ನವದೆಹಲಿ:ಕರ್ನಾಟಕ, ಸೇರಿದಂತೆ ದೇಶದ 15 ರಾಜ್ಯಗಳ 117 ಲೋಕಸಭಾ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಮಂಗಳವಾರ ಮತದಾನ ನಡೆಯುತ್ತಿದೆ. ಸುಮಾರು 85ಲಕ್ಷಕ್ಕೂ ಅಧಿಕ ಮತದಾರರು ಮತಚಲಾಯಿಸಲಿದ್ದಾರೆ. ದೇಶದ ಮೂರನೇ ಹಂತದ ಲೋಕಸಮರದಲ್ಲಿ ಮತದಾರರು 1640 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
3ನೇ ಹಂತದ ಮತದಾನದಲ್ಲಿ ದೇಶಾದ್ಯಂತ 4ಗಂಟೆವರೆಗೆ ಶೇ.51ರಷ್ಟು ಮತದಾನವಾಗಿದೆ. ಅಸ್ಸಾಂ ಮತ್ತು ಪಶ್ಚಿಮಬಂಗಾಳದಲ್ಲಿ ದಾಖಲೆಯ ಮತದಾನವಾಗಿದೆ. ಅಸ್ಸಾಂನಲ್ಲಿ 3ಗಂಟೆವರೆಗೆ ಶೇ.62.13ರಷ್ಟು ಹಾಗೂ ಪಶ್ಚಿಮಬಂಗಾಳದಲ್ಲಿ ಶೇ.66.81ರಷ್ಟು ಮತದಾನವಾಗಿದೆ.
ಪಶ್ಚಿಮಬಂಗಾಳದಲ್ಲಿ ಕೈ ಕಾರ್ಯಕರ್ತನ ಹತ್ಯೆ:
ಚುನಾವಣಾ ದ್ವೇಷದ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳದ ಮುರ್ಷಿದಾಬಾದ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಪಿಯಾರುಲ್ ಶೇಕ್ ಎಂಬಾತ ಘರ್ಷಣೆಯಲ್ಲಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. ಟಿಎಂಸಿ ಕಾರ್ಯಕರ್ತರು ಚೂರಿಯಿಂದ ಇರಿದು ಹತ್ಯೆಗೈದಿರುವುದಾಗಿ ಕಾಂಗ್ರೆಸ್ ಆರೋಪಿಸಿದೆ. ಘಟನೆ ಬಗ್ಗೆ ಕೂಡಲೇ ವರದಿ ನೀಡುವಂತೆ ಮುರ್ಷಿದಾಬಾದ್ ಜಿಲ್ಲಾಧಿಕಾರಿಗೆ ಚುನಾವಣಾ ಆಯೋಗ ಮನವಿ ಮಾಡಿಕೊಂಡಿದೆ.
ಬಿಹಾರ ಶೇ.46.94, ಗೋವಾ ಶೇ.55.88, ಗುಜರಾತ್ ಶೇ.47.69, ಜಮ್ಮು-ಕಾಶ್ಮೀರ ಶೇ.10.04, ಕರ್ನಾಟಕ ಶೇ.49.13, ಕೇರಳ ಶೇ.52.92, ಮಹಾರಾಷ್ಟ್ರ ಶೇ.42.07, ಒಡಿಶಾ ಶೇ.42.97, ತ್ರಿಪುರಾ ಶೇ.54.52, ಉತ್ತರಪ್ರದೇಶ ಶೇ.42.52, ಛತ್ತೀಸ್ ಗಢ ಶೇ.53.85, ದಾದ್ರಾ ಮತ್ತು ನಗರ್ ಹವೇಲಿ ಶೇ.49.64, ದಮನ್ ಮತ್ತು ದಿಯು ಶೇ.53.72.