Advertisement

ಠುಸ್ಸಾಯ್ತು ಲಾಕರ್‌ ಮರ್ಮ

05:53 PM Nov 13, 2021 | Team Udayavani |

ಹುಬ್ಬಳ್ಳಿ: ಚಿಟಗುಪ್ಪಿ ಆಸ್ಪತ್ರೆ ಹಳೆಯ ಕಟ್ಟಡದಲ್ಲಿ ದೊರೆತು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಹಳೇ ಲಾಕರ್‌ನಲ್ಲಿ ಆಸ್ಪತ್ರೆಗೆ ಸಂಬಂಧಿಸಿದ ಏಳೆಂಟು ವರ್ಷಗಳ ಕೆಲ ದಾಖಲೆಗಳು ಮಾತ್ರ ಪತ್ತೆಯಾಗಿದ್ದು, ಯಾವುದೇ ಬೆಲೆ ಬಾಳುವ ವಸ್ತುಗಳು, ನಗ ನಾಣ್ಯ ಇರಲಿಲ್ಲ.

Advertisement

ಚಿಟಗುಪ್ಪಿ ಆಸ್ಪತ್ರೆಯ ಹಳೇ ಕಟ್ಟಡ ಅಲ್ಲಲ್ಲಿ ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಹೊಸ ಕಟ್ಟಡ ನಿರ್ಮಾಣ ನಡೆಯಲಿದೆ. ಹೀಗಾಗಿ ಸುಮಾರು 125 ವರ್ಷಗಳ ಹಿಂದಿನ ಹಳೇ ಕಟ್ಟಡ ತೆರವು ಕಾರ್ಯ ಭಾಗಶಃ ಮುಗಿದಿದೆ. ಆದರೆ ಈ ಹಂತದಲ್ಲಿ ಗೋಡೆಯಲ್ಲಿ ಜೋಡಿಸಿರುವ ಲಾಕರ್‌ ಪತ್ತೆಯಾಗಿರುವುದು ಹಲವು ಕುತೂಹಲಕ್ಕೆ ಕಾರಣವಾಗಿತ್ತು. ಕಟ್ಟಡ 120 ವರ್ಷದ ಹಿಂದಿನದ್ದಾದರೂ ಲಾಕರ್‌ ಕನಿಷ್ಟ 5-6 ದಶಕಗಳ ಹಿಂದಿನದ್ದು ಎಂದು ಅಂದಾಜಿಸಲಾಗಿತ್ತು.

ಹೀಗಾಗಿ ಲಾಕರ್‌ವೊಳಗೆ ಏನಾದರೂ ಬೆಲೆಬಾಳುವ ವಸ್ತುಗಳು ಇರಬಹುದು ಎನ್ನುವ ಅನುಮಾನ ಶುರುವಾಗಿತ್ತು. ಹಳೆಯ ಲಾಕರ್‌ ಎನ್ನುವ ಕಾರಣಕ್ಕೆ ಇದನ್ನು ಅಧಿಕಾರಿಗಳ ಸಮ್ಮುಖದಲ್ಲಿ ತೆಗೆಯಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪಾಲಿಕೆ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ತೆಗೆಯುವ ಕಾರ್ಯಕ್ಕೆ ಪಾಲಿಕೆ ಮುಂದಾಗಿತ್ತು.

ಕಳೆದ ಏಳೆಂಟು ವರ್ಷಗಳ ಹಿಂದಿನವರೆಗೆ ಈ ಲಾಕರ್‌ ಬಳಸಲಾಗುತ್ತಿತ್ತು ಎಂದು ಆಸ್ಪತ್ರೆ ಸಿಬ್ಬಂದಿ ಅಧಿಕಾರಿಗಳಿಗೆ ತಿಳಿಸಿದ್ದರು. ಹೀಗಾಗಿ ಲಾಕರ್‌ನಲ್ಲಿ ಏನೂ ಇಲ್ಲ ಎನ್ನುವ ಅಭಿಪ್ರಾಯಕ್ಕೆ ಬರಲಾಗಿತ್ತಾದರೂ ಹಳೇ ಲಾಕರ್‌ ಆಗಿರುವುದರಿಂದ ಜನರಲ್ಲಿ ಯಾವುದೇ ಗೊಂದಲ ಬೇಡ ಎನ್ನುವ ಕಾರಣಕ್ಕೆ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಲಾಕರ್‌ ತೆಗೆಸುವ ಕೆಲಸಕ್ಕೆ ಮುಂದಾಗಿದ್ದರು. ಲಾಕರ್‌ ತೆಗೆದಾಗ ಯಾವುದೇ ಬೆಲೆ ಬಾಳುವ ವಸ್ತುಗಳಾಗಲಿ,
ನಗ ನಾಣ್ಯ ಇರಲಿಲ್ಲ. ಬದಲಾಗಿ ಕಳೆದ ಏಳೆಂಟು ವರ್ಷಗಳ ಹಿಂದಿನ ಸಣ್ಣ ಪುಟ್ಟ ದಾಖಲೆಗಳು ದೊರೆತಿವೆ. ರಾತ್ರಿ 11:30 ವರೆಗೂ ಲಾಕರ್‌ ಆಪರೇಶನ್‌ ನಡೆಯಿತು. ತೀವ್ರ ಕುತೂಹಲ ಕೆರಳಿಸಿದ್ದ ಲಾಕರ್‌ ಮರ್ಮ ಠುಸ್ಸಾಗಿ ಹೋಯಿತು.

ಗೋಡೆಯಲ್ಲಿ ಜೋಡಿಸಿರುವ ಲಾಕರ್‌ಗೆ ಬಳಸುತ್ತಿದ್ದ ಕೀಲಿಗಳು ಇಲ್ಲದ ಕಾರಣ ಅದನ್ನು ಸೂಕ್ಷ್ಮವಾಗಿ ತೆಗೆಯುವುದು ಸವಾಲಾಗಿತ್ತು. ಸಿದ್ದೇಶ್ವರ ಕಂಪನಿಗೆ ಲಾಕರ್‌ ಸೇರಿದ್ದಾಗಿದ್ದರಿಂದ ಇದನ್ನು ತೆಗೆಯಲು ಅದೇ ಕಂಪನಿಯ ಸಿಬ್ಬಂದಿಯನ್ನು ಕರೆಸಲಾಗಿತ್ತು. ಲಾಕರ್‌ ಮೂರು ಕೀಗಳನ್ನು ಹೊಂದಿದ್ದರಿಂದ ಅದನ್ನು ಸುಲಭವಾಗಿ ತೆಗೆಯುವುದು ಕೂಡ ಕಷ್ಟದ ಕೆಲಸವಾಗಿತ್ತು. ಗ್ಯಾಸ್‌ ಕಟರ್‌ ನಿಂದ ತೆಗೆಯುವ ಪ್ರಯತ್ನ ಮಾಡಿದರೆ ಒಳಗಿನ ಏನಾದರು ಬೆಲೆಬಾಳುವ ವಸ್ತುಗಳು ಸುಟ್ಟು ಹೋಗಬಹುದು ಎನ್ನುವ ಕಾರಣಕ್ಕೆ ಕೀ ಹಾಕುವ ಜಾಗದಲ್ಲಿ ಕೊರೆಯುವ ಯಂತ್ರ (ಡ್ರಿಲ್‌) ಮೂಲಕ ತೆಗೆಯುವ ಕೆಲಸಕ್ಕೆ ಮುಂದಾದರು.

Advertisement

ರಾತ್ರಿ 10 ಗಂಟೆಯ ಸುಮಾರಿಗೆ ಕಾರ್ಯ ಆರಂಭಿಸಿ ಒಂದೂವರೆ ಗಂಟೆ ನಂತರ ಮೂರು ಲಾಕ್‌ಗಳನ್ನು ತೆಗೆದರು. ಪಾಲಿಕೆ ಹೆಚ್ಚುವರಿ ಆಯುಕ್ತ ಅಜೀಜ್‌ ದೇಸಾಯಿ, ಎಸ್‌.ಸಿ.ಬೇವೂರು, ಬಸವರಾಜ ಲಮಾಣಿ, ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಡಾ| ಶ್ರೀಧರ ದಂಡಪ್ಪನವರ ಸೇರಿದಂತೆ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next