ಮೈಸೂರು: ಶತಾಯಗತಾಯ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರವನ್ನು ಗೆಲ್ಲಲೇ ಬೇಕು ಎಂಬ ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಮೂರನೇ ಬಾರಿಗೆ ಮೈಸೂರು ಪ್ರವಾಸ ಹಮ್ಮಿಕೊಂಡಿದ್ದು ಬಿರುಸಿನ ಪ್ರಚಾರ ನಡೆಸುತ್ತಿದ್ದರೆ, ಇತ್ತ ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಮೆರೆಯುವುದಕ್ಕಾಗಿ ಪ್ರಧಾನಿ ಮೋದಿಯವರು ಮೈಸೂರು ಪ್ರವಾಸ ಹಮ್ಮಿಕೊಂಡಿದ್ದಾರೆ. ಈ ಮೂಲಕ ಹಳೇ ಮೈಸೂರು ಭಾಗದಲ್ಲಿ ಚುನಾವಣಾ ಅಖಾಡ ಕಾವೇರಿದೆ.
ತಮ್ಮ ತವರು ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆ ಯಲ್ಲೂ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ತಮ್ಮ ವರ್ಚಸ್ಸು ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ಸಿದ್ದರಾಮಯ್ಯ ಅವರು, ಈಗಾಗಲೇ ಎರಡು ಬಾರಿ ಮೈಸೂರಿಗೆ ಭೇಟಿ ನೀಡಿ ಗೆಲುವಿಗಾಗಿ ತಮ್ಮದೇ ತಂತ್ರಗಾರಿಕೆ ಹೆಣೆದಿದ್ದರು. ಇದೀಗ ಮತ್ತೂಂದು ಸುತ್ತಿನ ಪ್ರವಾಸ ಕೈಗೊಂಡು ಚಾಮರಾಜನಗರ ಮತ್ತು ಮೈಸೂರು-ಕೊಡಗು ಕ್ಷೇತ್ರ ದಲ್ಲಿ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಜೆ. ವಿಜಯೇಂದ್ರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗುರುಪಾದಸ್ವಾಮಿ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡು ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ಹೆಣೆದಿದ್ದಾರೆ.
ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಕಣ: ಮೈಸೂರು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳು ಆಡಳಿತಾರೂಢ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವ್ಯಾಪ್ತಿಗೆ ಬರುವ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಸಿಎಂಗೆ ಟಾಂಗ್ ನೀಡಲು ದೋಸ್ತಿಗಳು ಟೊಂಕ ಕಟ್ಟಿ ನಿಂತಿ ದ್ದರೆ. ಎದುರಾಳಿಗಳ ರಣತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಕೊಂಡು, ಚುನಾವಣೆ ಎದುರಿಸಲು ಸಜ್ಜಾಗಿ¨ªಾರೆ. ಇದಕ್ಕಾಗಿ ಚುನಾವಣೆ ಘೋಷಣೆಯಾದ ನಂತರ ಈಗಾಗಲೇ 7 ದಿನಗಳ ಕಾಲ ಮೈಸೂರು ಭಾಗದಲ್ಲಿ ವಾಸ್ತವ್ಯ ಹೂಡಿದ್ದ ಸಿದ್ದರಾಮಯ್ಯ, ಎರಡು ಕ್ಷೇತ್ರಗಳಲ್ಲಿ ಗೆಲ್ಲಲು ಅಗತ್ಯವಿರುವ ಮಾರ್ಗದರ್ಶನ ನೀಡಿ, ಸ್ಥಳೀಯ ಶಾಸಕರು, ಮುಖಂಡರಿಗೆ ಹೆಚ್ಚು ಲೀಡ್ ಕೊಡಿಸಬೇಕೆಂಬ ಟಾಸ್ಕ್ ನೀಡಿರುವುದಲ್ಲದೇ ಕಾಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡುತ್ತಿದ್ದಾರೆ.
ಸಿಎಂಗೆ ಗೆಲ್ಲಲೇಬೇಕಾದ ಒತ್ತಡ: ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗಿಂತಲೂ ಮುಖ್ಯವಾಗಿ ಸಿದ್ದರಾಮಯ್ಯ ಅವರು ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲ್ಲಲೇ ಬೇಕಾದ ಒತ್ತಡದಲ್ಲಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸಿದ್ದು, ಸಿಎಂ ಸಿದ್ದರಾಮಯ್ಯ ಅವರು ತವರು ಕ್ಷೇತ್ರಕ್ಕೆ ಸತತವಾಗಿ ಮೂರನೇ ಬಾರಿಗೆ ಭೇಟಿ ನೀಡುತ್ತಿರುವುದು ಇಂತದ್ದೊಂದು ಪ್ರಶ್ನೆ ಮೂಡುವಂತೆ ಮಾಡಿದೆ. ಅಲ್ಲದೇ ಈ ಹಿಂದೆ ಮೈಸೂರಿಗೆ ಆಗಮಿಸಿದ್ದ ಸಂದರ್ಭ ತಮ್ಮ ತವರು ಕ್ಷೇತ್ರ ವರುಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ಮುಖ್ಯಮಂತ್ರಿಯಾಗಿ ಉಳಿಯಬೇಕು ಎಂದರೆ ವರುಣಾದಲ್ಲಿ 60 ಸಾವಿರ ಮತಗಳ ಲೀಡ್ ಬೇಕು, ಆಗ ನನ್ನನ್ನು ಯಾರೂ ಮುಟ್ಟಲು ಆಗುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಇದು ತವರು ಕ್ಷೇತ್ರ ಗೆಲ್ಲಲು ಸಿದ್ದರಾಮಯ್ಯಗಿರುವ ಒತ್ತಡಕ್ಕೆ ಸಾಕ್ಷಿಯಾಗಿತು.
ಒಗ್ಗಟ್ಟಿಗೆ ಹುಮ್ಮಸ್ಸು ತುಂಬಲಿರುವ ಪ್ರಧಾನಿ ಮೋದಿ ಭೇಟಿ :
ಮೈಸೂರು: ಸತತ ಎರಡು ಬಾರಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿರುವುದರಿಂದ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ನಾಯಕರು ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರು ಸಾಥ್ ನೀಡುತ್ತಿದ್ದಾರೆ. ಈ ಮೈತ್ರಿಯ ಒಗ್ಗಟ್ಟಿಗೆ ಭಾನುವಾರ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತಷ್ಟು ಹುಮ್ಮಸ್ಸು ತುಂಬುವ ಕೆಲಸ ಮಾಡಲಿದ್ದಾರೆ. ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿಗಳ ಪರ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಸಂಜೆ ಏರ್ಪಡಿಸಿರುವ ಬಹಿರಂಗ ಸಮಾವೇಶದಲ್ಲಿ ಪ್ರಧಾನಿ ನರೇಂದ ಮೋದಿ ಪಾಲ್ಗೊಳ್ಳುತ್ತಿದ್ದು, ಇವರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜಿ.ಟಿ.ದೇವೇಗೌಡ ಸಾಥ್ ನೀಡಲಿದ್ದಾರೆ.
– ಸತೀಶ್ ದೇಪುರ