ಸಂದರ್ಭದಲ್ಲಿ 100 ರೂ. ಮುಖ ಬೆಲೆಯ ಖೋಟಾ ನೋಟುಗಳನ್ನು ಹಣದ ಕಂತುಗಳಲ್ಲಿ ಇಟ್ಟು ವಿತರಿಸಿದ್ದಾರೆ. ಆದರೆ ಯಾರು ವಿತರಿಸಿದ್ದಾರೆಂಬುದು ಮಾತ್ರ ನಿಗೂಢವಾಗಿದೆ.
ಮತದಾರು ತಾವು ಪಡೆದ 100 ರೂ. ಮುಖ ಬೆಲೆಯ ನೋಟುಗಳು ಚಲಾವಣೆ ಆಗದಿರುವುದಕ್ಕೆ ಹಣ ಕೊಟ್ಟವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು ಕಂಡು ಬಂದಿದೆ. ಆದರೆ ಈ ವಿಚಾರವನ್ನು ಬಹಿರಂಗವಾಗಿ ಹೇಳಲು ಯಾರು ಮುಂದೆ ಬರುತ್ತಿಲ್ಲ. ಹಣ ಪಡೆದವರ ಪೈಕಿ ಬಹುತೇಕರು ಮಹಿಳೆಯರೇ ಆಗಿದ್ದಾರೆ.
ಜಾಲತಾಣಗಳಲ್ಲಿ ಖೋಟಾ ನೋಟಗಳು: ಲೋಕಸಭಾ ಚುನಾವಣೆ ಮುಗಿದ ಬಳಿಕ ರಾಜಕೀಯ ಪಕ್ಷಗಳು ವಿತರಿಸಿವೆ ಎನ್ನಲಾದ ಖೋಟಾ ನೋಟುಗಳು ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕುತೂಹಲ ಕೆರಳಿಸಿದೆ. ಈ ಬಗ್ಗೆ ಯಾರು ಕೂಡ ಮಾತನಾಡಿರುವ ಆಡಿಯೋ ಇಲ್ಲದಿದ್ದರೂ ರಾಜಕೀಯ ಪಕ್ಷಗಳು ಕ್ಷೇತ್ರದಲ್ಲಿ ಮತ ಗಳಿಕೆಗೆ ಲಕ್ಷಾಂತರ ರೂ. ಖೋಟಾ ನೋಟುಗಳನ್ನು ವಿತರಿಸಿದ್ದು, ಅವುಗಳನ್ನು ಪಡೆದ ಮತದಾರರು ಅವು ಖೋಟಾ ನೋಟು ಎಂದು ಗೊತ್ತಾದ ಮೇಲೆ ಹಣ ಹಂಚಿಕೆ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.