ಶೃಂಗೇರಿ: ಉತ್ತರ ಭಾರತದಲ್ಲಿ ಕಂಡು ಬಂದಿರುವ ಮಿಡತೆ ಹಾವಳಿ ಇದೀಗ ಮಲೆನಾಡಿಗೂ ವಕ್ಕರಿಸಿದೆ. ತಾಲೂಕಿನ ಕೂತಗೋಡು ಗ್ರಾಪಂ ವ್ಯಾಪ್ತಿಯ ರೈತರೊಬ್ಬರ ಅಡಕೆ ತೋಟಕ್ಕೆ ಮಿಡತೆ ದಾಳಿ ಮಾಡಿದ್ದು, ರೈತರ ನಿದ್ದೆಗೆಡಿಸಿದೆ.
ಕೊಚ್ಚವಳ್ಳಿಯ ಅಶೋಕ್ ಎಂಬುವವರ ಅಡಕೆ ತೋಟದಲ್ಲಿ ಮಿಡತೆ ದಾಳಿ ನಡೆಸಿದ್ದು, ಎರಡೇ ದಿನದಲ್ಲಿ ಎರಡು ಮರದ ಸೋಗೆ(ಎಲೆ) ಸಂಪೂರ್ಣ ತಿಂದು ಹಾಕಿದೆ. ಮರ ಒಣಗಿ ನಿಂತಿದ್ದು, ಫಲ ಭರಿತ ಕೊನೆಯ ಅಡಕೆ ಕಾಯಿಗಳು ಉದುರಿ ಹೋಗಿದೆ. ಮಂಗಳವಾರ ಮನೆಯ ಎದುರಿನ ತೋಟದಲ್ಲಿ ಟಾರ್ಚ್ ಬೆಳಕಿನಲ್ಲಿ ಮಿಡತೆಗಳ ಹಾರಾಟ ಕಂಡು ಬಂದಿದೆ. ಹತ್ತಾರು ಮರದಲ್ಲಿ ಕಂಡು ಬಂದ ಮಿಡತೆಗಳು ರಾತ್ರಿ ಅಡಕೆ ಸೋಗೆಯನ್ನು ತಿನ್ನುವುದನ್ನು ಗಮನಿಸಿದ್ದಾರೆ. ಬೆಳಕು ಹರಿಯುತ್ತಿದ್ದಂತೆ ಮಿಡತೆಗಳು ಎಲೆ ಅಡಿ ಸೇರಿಕೊಳ್ಳುತ್ತಿದ್ದು, ಸೋಗೆಯನ್ನು ಎಳೆದರೆ ಮಿಡತೆಗಳು ಹಾರಾಡುವುದು ಗೋಚರಿಸುತ್ತದೆ. ಹತ್ತಾರು ಮರಗಳಲ್ಲಿ ರಾಶಿ ರಾಶಿ ಮಿಡತೆ ಕಂಡು ಬಂದಿದ್ದು, ಅಡಕೆ ತೋಟದಲ್ಲಿರುವ ಜಾಯಿಕಾಯಿ ಮರದಲ್ಲೂ ಕಾಣಿಸಿಕೊಂಡಿದೆ. ಮಿಡತೆ ದಾಳಿ ಹೆಚ್ಚಾದರೆ ನಾಲ್ಕಾರು ದಿನದಲ್ಲಿಯೇ ತೋಟವಿಡೀ ತಿಂದು ಹಾಕುವ ಭೀತಿ ಎದುರಾಗಿದೆ.
ಈ ಘಟನೆಯಿಂದ ಸ್ಥಳೀಯ ರೈತರು ಆತಂಕಗೊಂಡಿದ್ದಾರೆ. ಗ್ರಾಮದಲ್ಲಿ ಈಗಾಗಲೇ ಅಡಕೆ ತೋಟಕ್ಕೆ ಹಳದಿ ಎಲೆ ರೋಗವಿದ್ದು, ಗ್ರಾಮದಲ್ಲಿ ಹತ್ತಾರು ಎಕರೆ ರೋಗಕ್ಕೆ ನಾಶವಾಗಿದೆ. ಅಶೋಕ್ ಅವರ ತೋಟ ಹೊಸ ತೋಟವಾಗಿದ್ದು, ಫಲಭರಿತ ಅಡಕೆ ಮರಗಳಿಗೆ ಮಿಡತೆ ದಾಳಿಯಾದರೆ ತೋಟ ನಾಶವಾಗುವುದು ಖಚಿತ. ಕೊಳೆ ರೋಗಕ್ಕೆ ಈಗಗಾಲೇ ಬೊರ್ಡೋ ದ್ರಾವಣ ಸಿಂಪಡಿಸಿದ್ದರೂ ಮಿಡತೆ ಇದಕ್ಕೆ ಬಗ್ಗದೇ ಸೋಗೆಯನ್ನು ತಿಂದು ಹಾಕುತ್ತಿವೆ. ಮಿಡತೆ ಕಪ್ಪು ಹಸಿರು ಬಣ್ಣದಿಂದ ಕೂಡಿದ್ದು, ದೇಹದ ಮೇಲೆ ಹಳದಿ ಚುಕ್ಕೆ ಹೊಂದಿದೆ. ಮರದಿಂದ ಮರಕ್ಕೆ ಹಾರುವ ಇದು ಸಮೃದ್ಧವಾಗಿ ಹಸಿರು ಎಲೆ ಭಾಗವೇ ಇದಕ್ಕೆ ಆಹಾರವಾಗಿದೆ.
ಮಕ್ಕಳಂತೆ ಹಗಲು ರಾತ್ರಿ ಬೆಳೆಸಿರುವ ಅಡಕೆ ತೋಟಕ್ಕೆ ಇದೀಗ ಮಿಡತೆ ದಾಳಿ ಇಟ್ಟಿರುವುದರಿಂದ ತೀವ್ರ ಆತಂಕ ಎದುರಾಗಿದೆ. ಕಳೆದ ಮೂರು ದಿನದಿಂದ ಕೆಲವೇ ಮಿಡತೆ ಕಂಡು ಬಂದಿದ್ದು, ಮಂಗಳವಾರ ರಾತ್ರಿ ನೂರಾರು ಮಿಡತೆ ಕಂಡು ಬಂದಿದೆ. ಈಗಾಗಲೇ ಎರಡು ಮರವನ್ನು ಸಂಪೂರ್ಣ ತಿಂದು ಹಾಕಿದೆ. ಇದೇ ರೀತಿ ದಾಳಿ ಮುಂದುವರೆದರೆ ತೋಟ ನಾಶವಾಗಲಿದೆ. ತೋಟಗಾರಿಕೆ ಇಲಾಖೆ ತ್ವರಿತವಾಗಿ ಇದಕ್ಕೆ ಸೂಕ್ತ ಔಷ ಧ ಸಿಂಪಡಣೆಗೆ ಮಾರ್ಗದರ್ಶನ ನೀಡಬೇಕು.
-ಕೊಚ್ಚವಳ್ಳಿ ಅಶೋಕ್‌ಹೆಗ್ಡೆ, ತೋಟದ ಮಾಲೀಕ
ಮಿಡತೆ ದಾಳಿ ಈಗಾಗಲೇ ನರಸಿಂಹರಾಜಪುರ ತಾಲೂಕಿನಲ್ಲಿ ಕಂಡು ಬಂದಿದೆ. ಇದರ ನಿಯಂತ್ರಣ ಸಾಧ್ಯವಿದೆ. ಇದಕ್ಕಾಗಿ ರೈತರು ಕ್ವಿನಾಲ್ ಫಾಸ್ 25 ಇಸಿ 2ಮಿ.ಲೀ. ಒಂದು ಲೀ.ನೀರಿನೊಂದಿಗೆ ಸಿಂಪಡಿಸುವುದರಿಂದ ಮಿಡತೆ ಬಾಧೆ ಹತೋಟಿಗೆ ತರಬಹುದಾಗಿದೆ. –
ಶ್ರೀಕೃಷ್ಣ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ
ಗ್ರಾಮದಲ್ಲಿ ಕಂಡು ಬಂದಿರುವ ಮಿಡತೆ ದಾಳಿ ಆತಂಕ ಉಂಟು ಮಾಡಿದೆ. ಈ ಬಗ್ಗೆ ಸರಕಾರಕ್ಕೆ ಹಾಗೂ ಶಾಸಕ ಟಿ.ಡಿ.ರಾಜೇಗೌಡರ ಗಮನಕ್ಕೆ ತರಲಾಗಿದೆ. ರೈತರ ನೆರವಿಗೆ ಸರಕಾರ ಧಾವಿಸಬೇಕು. –
ನಾಗೇಶ್ ಹೆಗ್ಡೆ, ಅಧ್ಯಕ್ಷರು, ಕೂತಗೋಡು ಗ್ರಾಪಂ