ಮೈಸೂರು: ಅಳಿಯನಿಗೆ ಟಿಕೆಟ್ ಕೈತಪ್ಪಿದ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಚಾಮರಾಜನಗರ ಸಂಸದ ವಿ ಶ್ರೀನಿವಾಸಪ್ರಸಾದ್ ಅವರನ್ನು ಇಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಸಿಎಂ ಸಿದ್ದರಾಮಯ್ಯನವರು ಶ್ರೀನಿವಾಸಪ್ರಸಾದ್ ರನ್ನು ಭೇಟಿಯಾದ ಒಂದು ದಿನದ ಬಳಿಕ ಬಿಎಸ್ ವೈ ಭೇಟಿಯಾಗಿದ್ದಾರೆ.
ಇಂದಿನ ಬಿಜೆಪಿ ಸಮಾವೇಶದಲ್ಲಿ ನರೇಂದ್ರ ಮೋದಿ ಜೊತೆ ವೇದಿಕೆ ಹಂಚಿಕೊಳ್ಳುವಂತೆ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಇದಕ್ಕೆ ಶ್ರೀನಿವಾಸಪ್ರಸಾದ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ನಾನು ಸಕ್ರಿಯ ರಾಜಕಾರಣದಿಂದ ನಿವೃತ್ತನಾಗಿದ್ದೇನೆ. ಹಾಗಾಗಿ ಸಮಾವೇಶದಲ್ಲಿ ಭಾಗಿಯಾಗುವುದಿಲ್ಲ. ಮೋದಿ ಜಾಗತಿಕ ನಾಯಕರು. ಅವರ ಜೊತೆ ಐದು ವರ್ಷ ಸಂಸದನಾಗಿ ಸೇವೆ ಸಲ್ಲಿಸಿದ್ದೇನೆ. ಮೋದಿ ನಾನು ಕಂಡ ಅತ್ಯಂತ ಒಳ್ಳೆಯ ಪ್ರಧಾನಮಂತ್ರಿ. ಮೋದಿ, ಬಿಜೆಪಿ ವಿರುದ್ಧ ನಾನು ಏನನ್ನೂ ಮಾತನಾಡುವುದಿಲ್ಲ ಎಂದು ನಗರ ಸಂಸದರು ಹೇಳಿದ್ದಾರೆ.
ಬಳಿಕ ಮಾಧ್ಯಮ ಪ್ರತಿನಿಧಿಗಳನ್ನು ದೂರವಿಟ್ಟು ಶ್ರೀನಿವಾಸಪ್ರಸಾದ್ ಜೊತೆ ಪ್ರತ್ಯೇಕವಾಗಿ ಯಡಿಯೂರಪ್ಪ ಮಾತುಕತೆ ನಡೆಸಿದರು. ಕೊಠಡಿಯ ಬಾಗಿಲು ಬಂದ್ ಮಾಡಿಕೊಂಡು ರಹಸ್ಯವಾಗಿ ಮಾತುಕತೆ ನಡೆಸಿದರು.
ಬಳಿಕ ಮಾತನಾಡಿದ ಬಿಎಸ್ವೈ, ಸಂಸದ ಶ್ರೀನಿವಾಸಪ್ರಸಾದ್ ಹಿರಿಯ ನಾಯಕರು. ಪ್ರಧಾನಿ ನರೇಂದ್ರ ಮೋದಿಯವರ ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದೇನೆ. ಬಿಜೆಪಿಯ ಸಂಸದನಾಗಿ ಐದು ನಿಮಿಷ ಬಂದು ಹೋಗಿ ಎಂದು ಮನವಿ ಮಾಡಿದೆ, ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಶ್ರೀನಿವಾಸಪ್ರಸಾದ್ ಅವರು ಬಂದು ಮೋದಿಗೆ ಶುಭಾಶಯ ಕೋರಲಿದ್ದಾರೆ ಎಂದರು.
ಇಂದಿನ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗುವ ವಿಚಾರದಲ್ಲಿ ಅಡ್ಡಗೋಡೆ ಮೇಲೆ ದೀಪವಿಟ್ಟ ಸಂಸದ ವಿ ಶ್ರೀನಿವಾಸಪ್ರಸಾದ್ ಅವರು, ಬಿಜೆಪಿ ಸಮಾವೇಶಕ್ಕೆ ಬರುವಂತೆ ಆಹ್ವಾನ ಕೊಟ್ಟಿದ್ದಾರೆ. ಮನೆಗೆ ಬಂದಿದ್ದರು, ಮನೆಗೆ ಬಂದವರನ್ನು ಸೌಜನ್ಯದಿಂದ ಬರಮಾಡಿಕೊಳ್ಳುವುದು ಕರ್ತವ್ಯ. ಕಾರ್ಯಕ್ರಮಕ್ಕೆ ಬರುವಂತೆ ಯಡಿಯೂರಪ್ಪ ಕರೆದಿದ್ದಾರೆ. ಖಡಾ ಖಂಡಿತವಾಗಿ ಬರಲು ಆಗುವುದಿಲ್ಲವೆಂದು ಹೇಳಲು ಆಗುವುದಿಲ್ಲ. ಸೌಜನ್ಯದಿಂದ ಬಂದಾಗ ಪ್ರೀತಿಯಿಂದ ಮಾತನಾಡಿದ್ದೇನೆ. ಕಾರ್ಯಕ್ರಮಕ್ಕೆ ಹೋಗುವುದು ಬಿಡುವುದು ನಮ್ಮ ತೀರ್ಮಾನ ಎಂದರು.