Advertisement

Investors Conference; ಹೂಡಿಕೆ ಕ್ಷೇತ್ರಗಳಾಗಿ ಲಾಜಿಸ್ಟಿಕ್‌, ಜಲಯಾನ ಉದ್ಯಮ

11:03 PM Aug 20, 2023 | Team Udayavani |

ಪಣಂಬೂರು: ಜಲಯಾನ ಉದ್ಯಮ ಹಾಗೂ ಲಾಜಿಸ್ಟಿಕ್‌ ಕ್ಷೇತ್ರದಲ್ಲಿ ಭಾರತ ತನ್ನ ಪಾರಮ್ಯವನ್ನು ಸಾಧಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದು, ಆಕರ್ಷಕ ಹೂಡಿಕೆ ಕ್ಷೇತ್ರಗಳಲ್ಲಿ ಒಂದಾಗಿದೆ. ಸಾಗರ ಉದ್ಯಮ ಕ್ಷೇತ್ರಕ್ಕೆ ಹೊಸ ಹೂಡಿಕೆಯನ್ನು ಪ್ರೇರೇಪಿಸಲು ಕೇಂದ್ರ ಸರಕಾರವು ಜಾಗತಿಕ ಸಾಗರೋತ್ತರ ಭಾರತ ಸಮ್ಮೇಳನ ಆಯೋಜಿಸುತ್ತಿದೆ. ಇದರ ಪ್ರಯೋಜನವನ್ನು ಎಲ್ಲ ಹೂಡಿಕೆದಾರರು ಪಡೆದುಕೊಳ್ಳ ಬೇಕೆಂದು ಕೇಂದ್ರ ಬಂದರು ಮತ್ತು ಜಲಸಾರಿಗೆ ಇಲಾಖೆಯ ರಾಜ್ಯ ಸಚಿವ ಶ್ರೀಪಾದ್‌ ನಾಯ್ಕ ಹೇಳಿದರು.

Advertisement

ಹೊಸದಿಲ್ಲಿಯಲ್ಲಿ ಅ. 17ರಿಂದ 19ರ ವರೆಗೆ ನಡೆಯಲಿರುವ ಜಾಗತಿಕ ಸಾಗರೋತ್ತರ ಭಾರತ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ವಲಯದ ಹೂಡಿಕೆದಾರರ ಸಮಾವೇಶ ಕಾರ್ಯಕ್ರಮವನ್ನು ರವಿವಾರ ಪಣಂಬೂರಿನ ಎನ್‌ಎಂಪಿಎ- ಬಿಡಿಎ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಸಾಗರ ಉದ್ಯಮ ಮತ್ತು ಬಂದರುಗಳಲ್ಲಿ ಅತ್ಯಾಧುನಿಕ, ಭವಿಷ್ಯದ ಆರ್ಥಿಕತೆ ಉತ್ತೇಜಿಸಲು ಪೂರಕವಾದ ಮೂಲಸೌಕರ್ಯಗಳ ಅಗತ್ಯವಿದೆ. ಇದಕ್ಕಾಗಿ ದೇಶ-ವಿದೇಶಗಳಿಂದ ಹೂಡಿಕೆ ಸೆಳೆಯಲು ಜಾಗತಿಕ ಸಮ್ಮೇಳನ ಪೂರಕವಾಗಲಿದೆ ಎಂದರು.

ದೇಶದ ಪ್ರಮುಖ ಬಂದರುಗಳು 1,600 ಮಿಲಿಯನ್‌ ಮೆಟ್ರಿಕ್‌ ಟನ್‌ಗಳ ಸಾಮರ್ಥ್ಯವನ್ನು ಹೊಂದಿದ್ದರೆ, ಎಲ್ಲ ಬಂದರುಗಳ ಒಟ್ಟಾರೆ ಸಾಮರ್ಥ್ಯವು 2,600 ಮಿಲಿಯನ್‌ ಮೆಟ್ರಿಕ್‌ ಟನ್‌ಗಿಂತಲೂ ಅಧಿಕವಾಗಿದೆ. ವಿಲಾಸಿ ಹಡಗು ಪ್ರಯಾಣಿಕರ ಸಂಖ್ಯೆ ಮೂರು ಪಟ್ಟು ಏರಿಕೆಯಾಗಿದೆ. ವಿಶ್ವ ಬ್ಯಾಂಕ್‌ನ ಲಾಜಿಸ್ಟಿಕ್ಸ್ ಪರ್ಫಾರ್ಮೆನ್ಸ್ ಇಂಡೆಕ್ಸ್ 2023ರ ವರದಿಯ ಪ್ರಕಾರ, ಭಾರತೀಯ ಬಂದರುಗಳ ಉತ್ಪಾದಕತೆ ಮತ್ತು ದಕ್ಷತೆಯಲ್ಲಿ ಭಾರತವು ಇತರ ಪ್ರಮುಖ ರಾಷ್ಟ್ರಗಳಿಗಿಂತ ಮುಂಚೂಣಿಯಲ್ಲಿದೆ. ಇನ್ನಷ್ಟು ಅಭಿವೃದ್ಧಿ ಸಾಧಿಸಿ ಆರ್ಥಿಕತೆ ಏರಿಕೆಯಾಗಲು ಸೂಕ್ತ ಹೂಡಿಕೆಯ ಅಗತ್ಯವಿದೆ ಎಂದು ಶ್ರೀಪಾದ ನಾಯ್ಕ ಪ್ರತಿಪಾದಿಸಿದರು.

ಪೂರಕ ವಾತಾವರಣ ಸೃಷ್ಟಿ
ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ನಮ್ಮಲ್ಲಿ ಉತ್ಪತ್ತಿಯಾಗುವ ಉತ್ಪನ್ನಗಳು ಮಂಗಳೂರು ಬಂದರಿನಿಂದ ಹೆಚ್ಚು ರಫ್ತು ಆಗಬೇಕಿದೆ. ಕಂಟೇನರ್‌ಗಳ ತಯಾರಿಯನ್ನೂ ಇಲ್ಲೇ ಮಾಡಲು ಅವಕಾಶಗಳಿವೆ. ಕೊಂಕಣ್‌ ರೈಲ್ವೇ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲೂ ಹೂಡಿಕೆ ಮಾಡಬಹುದು. ಹೂಡಿಕೆ ಮಾಡುವವರಿಗೆ ಪೂರಕ ವಾತಾವರಣ ಸೃಷ್ಟಿಸಲಾಗುವುದು ಎಂದರು.

Advertisement

ಎನ್‌ಎಂಪಿಎ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಮಾತನಾಡಿ, ಈಗ ಲಾಜಿಸ್ಟಿಕ್‌ ಕ್ಷೇತ್ರದಲ್ಲಿ ಭಾರತವು 35ನೇ ಸ್ಥಾನದಲ್ಲಿದೆ. ಕಳೆದ 8 ವರ್ಷಗಳಲ್ಲಿ ಸರಕು ನಿರ್ವಹಣೆಯಲ್ಲಿ ಭಾರಿ ಏರಿಕೆಯಾಗಿದ್ದು, ಇನ್ನೂ ಏರಿಕೆಯಾಗಬೇಕಿದೆ. ಶಿರಾಡಿ ಘಾಟ್‌ ರಸ್ತೆ 2024ರ ಹೊತ್ತಿಗೆ ಸರ್ವಋತು ರಸ್ತೆಯಾಗಿ ಬದಲಾಗಲಿದ್ದು, ಬಂದರು ವ್ಯವಹಾರ ಏರಿಕೆಯಾಗುವ ನಿರೀಕ್ಷೆಯಿದೆ ಎಂದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮಾತನಾಡಿ, ದ.ಕ. ಮತ್ತು ಉಡುಪಿ ಶಿಕ್ಷಣ ಕೇಂದ್ರವಾಗಿದ್ದು, ನೌಕಾಯಾನ, ಹಾಗೂ ಮೆರಿಟೈಮ್‌ ಸಂಬಂಧಿತ ಕೌಶಲ ಹೆಚ್ಚಿಸುವ ತಾಂತ್ರಿಕ ಶಿಕ್ಷಣ ಸಂಸ್ಥೆ ಸ್ಥಾಪಿಸಿದಲ್ಲಿ ಕೌಶಲಯುಕ್ತ ಉದ್ಯೋಗಿಗಳನ್ನು ಹಾಗೂ ಉದ್ಯೋಗವಕಾಶವನ್ನು ಸೃಷ್ಟಿಸಬಹುದಾಗಿದೆ. ಮಂಗಳೂರನ್ನು ಮಲ್ಟಿ ಮಾಡೆಲ್‌ ಲಾಜಿಸ್ಟಿಕ್‌ ಹಬ್‌ ಮಾಡಬೇಕಿದ್ದು, ಇದರಿಂದ ಆರ್ಥಿಕತೆಗೆ ಬೂಸ್ಟ್ ಸಿಗಲಿದೆ ಎಂದರು.

ಶ್ರೀನಿವಾಸ ವಿ.ವಿ. ಚಾನ್ಸಲರ್‌ ರಾಘವೇಂದ್ರ ರಾವ್‌ ಮಾತನಾಡಿ, ಸಾಗರ ಉದ್ಯಮ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗಳನ್ನು ಮಾಡುವ ಮೂಲಕ ಉದ್ಯೋಗ, ಆರ್ಥಿಕತೆಗೆ ಪೂರಕವಾಗಲಿದ್ದು, ನಮ್ಮ ಸಂಸ್ಥೆಯಲ್ಲಿ ನೌಕಾಯಾನ ಸಂಬಂಧಿತ ಪೂರಕ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದರು.

ಸಂಸದ ನಳಿನ್‌ ಕುಮಾರ್‌ ಕಟೀಲು, ಮನಪಾ ಆಯುಕ್ತ ಆನಂದ್‌ ಸಿ.ಎಲ್., ನೋವಿಗೋ ಸೊಲ್ಯುಶನ್‌ ಎಂಡಿ ಪ್ರವೀಣ್‌ ಕಲಾºವಿ, ಹಾಗೂ ಮೇರಿಟೈಮ್‌ ಕ್ಷೇತ್ರದ ಉದ್ಯಮಿಗಳು, ವಿವಿಧ ವಿಭಾಗದ ಪ್ರಮುಖರು ಉಪಸ್ಥಿತರಿದ್ದರು.

ಯಾರು ಏನು ಹೇಳಿದರು ?
ದಿಲ್ಲಿಯಲ್ಲಿ ಅ.17ರಿಂದ 19ರ ವರೆಗೆ ಜಾಗತಿಕ ಸಾಗರೋತ್ತರ ಭಾರತ ಸಮ್ಮೇಳನ ನಡೆಯಲಿದ್ದು 5 ಟ್ರಲಿಯನ್‌ ಆರ್ಥಿಕ ಶಕ್ತಿಯ ಭಾರತ ನಿರ್ಮಾಣ ಮುಖ್ಯ ಗುರಿಯತ್ತ ಹೆಜ್ಜೆ ಇಡಲು ಪೂರಕ.
– ಶ್ರೀಪಾದ್‌ ನಾಯ್ಕ

ಕ್ಯೂ ಆರ್‌ ಕೋಡ್‌ ಬಂದ ಮೇಲೆ ಭ್ರಷ್ಟಾಚಾರ ಇಳಿಕೆಯಾಗಿದೆ. ಆನ್‌ಲೈನ್‌ ಪೇ ಯೋಜನೆ ಯಶಸ್ವಿಯಾಗುತ್ತಿದೆ.
– ಶೋಭಾ ಕರಂದ್ಲಾಜೆ

Advertisement

Udayavani is now on Telegram. Click here to join our channel and stay updated with the latest news.

Next