ಸೊಲ್ಲಾಪುರ: ಸೊಲ್ಲಾಪುರ ಮೀಸಲು ಮತ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ರಂಗೇರಿದ್ದು, ಗದ್ದುಗೆ ಗುದ್ದಾಟ ಜೋರಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ವಂಚಿತ ಬಹುಜನ ಆಘಾಡಿ ಪಕ್ಷದ ಅಭ್ಯರ್ಥಿಗಳು ಬಿಸಿಲಿನಲ್ಲಿಯೂ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಸೊಲ್ಲಾಪುರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೇಂದ್ರದ ಮಾಜಿ ಗೃಹ ಸಚಿವ ಸುಶೀಲ್‌ಕುಮಾರ ಶಿಂಧೆ, ಬಿಜೆಪಿ ಅಭ್ಯರ್ಥಿಯಾಗಿ ಗೌಡಗಾಂವ್ ಮಠದ ಪೂಜ್ಯ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಬಹುಜನ ಆಘಾಡಿ ಪಕ್ಷದ ಅಭ್ಯರ್ಥಿಯಾಗಿ ಡಾ| ಪ್ರಕಾಶ ಅಂಬೇಡ್ಕರ್ ಅವರು ಚುನಾವಣೆಗೆ ಸ್ಪರ್ಧಿಸಿದ್ದು, ಈ ಮೂವರ ನಡುವೆ ಭಾರಿ ಪೈಪೋಟಿ ನಡೆದಿದೆ. ಆಯಾ ಪಕ್ಷದ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಮತದಾರರ ಮನವೊಲಿಸಲು ಪ್ರಯತ್ನಿಸುತ್ತಿದ್ದು, ಈಗಾಗಲೇ ಒಂದು ಹಂತದ ಪ್ರಚಾರ ಮುಗಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿ, ಕಾಂಗ್ರೆಸ್ ಮತ್ತು ವಂಚಿತ ಬಹುಜನ ಆಘಾಡಿ ಪಕ್ಷದ ಮೂವರು ಅಭ್ಯರ್ಥಿಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದು, ಜಾತಿ ಮತ್ತು ಧರ್ಮದ ಲೆಕ್ಕಾಚಾರದ ಮೇಲೆ ಲೋಕಸಭಾ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಅಲ್ಲದೆ ಇದೇ ಮೊದಲ ಬಾರಿಗೆ ಸೊಲ್ಲಾಪುರ ಮತ ಕ್ಷೇತ್ರದಲ್ಲಿ ಬಿಜೆಯಿಂದ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಬಹುಜನ ಆಘಾಡಿ ಪಕ್ಷದಿಂದ ಡಾ| ಪ್ರಕಾಶ ಅಂಬೇಡ್ಕರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿಯಾದ ಕೇಂದ್ರದ ಮಾಜಿ ಗೃಹ ಸಚಿವ ಸುಶೀಲ್ ಕುಮಾರ ಶಿಂಧೆ ಅವರಿಗೆ ಭಾರಿ ತಲೇನೋವಾಗಿ ಪರಿಣಮಿಸಿದ್ದು, ಲೋಕಸಭಾ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿ ಪರಿವರ್ತನೆಗೊಂಡಿದೆ.
ಕಾಂಗ್ರೆಸ್ ಅಭ್ಯರ್ಥಿಯಾದ ಕೇಂದ್ರ ಮಾಜಿ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಅವರು ತಮ್ಮ ಪ್ರಚಾರ ಸಭೆಗಳಲ್ಲಿ ನಿಮಗೆ ಮೋದಿಯ 15 ಲಕ್ಷ ರೂ. ದೊರೆತಿದೆಯೇ, ಯಾವ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಹಾಕ್ತಿರಾ, ರೈತರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿಯಾದ ಗೌಡಗಾಂವ್ ಮಠದ ಪೂಜ್ಯ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಚಾರ ತಮ್ಮ ಸಭೆಗಳಲ್ಲಿ ದೇಶದ ರಕ್ಷಣೆಗಾಗಿ ಬಿಜೆಪಿಗೆ ಮತ ಹಾಕಿ. ಪ್ರದಾನಿ ನರೇಂದ್ರ ಮೋದಿ ಅವರು ನಮ್ಮ ದೇಶದ ಬೆನ್ನೆಲುಬಿದ್ದಂತೆ. ದೇಶದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಬೇಕು ಎಂದ ಮೋದಿ ಮತ್ತೂಮ್ಮೆ ಪ್ರದಾನಿಯಾಗಲಿದ್ದಾರೆ ಎಂದು ಹೇಳುತ್ತಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ದೇಶದ ಸಂವಿಧಾನ ಉಳಿಸದವರು ಹೇಗೆ ದೇಶ ರಕ್ಷಣೆ ಮಾಡುತ್ತಾರೆ. ಪ್ರಧಾನಿ ಮೋದಿ ಅವರು ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಜನರು ಪಾಠ ಕಲಿಸಲಿದ್ದಾರೆ ಎಂದು ಬಹುಜನ ಆಘಾಡಿ ಪಕ್ಷದ ಅಭ್ಯರ್ಥಿ ಡಾ| ಪ್ರಕಾಶ್ ಅಂಬೇಡ್ಕರಣ ಕೆಂಡ ಕಾರುತ್ತಿದ್ದಾರೆ. ಮತದಾರನ ಒಲವು ಯಾರ ಕಡೆ ಇದೆ ಎಂಬುವುದು ಯಕ್ಷಪ್ರಶ್ನೆಯಾಗಿದೆ.
ಮತದಾರರಲ್ಲಿ ಗೊಂದಲ
ಬಿಜೆಪಿ, ಕಾಂಗ್ರೆಸ್ ಮತ್ತು ವಂಚಿತ ಬಹುಜನ ಆಘಾಡಿ ಪಕ್ಷದ ಅಭ್ಯರ್ಥಿಗಳು ಆರೋಪ-ಪ್ರತ್ಯಾರೋಪಗಳ ಮಧ್ಯೆ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಈ ಬಾರಿ ಗೆಲವು ಯಾರದು? ಎಂಬುವುದರ ಬಗ್ಗೆ ಜಿಲ್ಲಾದ್ಯಂತ ಚರ್ಚೆ ನಡೆಯುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಭಾರೀ ಬೆಟ್ಟಿಂಗ್ ನಡೆದಿದೆ ಎನ್ನಲಾಗುತ್ತಿದೆ. ಈ ಬಾರಿ ಯಾವ ಪಕ್ಷಕ್ಕೆ ಬೆಂಬಲ ಕೊಡಬೇಕು? ಯಾರು ಗೆದ್ದರೆ ಸೊಲ್ಲಾಪುರ ಕ್ಷೇತ್ರ ಅಭಿವೃದ್ಧಿಯಾಗಲು ಸಾಧ್ಯ ಎಂಬ ಇತ್ಯಾದಿ ಪ್ರಶ್ನೆಗಳು ಮತದಾರರ ಮನದಲ್ಲಿದೆ.