Advertisement

ಇಂದು ಏಳನೇ ಹಂತದ ಲೋಕ ಮತದಾನ

09:43 AM May 19, 2019 | Team Udayavani |

ಹೊಸದಿಲ್ಲಿ: ಸತತ ಒಂದೂವರೆ ತಿಂಗಳಿನ ಬಳಿಕ ದೇಶದಲ್ಲಿ ಚುನಾವಣೆ ಮುಕ್ತಾಯ ಹಂತ ತಲುಪಿದೆ.
ರವಿವಾರ 7 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ 59 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇದರಲ್ಲಿ ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಾಣಸಿಯೂ ಸೇರಿದೆ. ಉತ್ತರ ಪ್ರದೇಶ ಮತ್ತು ಪಂಜಾಬ್‌ಗಳ ತಲಾ 13, ಪಶ್ಚಿಮ ಬಂಗಾಲದ 9, ಮಧ್ಯಪ್ರದೇಶ ಮತ್ತು ಬಿಹಾರಗಳ ತಲಾ 8, ಹಿಮಾಚಲ ಪ್ರದೇಶದ 4, ಝಾರ್ಖಂಡ್‌ನ‌ 3, ಚಂಡೀಗಢದ 1 ಕ್ಷೇತ್ರವೂ ಸೇರಿವೆ. ಮೇ 23ರಂದು ಫ‌ಲಿತಾಂಶ ಪ್ರಕಟವಾಗಲಿದೆ.

Advertisement

ರಾಜ್ಯದಲ್ಲೂ ಉಪಚುನಾವಣೆ
ಕರ್ನಾಟಕದಲ್ಲಿ ಡಾ| ಉಮೇಶ್‌ ಜಾಧವ್‌ ರಾಜೀನಾಮೆಯಿಂದ ತೆರವಾದ ಚಿಂಚೋಳಿ ಮತ್ತು ಸಿ.ಎಸ್‌. ಶಿವಳ್ಳಿ ಅವರ ನಿಧನದಿಂದ ತೆರವಾಗಿದ್ದ ಕುಂದಗೋಳ ವಿಧಾನಸಭೆ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಯುತ್ತಿದೆ.

ಮತಗಟ್ಟೆ ಸಮೀಕ್ಷೆಗಳತ್ತ ದೃಷ್ಟಿ
ಬೆಂಗಳೂರು: ರವಿವಾರ ಸಂಜೆ ಕೊನೆ ಹಂತದ ಮತದಾನ ಮುಗಿಯುತ್ತಿದ್ದಂತೆ ಮತದಾನೋತ್ತರ ಸಮೀಕ್ಷೆಗಳ ಮಹಾಪೂರ ಹರಿಯಲಿದೆ.

ರಾಜ್ಯದಲ್ಲೂ ವಿಧಾನಸಭೆಯಲ್ಲಿ ಸಂಖ್ಯಾಬಲ ದೃಷ್ಟಿಯಿಂದ ಮಹತ್ವದ್ದೆನಿಸಿರುವ ಕುಂದಗೋಳ, ಚಿಂಚೋಳಿ ವಿಧಾನಸಭೆ ಉಪಚುನಾವಣೆಗಳ ಸಮೀಕ್ಷೆ ಬಗ್ಗೆಯೂ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ನಾಯಕರು ಕಾತರರಾಗಿದ್ದಾರೆ. ಎ. 18 ಮತ್ತು 24ರಂದು 2 ಹಂತಗಳಲ್ಲಿ ಮತದಾನ ನಡೆದಿತ್ತು.

ದೇಶಾದ್ಯಂತ 7 ಹಂತಗಳಲ್ಲಿ ಮತದಾನವಿದ್ದ ಕಾರಣ ಮತದಾನೋತ್ತರ ಸಮೀಕ್ಷೆಗಳು ಬಹಿರಂಗವಾಗಲಿಲ್ಲ. ಹಾಗಿದ್ದರೂ ಮತದಾನ ಪ್ರಮಾಣ, ವಿಧಾನಸಭಾ ಕ್ಷೇತ್ರವಾರು ಮತದಾನದ ಅಂಕಿಸಂಖ್ಯೆ, ಹಿಂದಿನ ಫ‌ಲಿತಾಂಶ ಮತ್ತಿತರ ಅಂಶಗಳು ಮತ್ತು ಬೂತ್‌ ಮಟ್ಟದ ಕಾರ್ಯಕರ್ತರ ಮಾಹಿತಿ ಆಧರಿಸಿ ಪಕ್ಷಗಳ ನಾಯಕರು ತಮ್ಮದೇ ಲೆಕ್ಕಾಚಾರದಲ್ಲಿದ್ದಾರೆ.

Advertisement

ರಾಜ್ಯದಲ್ಲಿ ಬಿಜೆಪಿಯ 15 ಸಂಸದರಿದ್ದರೆ (ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್‌ ನಿಧನದಿಂದ ಬೆಂಗಳೂರು ದಕ್ಷಿಣ ಕ್ಷೇತ್ರ ತೆರವಾಗಿತ್ತು) ಕಾಂಗ್ರೆಸ್‌ 10 ಮತ್ತು ಜೆಡಿಎಸ್‌ನ ಇಬ್ಬರು ಸಂಸದರಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಮತದಾನ ಪೂರ್ವ ಮೈತ್ರಿ ಮಾಡಿಕೊಂಡಿವೆ. ಬಿಜೆಪಿಯು ಈ ಬಾರಿ 22 ಸ್ಥಾನ ಗೆಲ್ಲುವ ಗುರಿ ಹೊಂದಿದೆ.

ಈ ಮಧ್ಯೆ ಬಿಜೆಪಿಯು ಕುಂದಗೋಳ, ಚಿಂಚೋಳಿ ವಿಧಾನಸಭೆ ಉಪಚುನಾವಣೆ ಫ‌ಲಿತಾಂಶದ ಬಗೆಗೂ ಕಾತರದಿಂದಿದೆ. ವಿಧಾನಸಭೆಯಲ್ಲಿ ಶಾಸಕರ ಬಲ ವೃದ್ಧಿ ದೃಷ್ಟಿಯಿಂದ ಈ ಎರಡೂ ಸ್ಥಾನಗಳ ಗೆಲುವು ಮಹತ್ವದ್ದು.

 

Advertisement

Udayavani is now on Telegram. Click here to join our channel and stay updated with the latest news.

Next