ಹೊಸದಿಲ್ಲಿ : 18 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 91 ಕ್ಷೇತ್ರಗಳಲ್ಲಿ 89 ಮಹಿಳಾ ಅಭ್ಯರ್ಥಿಗಳ ಸಹಿತವಾಗಿ 1,279 ಸ್ಪರ್ಧಿಗಳ ಸೆಣಸಾಟ ಕಂಡ ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನ ಇಂದು ಗುರುವಾರ ಸಾಂಗವಾಗಿ ಕೊನೆಗೊಂಡಿತು.
ಕೆಲವೆಡೆಗಳಲ್ಲಿ ಹಿಂಸೆ, ಮತದಾನ ಯಂತ್ರದಲ್ಲಿ ತಾಂತ್ರಿಕ ತೊಂದರೆ, ಬೂತ್ ವಶೀಕರಣದ ವಿಫಲ ಯತ್ನವೇ ಮೊದಲಾದ ಸಣ್ಣಪುಟ್ಟ ಘಟನೆಗಳ ಹೊರತಾಗಿಯೂ ಮೊದಲ ಹಂತದ ಲೋಕಸಭಾ ಚುನಾವಣೆ ವ್ಯವಸ್ಥಿತವಾಗಿ ಮತ್ತು ಬಹುತೇಕ ಶಾಂತಿಯುತವಾಗಿ ನಡೆಯಿತೆಂದು ವರದಿಗಳು ತಿಳಿಸಿವೆ.
ಆಂಧ್ರಪ್ರದೇಶದ ಅನಂತಪುರದ ತಾಡಪತ್ರಿ ಪಟ್ಟಣದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಮತ್ತು ಟಿಡಿಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಟಿಡಿಪಿ ಕಾರ್ಯಕರ್ತ ಎಸ್ ಭಾಸ್ಕರ್ ರೆಡ್ಡಿ ಮೃತಪಟ್ಟದ್ದು ಇಂದಿನ ಮುಖ್ಯ ವಿದ್ಯಮಾನ ಎನಿಸಿಕೊಂಡಿತು. ಇದಕ್ಕೆ ವೈಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂದು ಟಿಡಿಪಿ ಆರೋಪಿಸಿದೆ.
ಮೊದಲ ಹಂತದಲ್ಲಿ ಇಂದು ಮತದಾನ ನಡೆದ 18 ರಾಜ್ಯಗಳು : ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಚಂಡೀಗಢ, ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಉಡಿಶಾ, ಸಿಕ್ಕಿಂ, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಲ.
2 ಕೇಂದ್ರಾಡಳಿತ ಪ್ರದೇಶಗಳು : ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ.
ಇಂದು ಸಂಜೆ 5 ಗಂಟೆಯ ವರೆಗೆ ದಾಖಲಾದ ರಾಜ್ಯವಾರು ಶೇಕಡಾವಾರು ಮತದಾನ ಈ ರೀತಿ ಇದೆ (ಪಟ್ಟಿ ಅಪೂರ್ಣ) :
ಬಿಹಾರ : 50.26, ತೆಲಂಗಾಣ : 60.57, ಮೇಘಾಲಯ: 62, ಉತ್ತರ ಪ್ರದೇಶ : 59.77, ಮಣಿಪುರ : 78.20, ಲಕ್ಷದ್ವೀಪ : 65.90, ಅಸ್ಸಾಂ : 68.