ಹೊಸದಿಲ್ಲಿ: 2019ರಲ್ಲಿ ಜರಗಬೇಕಿರುವ ಲೋಕಸಭೆ ಚುನಾವಣೆ 2018ರಲ್ಲೇ ನಡೆಯಲಿದೆಯೇ? ಹೌದು, ಇಂತಹುದೊಂದು ಗಂಭೀರ ಚರ್ಚೆ ಕೇಂದ್ರ ಸರಕಾರಿ ಆಡಳಿತ ಮಟ್ಟದಲ್ಲಿ ಶುರುವಾಗಿದೆ. ಏಕಕಾಲಕ್ಕೆ ವಿಧಾನಸಭೆ, ಲೋಕಸಭೆ ಚುನಾವಣೆ ನಡೆಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿರುವ ಸರಕಾರ, ಇದರ ಸಾಧ್ಯಾಸಾಧ್ಯತೆ ಬಗ್ಗೆ ಸಮಾಲೋಚನೆ ನಡೆಸುತ್ತಿದೆ. ಅದರ ಮೊದಲ ಹೆಜ್ಜೆಯಾಗಿ, 2019ರಲ್ಲಿ ನಡೆಯಬೇಕಿರುವ ಲೋಕಸಭೆ ಚುನಾವಣೆಯನ್ನು ಅವಧಿ ಪೂರ್ವವಾಗಿ ನಡೆಸಲು ಯೋಜಿ ಸಲಾಗುತ್ತಿದೆ.
2018ರ ನವೆಂಬರ್-ಡಿಸೆಂಬರ್ ಅವಧಿಯಲ್ಲಿ ನಡೆಯ ಬೇಕಾಗಿರುವ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಯ ಜತೆಗೇ ಲೋಕಸಭೆ ಚುನಾವಣೆಯನ್ನೂ ನಡೆಸುವ ಚಿಂತನೆ ಒಂದಾದರೆ, ತದನಂತರ ಕ್ರಮೇಣ ವಿಧಾನಸಭೆ ಚುನಾವಣೆಗಳನ್ನು ಲೋಕಸಭೆ ಚುನಾವಣೆಯ ಜತೆಗೇ ಮಾಡಬಹುದಾದ ಸಾಧ್ಯತೆಗಳ ಬಗ್ಗೆಯೂ ಚರ್ಚಿಸಲಾಗುತ್ತಿದೆ.
ಸಂವಿಧಾನದಲ್ಲಿನ ನಿಯಮಾವಳಿಯಂತೆ, ಅವಧಿ ಪೂರ್ವ ಚುನಾವಣೆ ಸುಲಭ. ಆದರೆ, ಅವಧಿ ಮುಗಿದ ಬಳಿಕ ಅದೇ ಸರಕಾರವನ್ನು ಇನ್ನಷ್ಟು ದಿನಗಳ ಕಾಲ ಮುಂದೂಡುವ ಅಥವಾ ರಾಷ್ಟ್ರಪತಿ ಆಳ್ವಿಕೆ ಹೇರುವ ಕ್ರಮವಿಲ್ಲ. ಹೀಗಾಗಿ, ಇದಕ್ಕೆ ಸಾಂವಿಧಾನಿಕವಾದ ಒಂದಿಷ್ಟು ಪ್ರಕ್ರಿಯೆಗಳು ನಡೆಯಲೇಬೇಕಾಗುತ್ತವೆ.
ಚುನಾವಣೆಗೆ ಸಾಕಷ್ಟು ಪ್ರಮಾಣದಲ್ಲಿ ಹಣ ವ್ಯಯವಾ ಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಬಗ್ಗೆ ಲೋಕಸಭಾ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಸಿ. ಕಶ್ಯಪ್ ಹಾಗೂ ಉಳಿದ ಕಾರ್ಯ ದರ್ಶಿಗಳು ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದರು. ಈಗ ಅಳವಡಿಕೆಗೆ ಚರ್ಚೆ ಆರಂಭ ಗೊಂಡಿದೆ.
ಸದ್ಯದ ಮಾಹಿತಿ ಪ್ರಕಾರ 2019, ಎಪ್ರಿಲ್‌ನಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದೇ ವೇಳೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಿಜೋರಾಂ ಚುನಾವಣೆಗಳನ್ನು ನಡೆಸುವ ಅವಕಾಶವಿದೆ. ಈ ಎಲ್ಲ ರಾಜ್ಯಗಳಲ್ಲಿಯೂ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆೆ. ಒಂದೊಮ್ಮೆ ಉಳಿದ ಪಕ್ಷಗಳು ಒಪ್ಪಿಕೊಂಡಲ್ಲಿ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಒಡಿಶಾಗಳಲ್ಲಿಯೂ ಒಟ್ಟಿಗೇ ನಡೆಸುವ ಅವಕಾಶವೂ ಇದೆ.
ಕರ್ನಾಟಕದಲ್ಲಿ ?
ಕರ್ನಾಟಕ ಸಹಿತ ಇನ್ನು ಕೆಲ ರಾಜ್ಯ ಸರಕಾರಗಳ ಅವಧಿ 2018ರ ಮಾರ್ಚ್ ವೇಳೆಗೆ ಅಂತ್ಯಗೊಳ್ಳಲಿದ್ದು, ಲೋಕಸಭೆ ಚುನಾವಣೆಗೆ 6 ತಿಂಗಳಿಗಿಂತ ಹೆಚ್ಚು ಸಮಯ ಕಾಯಬೇಕಾಗುತ್ತದೆ. ಇದಕ್ಕೆ ಸಾಂವಿಧಾನಿಕವಾದ ಅವಕಾಶ ಇರುವುದಿಲ್ಲ. ಆಗ, ಸಂವಿಧಾನದಲ್ಲಿನ ನಿಯಮಾವಳಿಗೆ ತಿದ್ದುಪಡಿ ತರಬೇಕಾದ ಅನಿವಾರ್ಯ ನಿರ್ಮಾಣವಾಗಲಿದೆ.