Advertisement
ಚುನಾವಣೆಯ ನಂತರ ಸಮ್ಮಿಶ್ರ ಸರ್ಕಾರ ಮುಂದುವರಿಯಬೇಕೆಂದರೆ ಮಾಜಿ ಪ್ರಧಾನಿ ದೇವೇಗೌಡ, ಅವರ ಮೊಮ್ಮಕ್ಕಳಾದ ನಿಖೀಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಗೆಲ್ಲುವಂತೆ ನೋಡಿಕೊಳ್ಳಬೇಕೆಂಬ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಮೊದಲಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಅಧಿಕೃತ ಪ್ರಚಾರ ಆರಂಭವಾದ ನಂತರ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿರುವ ನಾಲ್ಕು ಕ್ಷೇತ್ರಗಳ ಪೈಕಿ ಒಂದರಲ್ಲಿ ಮಾತ್ರ ಗೆಲ್ಲುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ನಡೆಸಿರುವ ಆಂತರಿಕ ಸಮೀಕ್ಷೆಯಿಂದ ತಿಳಿದು ಬಂದಿದೆ.
ಹಾಸನ ಹಾಗೂ ತುಮಕೂರಿನಲ್ಲಿ ಸ್ಪರ್ಧೆ ಮಾಡಿರುವ ಮೈತ್ರಿ ಅಭ್ಯರ್ಥಿಗಳಾದ ದೇವೇಗೌಡ, ನಿಖೀಲ್ ಹಾಗೂ ಪ್ರಜ್ವಲ್‌ರ ಸೋಲು ಗೆಲುವಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೈತ್ರಿ ಸರ್ಕಾರದಲ್ಲಿ ಸಚಿವರಾಗಿರುವ ಕೆಲವು ಕಾಂಗ್ರೆಸ್ ನಾಯಕರು, ಗೌಡರ ಕುಟುಂಬ ದವರ ಸೋಲು-ಗೆಲುವು ಸರ್ಕಾರದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಗೌಡರ ಕುಟುಂಬದ ಮೂವರು ಚುನಾವಣೆಗೆ ಸ್ಪರ್ಧಿಸಿರುವುದು ಒಂದು ಗುಂಪಿನ ಅಸಮಾಧಾನಕ್ಕೆ ಕಾರಣವಾಗಿದ್ದು, ಅದೇ ಅಸಮಾಧಾನ ಬಂಡಾಯದರೂಪದಲ್ಲಿ ಮುಂದುವರಿದಿದೆ.
Related Articles
Advertisement
ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ನಾಯಕರ ಎಚ್ಚರಿಕೆಗೂ ಬಗ್ಗದೆ ಬಹಿರಂಗವಾಗಿ ಪ್ರಚಾರ ನಡೆಸುತ್ತಿರುವುದು ರಾಜ್ಯ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಮಂಡ್ಯದಲ್ಲಿ ನಿಖೀಲ್ ಕುಮಾರಸ್ವಾಮಿ ಪರವಾಗಿ ಪ್ರಚಾರ ಕೈಗೊಳ್ಳಲು ಮಂಡ್ಯ ಕಾಂಗ್ರೆಸ್ ನಾಯಕರು ನಿರಾಕರಿಸುತ್ತಿರುವುದರ ಹಿಂದೆ ಕಾಂಗ್ರೆಸ್ ಶಾಸಕಾಂಗ
ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪರೋಕ್ಷ ಬೆಂಬಲ ಇದೆ ಎಂಬ ಮಾತುಗಳು ಎರಡೂ ಪಕ್ಷಗಳ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಆರಂಭದಲ್ಲಿ ಮೈತ್ರಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಬಂದಾಗ ಸಿದ್ದರಾಮಯ್ಯನವರು ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಪರವಾಗಿ ಕೆಲಸ ಮಾಡುವಂತೆ ಪಕ್ಷದ ಜಿಲ್ಲಾ ಮುಖಂಡರನ್ನು ಮೂರು ಬಾರಿ ಕರೆಸಿ, ಸಂಧಾನ ಮಾಡುವ ಪ್ರಯತ್ನ ಮಾಡಿದ್ದರು. ಆದರೆ, ಮಂಡ್ಯದ ಅಭ್ಯರ್ಥಿ ನಿಖೀಲ್ ಪರವಾಗಿ ಸಂಧಾನಕ್ಕೆ ಮುಂದಾಗದಿರುವುದು ಮೈತ್ರಿ ನಾಯಕರ ಅನುಮಾನ
ಹೆಚ್ಚಾಗಲು ಕಾರಣವಾಯಿತು. ರಾಹುಲ್‌ರಿಂದ ಬಂತು ಸೂಚನೆ: ಸಿದ್ದರಾಮಯ್ಯ ಅವರು ಮಂಡ್ಯದ ಬಂಡಾಯ ಶಮನ ಮಾಡದಿರುವ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಜೆಡಿಎಸ್ ನಾಯಕರು ದೂರು ನೀಡಿದ ನಂತರ, ರಾಹುಲ್ ಅವರು ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಂಡು ಬರುವ ಜವಾಬ್ದಾರಿಯನ್ನು ಸಿದ್ದರಾಮಯ್ಯಗೆ ವಹಿಸಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಸೂಚನೆಯ ನಂತರ ಸಿದ್ದರಾಮಯ್ಯನವರು ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರ ಮನವೊಲಿಸುವ ಪ್ರಯತ್ನ ನಡೆಸಿದ್ದಾರಾದರೂ ಫಲ ನೀಡಿಲ್ಲ. ಅದೇ ಕಾರಣಕ್ಕೆ ಮಂಡ್ಯದಲ್ಲಿ ದೇವೇಗೌಡರ ಜೊತೆ ಸಿದ್ದರಾಮಯ್ಯ ಅವರೇ ಜಂಟಿ ಪ್ರಚಾರ ಕೈಗೊಂಡು ನಿಖೀಲ್ ಪರ ಪ್ರಚಾರ ನಡೆಸುವಂತೆ ಜೆಡಿಎಸ್ ನಾಯಕರೇ ವೇಳಾಪಟ್ಟಿ ಸಿದ್ದಪಡಿಸಿ, ಹೈಕಮಾಂಡ್ ಮೂಲಕ ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸಿದ್ದರಾಮಯ್ಯ ಅವರ ಆಗಮನದ ಸಮಯದಲ್ಲಿಯಾದರೂ ಅತೃಪ್ತ ನಾಯಕರು ಹಾಜರಾಗದಿದ್ದರೆ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಅನಿವಾರ್ಯತೆ ಕಾಂಗ್ರೆಸ್‌ಗೆ ಬರಲಿದ್ದು, ಅದನ್ನು ತಪ್ಪಿಸಲು ಬಂಡಾಯ ನಾಯಕರು ಸಿದ್ದರಾಮಯ್ಯ ಆಗಮನದ ಸಂದರ್ಭದಲ್ಲಿ ತಮ್ಮ ಹಾಜರಿ ತೋರಿಸಿ ಬಚಾವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ಗೆ ಒಳ ಹೊಡೆತದ ಹೊಣೆ ಚಿಂತೆ ಮಂಡ್ಯದಲ್ಲಿ ಕಾಂಗ್ರೆಸ್ ಹಾಗೂ ರೈತ ಸಂಘ ಮತ್ತು ಬಿಜೆಪಿಯವರು ಬಹಿರಂಗವಾಗಿ ಸುಮಲತಾ ಪರವಾಗಿ ಪ್ರಚಾರ ಮಾಡುತ್ತಿರುವುದಷ್ಟೇ ಅಲ್ಲದೆ, ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಹಾಗೂ ಕೆಲವು ಮುಖಂಡರು ನಿಖೀಲ್ ವಿರುದ್ಧ ತೆರೆಮರೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ವಿರುದ್ಧ ತೀರ್ಪು ಬಂದರೆ,ಅದಕ್ಕೆ ಜೆಡಿಎಸ್ ನಾಯಕರು ಕಾಂಗ್ರೆಸ್ಸನ್ನೇ ಹೊಣೆಯನ್ನಾಗಿ ಮಾಡುವ ಸಾಧ್ಯತೆ ಇದೆ. ಅದೇ ಸರ್ಕಾರದ
ಭವಿಷ್ಯಕ್ಕೂ ಕಂಟಕವಾಗುತ್ತದೆ ಎನ್ನುವುದು ಕಾಂಗ್ರೆಸ್ ನಾಯಕರ ಚಿಂತೆಗೆ ಕಾರಣವಾಗಿದೆ. – ಶಂಕರ ಪಾಗೋಜಿ