ಬೆಳ್ತಂಗಡಿ: ವೇಶ್ಯಾವಾಟಿಕೆ ನಡೆಸುತ್ತಿರುವ ಅನುಮಾನದ ಮೇರೆಗೆ ಉಜಿರೆ ಹಳೆ ಪೇಟೆ ಸಮೀಪವಿರುವ ಎರಡು ಲಾಡ್ಜ್ಗಳಿಗೆ ಮಾ. 6ರಂದು ದಾಳಿ ಮಾಡಿರುವ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಮಹಿಳೆಯನ್ನು ರಕ್ಷಿಸಿದ್ದಾರೆ.
ತುಮಕೂರು ಅರಳೇ ಪೇಟೆಯ ರೇಣುಕಾ ಪ್ರಸಾದ್ (29), ಕಾರ್ಕಳ ನಿಟ್ಟೆ ಗ್ರಾಮದ ರಾಜೇಶ್ ಮೋಹನ್ ನಾಯರ್ (34), ಕಾರ್ಕಳ ನೂರಾಲ್ ಬೆಟ್ಟು ಗ್ರಾಮದ ನಿತಿನ್ ಕುಮಾರ್(28) ಅವರನ್ನು ವಶಕ್ಕೆ ಪಡೆಯಲಾಗಿದೆ.
ವೇಶ್ಯಾವಾಟಿಕೆ ಬಗ್ಗೆ ಮಾಹಿತಿ ಬಂದ ಮೇರೆಗೆ ಬೆಳ್ತಂಗಡಿ ಪೊಲೀಸ್ ನಿರೀಕ್ಷಕರಾದ ಬಿ.ಜಿ. ಸುಬ್ಟಾಪೂರ ಮಠ್ ಅವರು ಸಿಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದಾಗ ವೇಶ್ಯಾವಾಟಿಕೆ ನಿರತರಾಗಿರುವುದು ಕಂಡುಬಂದಿದೆ.
ಸ್ಥಳದಲ್ಲಿದ್ದ ಮಹಿಳೆಯನ್ನು ಮಹಿಳಾ ಸಿಬಂದಿಗಳ ಸಮಕ್ಷಮದಲ್ಲಿ ರಕ್ಷಿಸಿ ಆರೋಪಿಗಳ ವಿರುದ್ಧ ಹಾಗೂ ದಾಳಿಯ ವೇಳೆ ಓರ್ವ ಪರಾರಿಯಾದ ಆರೋಪಿಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಜಿರೆಯಲ್ಲಿ ಲಾಡ್ಜ್ಗಳು ಹೆಚ್ಚುತ್ತಿರುವಂತೆ ವೇಶ್ಯಾವಾಟಿಕೆ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಚುನಾವಣೆ ಅವಧಿಯಲ್ಲೂ ಉಜಿರೆಯಲ್ಲಿ ಪೊಲೀಸ್ ನಿರೀಕ್ಷಕರಾಗಿದ್ದ ಸುಬ್ರಹ್ಮಣ್ಯ ಕೆ. ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಮಹಿಳೆಯರನ್ನು ರಕ್ಷಿಸಲಾಗಿತ್ತು. ಇದೀಗ ಮತ್ತೆ ಉಜಿರೆ ಪೇಟೆ ಇಂತಹಾ ಕೃತ್ಯಗಳಿಗೆ ಕಾರಣವಾಗುತ್ತಿರುವುದರಿಂದ ಸುಕ್ಷಿತ ಸಮಾಜ ತಲೆತಗ್ಗಿಸುವಂತಾಗಿದೆ. ದಾಳಿ ಕುರಿತು ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.