Advertisement

ಭಾಜಿ ಮಾರ್ಕೆಟ್‌ಗೆ ಬೀಗ, ಎಪಿಎಂಸಿಗೆ ಸಿಕ್ತು ವೇಗ

11:56 AM May 15, 2019 | Team Udayavani |

ಬೆಳಗಾವಿ: ಪರ-ವಿರೋಧದ ಮಧ್ಯೆಯೂ ಸಗಟು ತರಕಾರಿ ಮಾರುಕಟ್ಟೆ ಕೊನೆಗೂ ಸ್ಥಳಾಂತರಗೊಂಡಿದ್ದು, ಹಳೆಯ ಮಾರುಕಟ್ಟೆಗೆ ತರಕಾರಿ ವಾಹನಗಳನ್ನು ಪ್ರವೇಶಿಸದಂತೆ ತಡೆದ ಪೊಲೀಸರು ಎಲ್ಲವನ್ನೂ ನೂತನ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಕಳುಹಿಸಿದರು. ಮೊದಲ ದಿನವೇ ನೂತನ ಮಾರುಕಟ್ಟೆಯಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ವ್ಯಾಪಾರ ವಹಿವಾಟು ಕಂಡು ಬಂತು.

Advertisement

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಮಂಗಳವಾರದಿಂದ ಆರಂಭವಾದ ಸಗಟು ತರಕಾರಿ ಮಾರುಕಟ್ಟೆಗೆ ವ್ಯಾಪಾರಕ್ಕೆ ಬೆಂಬಲ ವ್ಯಕ್ತವಾಗಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್ನಲ್ಲಿ ದಂಡು ಮಂಡಳಿ ಪ್ರದೇಶದಲ್ಲಿಯ ಹಳೆಯ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಯಿತು. ಇಲ್ಲಿಯ ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರೂ ಪೊಲೀಸರ ಕಣ್ಗಾವಲಿನಲ್ಲಿ ರೈತರ ವಾಹನಗಳನ್ನು ಎಪಿಎಂಸಿಯತ್ತ ಕಳುಹಿಸಲಾಯಿತು.

ಮಂಗಳವಾರ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳನ್ನು ಹಳೆ ಭಾಜಿ ಮಾರ್ಕೆಟ್‌ನಲ್ಲಿ ಒಳಗೆ ಬಿಡಲಿಲ್ಲ. ಸದಾ ಗಿಜಿಗುಡುತ್ತಿದ್ದ ದಂಡು ಮಂಡಳಿ ಪ್ರದೇಶದ ಮಾರ್ಕೆಟ್ ಸುತ್ತಲೂ ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗಿತ್ತು. ತರಕಾರಿ ತುಂಬಿದ ವಾಹನಗಳನ್ನು ನೇರವಾಗಿ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ತಿರುಗಿಸಲಾಯಿತು. ರೈತರೂ ಇದಕ್ಕೆ ಕೈ ಜೋಡಿಸಿ ಎದುರು ಮಾತನಾಡದೇ ವಾಹನಗಳನ್ನು ಎಪಿಎಂಸಿಗೆ ತೆಗೆದುಕೊಂಡು ಹೋದರು.

ರಾಷ್ಟ್ರೀಯ ಹೆದ್ದಾರಿ ಮೂಲಕ ಬರುತ್ತಿದ್ದ ವಾಹನಗಳನ್ನು ಹಲಗಾ ಬ್ರಿಡ್ಜ್ ಹಾಗೂ ಬಿ.ಎಸ್‌. ಯಡಿಯೂರಪ್ಪ ಮಾರ್ಗದಲ್ಲಿಯೇ ತರಕಾರಿ ವಾಹನಗಳನ್ನು ಪೊಲೀಸರು ತಡೆ ಹಿಡಿದರು. ಜತೆಗೆ ಅಲಾರವಾಡ ಮಾರ್ಗದಲ್ಲಿಯೂ ಪೊಲೀಸರು ನಿಂತಿದ್ದರು. ನಗರ ಪ್ರವೇಶಿಸದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ನೇರವಾಗಿ ಎನ್‌ಎಚ್ 4 ಮಾರ್ಗದ ಮೂಲಕವೇ ಬಾಕ್ಸೈಟ್ ರಸ್ತೆಯಿಂದ ಎಪಿಎಂಸಿಗೆ ವಾಹನಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು.

ಹಳೆಯ ಭಾಜಿ ಮಾರ್ಕೆಟ್‌ನಲ್ಲಿಯ ವ್ಯಾಪಾರಸ್ಥರು ಸಭೆ ಸೇರಿ ಜಿಲ್ಲಾಡಳಿತ, ಎಪಿಎಂಸಿ ಹಾಗೂ ಪೊಲೀಸ್‌ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೋಟ್ಯಂತರ ರೂ. ವೆಚ್ಚ ಮಾಡಿ ಮಳಿಗೆಗಳನ್ನು ನಿರ್ಮಿಸಿದರೂ ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ನಮಗೆ ನ್ಯಾಯ ನೀಡದೇ ಎಪಿಎಂಸಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ರೈತರು ಸ್ವಯಂ ಪ್ರೇರಿತವಾಗಿ ತರಕಾರಿ ತಂದರೂ ಒಳಗೆ ಬಿಡದೇ ದಬ್ಟಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಹೊತ್ತು ಪೊಲೀಸರು ಹಾಗೂ ವ್ಯಾಪಾರಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು.

Advertisement

ಮೊದಲನೇಯ ದಿನವೇ ನೂತನ ಮಾರುಕಟ್ಟೆಗೆ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದು ವಿಶೇಷವಾಗಿತ್ತು. ಎಲ್ಲ ಅಂಗಡಿಗಳಲ್ಲಿಯೂ ಕಾಯಿಪಲ್ಯೆ, ತರಕಾರಿ ನಿರೀಕ್ಷೆಗಿಂತಲೂ ಹೆಚ್ಚು ಬಂದಿತ್ತು. ರೈತರು ನೇರವಾಗಿ ವಾಹನಗಳನ್ನು ಇಲ್ಲಿಗೆ ತಂದಿದ್ದರಿಂದ ವ್ಯಾಪಾರಸ್ಥರು ಖುಷಿ ಪಟ್ಟರು. ಜತೆಗೆ ಖರೀದಿದಾರರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ಮಾರುಕಟ್ಟೆಗೆ ಕಳೆ ಬಂದಿತ್ತು. ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದಿಂದ ಇದೊಂದು ಶುಭ ಸಂಕೇತ ಎನ್ನುತ್ತಾರೆ ವ್ಯಾಪಾರಸ್ಥರು.

ಲಾಠಿ ಬೀಸಿದ ಪೊಲೀಸರು:

ಹಳೆ ಭಾಜಿ ಮಾರ್ಕೆಟ್‌ಗೆ ದ್ವಿಚಕ್ರ ವಾಹನದ ಮೇಲೆ ತರಕಾರಿ ತೆಗೆದುಕೊಂಡು ಬರುತ್ತಿದ್ದ ವ್ಯಕ್ತಿಯನ್ನು ಪೊಲೀಸರು ತಡೆದರು. ಆಗ ಕೆಂಡಾಮಂಡಲರಾದ ವ್ಯಾಪಾರಸ್ಥರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. ವಾಹನ ಒಳಗೆ ಬಿಡುವಂತೆ ಪಟ್ಟು ಹಿಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೊಲೀಸರು ದ್ವಿಚಕ್ರ ವಾಹನವನ್ನು ಒಳಗೆ ಬಿಡದೇ ಎಪಿಎಂಸಿಗೆ ಹೋಗುವಂತೆ ಕಳುಹಿಸಲು ಮುಂದಾದರು. ಆಗ ಪೊಲೀಸರೊಂದಿಗೆ ವ್ಯಾಪಾರಸ್ಥರು ಮಾತಿನ ಚಕಮಕಿ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಗಮನಿಸಿದ ಪೊಲೀಸರು ಲಘು ಲಾಠಿ ಬೀಸುವ ಮೂಲಕ ಗುಂಪು ಚದುರಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next