ಲಕ್ಷದ್ವೀಪದಂತೆಯೇ ದೇಶದ ಮತ್ತೂಂದು ದ್ವೀಪ ಸಮೂಹ ಅಂಡಮಾನ್ ಮತ್ತು ನಿಕೋಬರ್ ದ್ವೀಪ ಸಮೂಹ. ಇದುವರೆಗೆ ಒಟ್ಟು 17 ಬಾರಿ ಚುನಾವಣೆಯಾಗಿದೆ. 1952-57, 1957-62, 1962-67 ಈ ಸಾಲಿನಲ್ಲಿ ಕೇಂದ್ರ ಸರ್ಕಾರವೇ ಜನಪ್ರತಿನಿಧಿ ಸ್ಥಾನಕ್ಕೆ ಕ್ರಮವಾಗಿ ಜಾನ್ ರಿಚರ್ಡ್‌ಸನ್, ಲಚ್‌ಮಾನ್ ಸಿಂಗ್, ನಿರಂಜನ್ ಲಾಲ್‌ರನ್ನು ನೇಮಿಸಿತ್ತು.
1967-71ನೇ ಸಾಲಿನಿಂದ ಅಂಡಮಾನ್ ಮತ್ತು ನಿಕೋಬರ್ ದ್ವೀಪ ಸಮೂಹದ ಜನರೇ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಪದ್ಧತಿ ಶುರುವಾಯಿತು. 1971-77ರ ವರೆಗೆ ಕಾಂಗ್ರೆಸ್‌ನ ಕೆ.ಆರ್.ಗಣೇಶ್ ಲೋಕಸಭೆಯ ಸದಸ್ಯರಾಗಿ ಅಲ್ಲಿಂದ ಗೆದ್ದಿದ್ದರು.
1977-1999ರ ವರೆಗೆ ಕಾಂಗ್ರೆಸ್‌ನ ಮನೋರಂಜನ್ ಭಕ್ತ ಸತತ ಏಳು ಬಾರಿ ಗೆದ್ದಿದ್ದರು. 1999-2004ನೇ ಅವಧಿಯ ಹದಿಮೂರನೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿಷ್ಣು ಪದ ರಾಯ್ ಗೆದ್ದಿದ್ದರು. 2004-2009ನೇ ಸಾಲಿನ 14ನೇ ಸಾಲಿನ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮನೋರಂಜನ್ ಭಕ್ತ ಮತ್ತೆ ಗೆದ್ದಿದ್ದರು. 2009 ಮತ್ತು 2014ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿಷ್ಣು ಪದ ರಾಯ್ ಗೆದ್ದಿದ್ದಾರೆ. ದ್ವೀಪ ಸಮೂಹದಲ್ಲಿ ಪಶ್ಚಿಮ ಬಂಗಾಳ ವಿಶೇಷವಾಗಿ ಬಂಗಾಳಿ ಸಮುದಾಯದ ಪ್ರಭಾವ ಹೆಚ್ಚು ಎದ್ದುಕಾಣುತ್ತದೆ.
ಇಲ್ಲಿ ಒಟ್ಟು ಮೂರು ಜಿಲ್ಲೆಗಳಿವೆ, 6 ಉಪ ವಿಭಾಗಗಳು, 9 ತಾಲೂಕು, 69 ಗ್ರಾಮ ಪಂಚಾಯತ್‌ಗಳು, 7 ಪಂಚಾಯತ್ ಸಮಿತಿಗಳು, 2 ಜಿಲ್ಲಾ ಪರಿಷತ್‌ಗಳು ಇವೆ.