Advertisement

ಬಂಗಾಲದಲ್ಲಿ ಬೆಂಕಿ; ಉಳಿದೆಡೆ ಶಾಂತ

10:10 AM Apr 26, 2019 | Team Udayavani |

ಹೊಸದಿಲ್ಲಿ: ಈ ಬಾರಿಯ ಲೋಕಸಭೆ ಚುನಾವಣೆಯ ಅತಿದೊಡ್ಡ ಹಂತ ಎಂದೇ ಬಣ್ಣಿಸಲಾಗಿದ್ದ 3ನೇ ಹಂತದ ಮತದಾನವು ಪಶ್ಚಿಮ ಬಂಗಾಲ ಹೊರತುಪಡಿಸಿದಂತೆ ಉಳಿದೆಡೆ ಶಾಂತಿಯುತವಾಗಿ ಮುಗಿದಿದೆ. 13 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 116 ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆದಿದೆ. ಶೇ.64.66 ಮತದಾನ ದಾಖಲಾಗಿದೆ.

Advertisement

ಸತತ 3ನೇ ಹಂತದ ಮತದಾನದಲ್ಲೂ ಪಶ್ಚಿಮ ಬಂಗಾಲವು ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದು, ಒಬ್ಬನ ಕೊಲೆಯಲ್ಲಿ ಅಂತ್ಯ ಗೊಂಡಿದೆ. ಮುರ್ಷಿದಾಬಾದ್‌ನಲ್ಲಿ ಮತಗಟ್ಟೆಯ ಹೊರ ಗೆ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರನ್ನು ದುಷ್ಕರ್ಮಿಗಳು ಚೂರಿ ಇರಿದು ಹತ್ಯೆಗೈದಿದ್ದಾರೆ. ಮತ್ತಿಬ್ಬರು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಇದಕ್ಕೆ ಆಡಳಿತಾರೂಢ ಟಿಎಂಸಿ ಕಾರ್ಯಕರ್ತರೇ ಕಾರಣ ಎಂದು ಕಾಂಗ್ರೆಸ್‌ ಆರೋಪಿಸಿದೆ. ಇನ್ನೊಂದೆಡೆ, ಬಂಗಾಲದ ಡೊಮೊಲ್‌ನಲ್ಲಿ 2 ಬಾಂಬ್‌ಗಳು ಪತ್ತೆಯಾಗಿವೆ. ಕೇರಳ, ಉತ್ತರಪ್ರದೇಶ, ಗೋವಾ ಮತ್ತು ಅಸ್ಸಾಂನಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿ ಲೋಪ ಕಾಣಿಸಿಕೊಂಡಿವೆ. ಉತ್ತರಪ್ರದೇಶದಲ್ಲಿ ಮತಗಟ್ಟೆ ಏಜೆಂಟ್‌ವೊಬ್ಬರು ಮಹಿಳೆಗೆ “ಸೈಕಲ್‌’ ಗುರುತಿಗೇ ಮತ ಚಲಾಯಿಸಿ ಎಂದು ಹೇಳಿದ್ದು, ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಏಜೆಂಟ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಎಸ್ಪಿ ವರಿಷ್ಠ ಮುಲಾಯಂ ಸಿಂಗ್‌ ಸೇರಿದಂತೆ ಘಟಾನುಘಟಿ ನಾಯಕರ ರಾಜಕೀಯ ಭವಿಷ್ಯವು ಇವಿಎಂಗಳಲ್ಲಿ ಭದ್ರವಾಗಿವೆ.

ಪ್ರತಿಪಕ್ಷಗಳ ಪತ್ರಿಕಾಗೋಷ್ಠಿ: ಮುಂಬಯಿಯಲ್ಲಿ ಪ್ರತಿಪಕ್ಷಗಳು ಮಂಗಳವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಚುನಾವಣಾ ಆಯೋಗದ ವಿರುದ್ಧ ವಾಗ್ಧಾಳಿ ನಡೆಸಿವೆ. ಪ್ರಧಾನಿ ಮೋದಿಯ ವರಿಗೊಂದು ನಿಯಮ, ಇತರ ಪಕ್ಷಗಳ ನಾಯಕರಿಗೊಂದು ನಿಯಮ ಅನುಸರಿಸುತ್ತಿರುವುದೇಕೆ ಎಂದು ಪ್ರಶ್ನಿಸಿವೆ. ಎನ್‌ಸಿಪಿ ನಾಯಕ ಶರದ್‌ ಪವಾರ್‌, ಆಂಧ್ರ ಸಿಎಂ ನಾಯ್ಡು ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ವಿವಿಪ್ಯಾಟ್‌ನೊಳಗೆ ಹಾವು!
ಕೇರಳದ ಕಣ್ಣೂರು ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದಕ್ಕೆ ಮಂಗಳವಾರ ವಿಶೇಷ ಅತಿಥಿಯೊಬ್ಬರ ಆಗಮನವಾಗಿತ್ತು. ಆ ಅತಿಥಿ ನೇರವಾಗಿ ವಿವಿಪ್ಯಾಟ್‌ ಯಂತ್ರದೊಳಗೆ ನುಸುಳಿ ಕುಳಿತಿತ್ತು! ಮಯ್ಯಿಲ್‌ ಕಂಡಕ್ಕಾಯಿ ಮತಗಟ್ಟೆಯಲ್ಲಿ ಮತ ದಾರರೊಬ್ಬರು ಹಕ್ಕು ಚಲಾಯಿಸುತ್ತಿದ್ದ ವೇಳೆ ವಿವಿಪ್ಯಾಟ್‌ನೊಳಗೆ ಸಣ್ಣ ಹಾವೊಂದು ಪ್ರತ್ಯಕ್ಷವಾಗಿದ್ದು, ಮತಗಟ್ಟೆ ಯಲ್ಲಿದ್ದ ಎಲ್ಲರನ್ನೂ ಬೆಚ್ಚಿಬೀಳಿಸಿತು. ಹಾವನ್ನು ಯಂತ್ರ  ದಿಂದ ಹೊರತೆಗೆದ ಬಳಿಕ ನಿಟ್ಟುಸಿರು ಬಿಟ್ಟ ಅಧಿಕಾರಿ ಗಳು ಮತ್ತು ಮತದಾರರು, ಪ್ರಕ್ರಿಯೆ ಮುಂದುವರಿಸಿದರು.

ಇಬ್ಬರ ಸಾವು: ಕೇರಳದಲ್ಲಿ ಹಕ್ಕು ಚಲಾಯಿಸಲೆಂದು ಮತ ಗಟ್ಟೆ ಮುಂದೆ ಸರತಿಯಲ್ಲಿ ನಿಂತಿದ್ದ ಇಬ್ಬರು ಹಿರಿಯ ನಾಗರಿಕರು ಕುಸಿದುಬಿದ್ದು ಸಾವಿಗೀಡಾಗಿದ್ದಾರೆ. ಅವರನ್ನು ವಿಜಯಿ(65), ಪಾಪಚ್ಚನ್‌(80) ಎಂದು ಗುರುತಿಸಲಾಗಿದೆ.

Advertisement

ಇವಿಎಂ ಬಗ್ಗೆ ಸುಳ್ಳು: ಅರೆಸ್ಟ್‌
ಮಂಗಳವಾರ ಕೇರಳದ ಮತಗಟ್ಟೆಯೊಂದರಲ್ಲಿ ಮತ ಚಲಾ ಯಿಸಿದ 21 ವರ್ಷದ ಎಬಿನ್‌ ಬಾಬು ಎಂಬ ಯುವಕನೊಬ್ಬ ಇವಿಎಂ ಯಂತ್ರದಲ್ಲಿ ಲೋಪವಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದು, ಆತನನ್ನು ಬಂಧಿಸಲಾಗಿದೆ. ನಾನು ನಿರ್ದಿಷ್ಟ ಪಕ್ಷಕ್ಕೆ ಮತ ಹಾಕಿದ್ದರೂ, ವಿವಿಪ್ಯಾಟ್‌ನಲ್ಲಿ ಬೇರೊಂದು ಪಕ್ಷವೆಂದು ತೋರಿಸುತ್ತಿದೆ ಎಂದು ಆತ ಆರೋಪಿಸಿದ್ದ. ಕೂಡಲೇ ಮತಗಟ್ಟೆ ಅಧಿಕಾರಿಗಳು ಪ್ರಾಯೋಗಿಕ ಮತ ಚಲಾವಣೆ ಮಾಡಿ ನೋಡಿದಾಗ, ಯುವಕನ ಆರೋಪ ಸುಳ್ಳೆಂದು ಗೊತ್ತಾಯಿತು.

22 ಲಕ್ಷ ಉದ್ಯೋಗ ಸೃಷ್ಟಿ: ರಾಹುಲ್‌ ಭರವಸೆ
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಒಂದೇ ವರ್ಷದಲ್ಲಿ 22 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆಶ್ವಾಸನೆ ನೀಡಿ ದ್ದಾರೆ. ಮಂಗಳವಾರ ರಾಜಸ್ಥಾ ನದಲ್ಲಿ ರ್ಯಾಲಿ ನಡೆಸಿದ ಅವರು, ಕಳೆದ 5 ವರ್ಷಗಳಲ್ಲಿ ಮೋದಿ ನೇತೃತ್ವದ ಸರಕಾರ ದೇಶದ ಜನರಿಗೆ ಅನ್ಯಾಯ ಮಾಡಿದೆ. ನಾನು ಮುಂದಿನ 5 ವರ್ಷಗಳಲ್ಲಿ ಬಡವರು, ಬುಡಕಟ್ಟು ಜನಾಂಗೀಯರು, ತುಳಿತ ಕ್ಕೊಳಗಾದವರಿಗೆ ನ್ಯಾಯ ಒದಗಿಸಲು ಬಯಸಿದ್ದೇನೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಬುಡಕಟ್ಟು ಉತ್ಸವ ನಡೆಯುವ ಬೆನೇಶ್ವರ್‌ ಧಾಮ್‌ನ ಶಿವ ದೇಗುಲಕ್ಕೂ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಮಧ್ಯಪ್ರದೇಶದಲ್ಲೂ ರ್ಯಾಲಿ ನಡೆಸಿದ ರಾಹುಲ್‌, ಮತ್ತೂಮ್ಮೆ ಚೌಕಿದಾರ್‌ ಚೋರ್‌ ಹೇ ಎಂದು ಘೋಷಿಸಿದ್ದಲ್ಲದೆ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಫೇಲ್‌ ಯುದ್ಧ ವಿಮಾನವನ್ನು ಭಾರತದಲ್ಲೇ ತಯಾರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಕೋರ್ಟ್‌ಗೆ ಸಾಧ್ವಿ ಪ್ರಜ್ಞಾ ಸಿಂಗ್‌ಅರ್ಜಿ
ತಮ್ಮ ವಿರುದ್ಧ ಸಲ್ಲಿಸಲಾಗಿರುವ ಅರ್ಜಿ ಯನ್ನು ವಜಾ ಮಾಡುವಂತೆ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಮುಂಬೈ ಕೋರ್ಟ್‌ಗೆ ಕೇಳಿಕೊಂಡಿದ್ದಾರೆ. 2008ರ ಮಾಲೇಗಾಂವ್‌ ಸ್ಫೋಟದ ಆರೋಪಿಯಾಗಿರುವ ಸಾಧ್ವಿ ಅವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಎಂದು ಮನವಿ ಮಾಡಿ ಸ್ಫೋಟದಲ್ಲಿ ಪುತ್ರನನ್ನು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ಕೋರ್ಟ್‌ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿದ ಸಾಧ್ವಿ, ಇದೊಂದು ರಾಜಕೀಯ ಅಜೆಂಡಾ ಇರುವ ಅರ್ಜಿಯಾಗಿದ್ದು, ಅದನ್ನು ವಜಾ ಮಾಡಬೇಕು ಎಂದು ಕೋರಿದ್ದಾರೆ.

ಕಲ್ಲು ತೂರಾಟ ಚಾಲಕ ಸಾವು
ಚುನಾವಣಾ ಕರ್ತವ್ಯ ಮುಗಿಸಿದ ಐಟಿಬಿಪಿ ಯೋಧರನ್ನು ಹೊತ್ತು ತೆರಳುತ್ತಿದ್ದ ವಾಹನವೊಂದರ ಮೇಲೆ ದಕ್ಷಿಣ ಕಾಶ್ಮೀರದಲ್ಲಿ ಕಿಡಿಗೇಡಿಗಳು ಏಕಾಏಕಿ ಕಲ್ಲುತೂರಾಟ ನಡೆಸಿದ್ದಾರೆ. ಪರಿಣಾಮ, ಆ ವಾಹನವು ಉರುಳಿ ಬಿದ್ದು, ಚಾಲಕ ಹಿಲಾಲ್‌ ಅಹ್ಮದ್‌ ಭಟ್‌ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ನಾಲ್ವರು ಯೋಧರೂ ಗಾಯಗೊಂಡಿದ್ದಾರೆ. ಘಟನೆ ನಡೆದೊಡನೆ ಅಲ್ಲಿಗೆ ಧಾವಿಸಿದ ಭದ್ರತಾ ಪಡೆ, ಸ್ಥಳದಲ್ಲಿದ್ದ ನೂರಾರು ಕಲ್ಲು ತೂರಾಟಗಾರರಿಂದ ಉಳಿದ ಯೋಧರನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಗುವನ್ನು ನೋಡಿಕೊಂಡ ಯೋಧ ವೈರಲ್‌!
ಮತಗಟ್ಟೆಯಲ್ಲಿ ಭದ್ರತೆಗಾಗಿ ನಿಯೋಜಿಸಿದ್ದ ಸಿಆರ್‌ಪಿಎಫ್ ಸಿಬಂದಿ ಯೊಬ್ಬರು ಪುಟ್ಟ ಮಗುವನ್ನು ಕುಳ್ಳಿರಿಸಿಕೊಂಡು ತೆಗೆಸಿಕೊಂಡ ಫೋಟೋ ವೈರಲ್‌ ಆಗಿದೆ. ಈ ಫೋಟೋ ವನ್ನು ಸಿಆರ್‌ಪಿಎಫ್ ತನ್ನ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದೆ. ಈ ಮಗು ಮತಹಾಕಲು ಇನ್ನಷ್ಟು ವರ್ಷಗಳ ವರೆಗೆ ಕಾಯಬೇಕಾಗಬಹುದು. ಆದರೆ ಮತದಾನ ಪ್ರಕ್ರಿಯೆಯನ್ನು ಸುರಕ್ಷಿತವಾಗಿ ಗಮನಿಸುತ್ತಿದೆ. ತಾಯಿ ಮತ ಹಾಕಲು ತೆರಳಿದಾಗ ಸಿಆರ್‌ಪಿಎಫ್ ಸಿಬಂದಿಯೊಂದಿಗೆ ಮಗು ಕಾಲ ಕಳೆಯುತ್ತಿದೆ ಎಂದು ಫೋಟೋಗೆ ವಿವರಣೆ ನೀಡಲಾಗಿದೆ.

ನಟ ಸನ್ನಿ ಡಿಯೋಲ್‌ ಬಿಜೆಪಿಗೆ
ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಭೇಟಿ ಬೆನ್ನಲ್ಲೇ ಬಾಲಿವುಡ್‌ ನಟ ಸನ್ನಿ ಡಿಯೋಲ್‌ ಮಂಗಳ ವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸನ್ನಿಗೆ ಪಂಜಾಬ್‌ನ ಗುರುದಾಸ್ಪುರದ ಟಿಕೆಟ್‌ ನೀಡ ಲಾ ಗಿದೆ. ಇದೇ ವೇಳೆ ಮಾತನಾಡಿದ ಅವರು, ನನ್ನ ತಂದೆ (ಧರ್ಮೇಂದ್ರ) ಅವರು ಅಟಲ್‌ಜೀ ಜತೆ ಬಾಂಧವ್ಯ ಹೊಂದಿದ್ದಂತೆ, ನಾನು ಮೋದಿಜೀ ಜತೆ ಕೈಜೋಡಿಸುತ್ತೇನೆ. ಈ ಕುಟುಂಬ(ಬಿಜೆಪಿ)ಕ್ಕೆ ಏನೇನು ಮಾಡಲು ಸಾಧ್ಯವೋ ಅದನ್ನು ಮಾಡುತ್ತೇನೆ ಎಂದಿದ್ದಾರೆ. ಇದೇ ವೇಳೆ, ಗಾಯಕ ಹನ್ಸರಾಜ್‌ ಹನ್ಸ್‌ ಅವರಿಗೆ ಬಿಜೆಪಿ ಮಂಗಳವಾರ ವಾಯವ್ಯ ದಿಲ್ಲಿದಿಲ್ಲಿ ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡಿದೆ. ಇವರು ಆಪ್‌ನ ಗುಗ್ಗನ್‌ ಸಿಂಗ್‌, ಕಾಂಗ್ರೆಸ್‌ನ ರಾಜೇಶ್‌ ಲಿಲೋಥಿಯಾ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಮುಸ್ಲಿಮರು, ಕೆಲವು ರಾಜಕೀಯ, ಧಾರ್ಮಿಕ ಸಂಸ್ಥೆಗಳು ಬಳಸುತ್ತಿರುವ ಹಸುರು ಧ್ವಜಗಳಿಗೆ ಚುನಾವಣಾ ಆಯೋಗ ನಿಷೇಧ ಹೇರಬೇಕು. ಏಕೆಂದರೆ, ಈ ಧ್ವಜವನ್ನು ನೋಡಿದರೆ ಪಾಕಿಸ್ತಾನದಲ್ಲಿ ಬಳಸಲಾಗುವ ಧ್ವಜ ಎಂಬ ಭಾವನೆ ಬರುತ್ತದೆ ಮತ್ತು ಅದು ದ್ವೇಷವನ್ನು ಹಬ್ಬಿಸುತ್ತದೆ.
ಗಿರಿರಾಜ್‌ ಸಿಂಗ್‌, ಬಿಜೆಪಿ ನಾಯಕ

ಯೋಗೀಜಿಗೆ ಹೇಳಿ, ನಾನು ಅವರ ಅಪ್ಪನಿಗೆ ಸಮ. 2008ರ ಬಾಟ್ಲಾ ಹೌಸ್‌ ಎನ್‌ಕೌಂಟರ್‌ ಬಗ್ಗೆ ಸಿಎಂ ಯೋಗಿ ಬಹಿರಂಗ ಚರ್ಚೆಗೆ ಬರಲಿ. ಈ ಚರ್ಚೆ ಗೋಶಾಲೆಯಲ್ಲಿ ನಡೆದರೆ ಇನ್ನೂ ಒಳ್ಳೆಯದು. ಏಕೆಂದರೆ, ಗೋವು ನಮ್ಮ ಜತೆಗಿದೆಯೋ, ಅವರ ಜೊತೆಗಿದೆಯೋ ಎಂಬುದೂ ಆಗ ಸ್ಪಷ್ಟವಾಗುತ್ತದೆ.
ಸಲ್ಮಾನ್‌ ಖುರ್ಷಿದ್‌, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next