ನರಗುಂದ: ಪ್ರತಿವರ್ಷ ತೊಂದರೆ ಎದುರಿಸುವ ಜೊತೆಗೆ ಪ್ರಸಕ್ತ ಸಾಲಿನಲ್ಲೂ ಮಲಪ್ರಭಾ ಕಾಲುವೆಯಿಂದ ಒಂದು ಬಾರಿಯೂ ನೀರು ಬಾರದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶಗೊಂಡ ತಾಲೂಕಿನ ಹದಲಿ ಗ್ರಾಮದ ರೈತರು ಪಟ್ಟಣದ ವಿಭಾಗೀಯ ಕಚೇರಿ ಸೇರಿದಂತೆ ನೀರಾವರಿ ನಿಗಮದ ಎಲ್ಲ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟಿಸಿದರು.
ಮಂಗಳವಾರ ಟ್ರ್ಯಾಕ್ಟರ್‌ನಲ್ಲಿ ಪಟ್ಟಣಕ್ಕಾಗಮಿಸಿದ ರೈತರು ನೀರಾವರಿ ಕಚೇರಿಗೆ ತೆರಳಿದರು. ಯಾವ ಕಚೇರಿಯಲ್ಲೂ ಹಿರಿಯ ಅಧಿಕಾರಿಗಳ ಅನುಪಸ್ಥಿತಿಗೆ ಆಕ್ರೋಶಗೊಂಡ ರೈತರು ವಿಭಾಗೀಯ ಕಚೇರಿ ಹಾಗೂ 1 ಮತ್ತು 2ನೇ ಉಪವಿಭಾಗ ಕಚೇರಿಗಳಲ್ಲಿನ ಅಧಿಕಾರಿಗಳು, ಸಿಬ್ಬಂದಿಯನ್ನು ಹೊರಹಾಕಿ ಎಲ್ಲ ಕಚೇರಿಗಳಿಗೆ ಬೀಗ ಜಡಿದು ವಿಭಾಗೀಯ ಕಚೇರಿ ಎದುರು ಧರಣಿ ನಡೆಸಿದರು.
ನೀರು ಬಾರದ ಕಾಲುವೆ: ಮಲಪ್ರಭಾ ನರಗುಂದ ಶಾಖಾ ಕಾಲುವೆ 14ನೇ ಮುಖ್ಯ ಹಂಚಿಕೆ ಹದಲಿ ಗ್ರಾಮದ ನೂರಾರು ಎಕರೆ ಕೃಷಿಗೆ ನೀರುಣಿಸಬೇಕು. ಪ್ರಸಕ್ತ ಸಾಲಿನಲ್ಲಿ ಒಮ್ಮೆಯೂ ಕಾಲುವೆಗೆ ನೀರು ಬಾರದೇ ತಮ್ಮ ಬೆಳೆಗಳು ಒಣಗುತ್ತಿವೆ. ನೀರಾವರಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಹಿರಿಯ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದರೂ ನಮ್ಮ ಕಾಲುವೆಗೆ ನೀರು ಹರಿಸಿಲ್ಲ ಎಂದು ಧರಣಿ ನಿರತರು ಆರೋಪಿಸಿದರು. ಜಾಕವೆಲ್ ಬಂದ್: ಗಂಗಾಪುರ ಗ್ರಾಮದ ಏತ ನೀರಾವರಿ ಯೋಜನೆಯಿಂದ ಹದಲಿ, ಖಾನಾಪುರ, ಗಂಗಾಪುರ, ಸುರಕೋಡ, ರಡ್ಡೇರನಾಗನೂರ ಗ್ರಾಮಗಳ ನೂರಾರು ಎಕರೆ ಕೃಷಿಗೆ ನೀರು ದೊರಕಬೇಕು. ಆದರೆ ಪ್ರಸಕ್ತ ಸಾಲಿನಲ್ಲಿ ಜಾಕವೆಲ್ ಕೂಡ ಪ್ರಾರಂಭ ಮಾಡಿಲ್ಲ. ಹೀಗಾಗಿ ಜಾಕವೆಲ್ ನೀರೂ ಸಿಗಲಿಲ್ಲ. ಕಾಲುವೆಗೂ ನೀರು ಬರಲಿಲ್ಲ. ಹೀಗಾದರೆ ನಮ್ಮ ಬೆಳೆಗಳ ಗತಿಯೇನು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿವರ್ಷ ಈ ತಾಪತ್ರಯದಿಂದ ಮುಕ್ತಿ ಸಿಕ್ಕಿಲ್ಲ. ನೀರಾವರಿ ಅಧಿಕಾರಿಗಳ ನಿರ್ಲಕ್ಷ ದಿಂದ ಸಾವಿರಾರು ರೂಪಾಯಿ ಖರ್ಚು ಮಾಡಿದ ಕಡಲೆ, ಗೋಧಿ, ಹತ್ತಿ, ಸೂರ್ಯಕಾಂತಿ, ಬಿಳಿ ಕುಸುಬಿ, ಜೋಳ ಬೆಳೆಗಳು ಒಣಗಿ ನಿಲ್ಲುವ ಹಂತಕ್ಕೆ ಬಂದಿವೆ. ಆದ್ದರಿಂದ ಧಾರವಾಡ ನೀರಾವರಿ ನಿಗಮದ ಮುಖ್ಯ ಅಭಿಯಂತರು ಸ್ಥಳಕ್ಕೆ ಬರುವವರೆಗೂ ನಾವು ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಹದಲಿ ಗ್ರಾಮದ ಬಿ.ಜಿ.ಸುಂಕದ, ಭೀಮಪ್ಪ ಹಾದಿಮನಿ, ಮಲಿಕಾಜಗೌಡ ಕುದರಿ, ಯಲ್ಲಪ್ಪಗೌಡ ಬನಹಟ್ಟಿ, ಗಂಗಾಧರ ಹಲಗತ್ತಿ, ಪ್ರಭು ಕಂಠೆಣ್ಣವರ, ಸಂಗಪ್ಪ ಸಣಕಲ್ಲ, ಬಸವರಾಜ ಬಾಣದ, ಸುರೇಶ ತಳವಾರ, ನಿಂಗಪ್ಪ ಕುಂಬಾರ, ಮಲ್ಲಪ್ಪ ಚಲವಾದಿ, ಗದಿಗೆಯ್ಯ ಹಿರೇಮಠ, ಮುತ್ತಪ್ಪ ಪರಣ್ಣವರ, ಹನಮಂತ ಕೆರಿ, ಮಂಜಪ್ಪ ಹರಕತ್ತಿ, ಸಂಗಪ್ಪ ನವಲಗುಂದ, ಅಶೋಕ ಬದನಿಕಾಯಿ, ಈರನಗೌಡ ಕುದರಿ, ವಿನಾಯಕ ಸುಂಕದ, ಭೀಮಪ್ಪ ಕೆರಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.