Advertisement

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

09:53 AM Jan 06, 2020 | keerthan |

ಕಲಬುರಗಿ:  ಕನ್ನಡಕ್ಕೆ ಮೊಟ್ಟ‌ ಮೊದಲ ಕೃತಿ‌ “ಕವಿರಾಜಮಾರ್ಗ” ನೀಡಿದ ಸೂಫಿ-ಸಂತರ‌ ನಾಡು ಕಲಬುರಗಿಯಲ್ಲಿ 32 ವರ್ಷದ ನಂತರ 2020ರ ಫೆಬ್ರವರಿ 5, 6 ಮತ್ತು 7 ರಂದು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ರವಿವಾರ ಇಲ್ಲಿನ ಜಿಲ್ಲಾಡಳಿತ ಕಚೇರಿಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಾಲಾಜಿ ಬಿಡುಗಡೆಗೊಳಿಸಿದರು.

Advertisement

ಈ ಸಂದರ್ಭದಲ್ಲಿ ಶಾಸಕರಾದ ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ಎಂ.ವೈ.ಪಾಟೀಲ, ವಿಧಾನ‌ ಪರಿಷತ್ತಿನ ಶಾಸಕ ತಿಪ್ಪಣಪ್ಪ ಕಮಕನೂರ, ಕಲಬುರಗಿ ಪೊಲೀಸ್ ಅಯುಕ್ತ ಎಂ.ಎನ್.ನಾಗರಾಜ, ಜಿಲ್ಲಾಧಿಕಾರಿ ಶರತ್‌ ಬಿ., ಡಿಸಿಪಿ ಕಿಶೋರ ಬಾಬು, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಪಿ.ರಾಜಾ, ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ, ಜಿಲ್ಲಾ‌ ಕನ್ನಡ ಸಾಹಿತ್ಯ ಪರಿಷತ್ರಿನ ಅಧ್ಯಕ್ಷ ವೀರಭದ್ರ ಸಿಂಪಿ ಸೇರಿದಂತೆ ಇನ್ನಿತರರು ಇದ್ದರು.

ಸಮ್ಮೇಳನದ ಲಾಂಛನ ಬಗ್ಗೆ

ಕನ್ನಡ ಸಾಹಿತ್ಯ ಚರಿತ್ರೆಯ ಇತಿಹಾಸದಲ್ಲಿ ಮೊದಲು ದರ್ಶನ ನೀಡುವ ಜಿಲ್ಲೆ ಎಂದರೆ ಕಲಬುರಗಿ ಜಿಲ್ಲೆ. ಸಮ್ಮೇಳನದ ಲಾಂಛನದಲ್ಲಿ ಈ ಜಿಲ್ಲೆಯ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಶ್ರೀ ವಿಜಯನು ಬರೆದ ‘ಕವಿರಾಜ ಮಾರ್ಗ’ ಎಂಬ ಆದರ್ಶ ಗ್ರಂಥ ಮತ್ತು ಕವಿಯು ಕಾವ್ಯ ರಚನೆಯಲ್ಲಿ ತೊಡಗಿರುವುದನ್ನು ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ. ಕಲಬುರ್ಗಿ ಜಿಲ್ಲೆಯ ಸನ್ನತಿ, ನಾಗಾವಿ, ಮರತೂರು ಮುಂತಾದ ಕಡೆ ಹಲವಾರು ಮಹತ್ವದ ಪ್ರಾಚೀನ ಶಾಸನಗಳು ಇರುವದರಿಂದ ಸಾಂಕೇತಿಕವಾಗಿ ಶಾಸನವೊಂದನ್ನು ಈ ಲಾಂಛನದಲ್ಲಿ ಬಳಸಿಕೊಳ್ಳಲಾಗಿದೆ.

ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಸೌಹಾರ್ದ-ಸಹಿಷ್ಣುತೆಗೆ ಹೆಸರುವಾಸಿಯಾದ ಮತ್ತು ಕಲಾತ್ಮಕ ಸ್ಮಾರಕಗಳಾದ ಹಜರತ್ ಖಾಜಾ ಬಂದೇ ನವಾಜ ದರ್ಗಾ, ಶ್ರೀ ಶರಣಬಸವೇಶ್ವರ ಐತಿಹಾಸಿಕ ಭವ್ಯ ದೇವಾಲಯ, ಕಲಬುರಗಿಯ ಕೋಟೆ, ಚರ್ಚ್ ಹಾಗೂ ಬೌದ್ಧ ವಿಹಾರವನ್ನು ಲಾಂಛನದಲ್ಲಿ ಬಳಸಿಕೊಳ್ಳಲಾಗಿದೆ.

Advertisement

ಕನ್ನಡ ನಾಡಿನಲ್ಲಿ ಅಶೋಕನ ಪೂರ್ವದ ಕಾಲದಲ್ಲಿಯ ಬೌದ್ಧ ಧರ್ಮ ಇತ್ತು ಎಂಬುದಕ್ಕೆ ಸಾಕ್ಷ್ಯಾಧಾರಗಳು ಸನ್ನತಿಯಲ್ಲಿ ದೊರತಿವೆ. ಹಾಗಾಗಿ ಸನ್ನತಿಯ ಶಿಲ್ಪಗಳನ್ನು ಈ ಲಾಂಛನದಲ್ಲಿ ಬಳಸಿಕೊಳ್ಳಲಾಗಿದೆ. ಜನಪದ ಹಾಡುಗಾರರ ಮತ್ತು ತತ್ವಪದಕಾರರ ಸಂಕೇತವಾಗಿ ಏಕತಾರಿ ಮತ್ತು ದಮ್ಮಡಿಯನ್ನು ಬಳಸಿಕೊಳ್ಳಲಾಗಿದೆ. ಪ್ರಾಚೀನ ಕವಿಗಳ ಮತ್ತು ವಚನಕಾರರ ಸಾಹಿತ್ಯ ರಚನೆಯ ಸಂಕೇತವಾಗಿ ತಾಳೆಗರಿ ಕಟ್ಟನ್ನು ಬಳಸಿಕೊಳ್ಳಲಾಗಿದೆ.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಹೋಲಿಸದರೆ ಕಲಬುರಗಿಯಲ್ಲಿ ಅತಿ ಹೆಚ್ಚು ತೊಗರಿ ಬೆಳೆಯಲಾಗುತ್ತದೆ. ಕಲಬುರಗಿ ಜಿಲ್ಲೆಯನ್ನು ‘ತೊಗರಿ ಬೆಳೆಯ ಕಣಜ’ ಎಂದು ಕರೆಯಲಾಗುತ್ತದೆ. ಹಾಗಾಗಿ ತೊಗರಿ ಬೆಳೆಯನ್ನು ಈ ಲಾಂಛನದಲ್ಲಿ ಬಳಸಿಕೊಳ್ಳಲಾಗಿದೆ. ಕೊನೆಯದಾಗಿ ಈ ಲಾಂಛನದ ಮೇಲ್ಭಾಗದಲ್ಲಿ ಕನ್ನಡಾಂಬೆಯ ಭಾವಚಿತ್ರ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಚಿಹ್ನೆ, ಧ್ವಜವನ್ನು ಬಳಸಿಕೊಳ್ಳಲಾಗಿದೆ ಮತ್ತು ಸಂಭ್ರಮದ ಸೂಚಕವಾಗಿ ಕಲಾತ್ಮಕವಾದ ಜನಪದ ಛತ್ರಿಯನ್ನು ಬಳಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next