ಲಾಕರ್ ನೀಡುವಾಗ ಯಾವ ಬ್ಯಾಂಕ್ ಕೂಡ ಹೀಗೊಂದು ನಿಯಮವಿದೆ ಎಂದು ತಪ್ಪಿಯೂ ಹೇಳುವುದಿಲ್ಲ. ಎಲ್ಲ ಬ್ಯಾಂಕ್‌ಗಳಲ್ಲಿ “ಸೇಫ್’ ಲಾಕರ್ ಲಭ್ಯವಿದೆ ಎಂಬ ಬೋರ್ಡ್ ಖಾಯಂ. ಲಾಕರ್ ಸೇವೆ ನೀಡಲು ಬ್ಯಾಂಕ್‌ಗಳ ನಡುವೆ ಸ್ಪರ್ಧೆಯೂ ಇರುತ್ತದೆ.
ಬ್ಯಾಂಕ್‌ಗಳು ಭಾರೀ ಪೈಪೋಟಿಯಿಂದ ಒದಗಿಸುವ ಲಾಕರ್ ಸೇವೆ ಸಂಪೂರ್ಣ ಸುರಕ್ಷಿತವಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಜನರಿಗೆ ಸ್ವಲ್ಪ ಕಷ್ಟವಾಗಬಹುದು. ಆದರೆ ಸ್ವತಃ ಆರ್‌ಬಿಐ ಈ ಸ್ಪಷ್ಟನೆಯನ್ನು ನೀಡಿರುವುದರಿಂದ ನಂಬಲೇಬೇಕಾಗುತ್ತದೆ. ಲಾಕರ್‌ನಲ್ಲಿಟ್ಟಿರುವ ಯಾವುದೇ ವಸ್ತು ಕಳವಾದರೆ ಅಥವಾ ಬೇರೆ ಯಾವುದೇ ಕಾರಣಕ್ಕೆ ಕಳೆದುಹೋದರೆ ಅದಕ್ಕೆ ಬ್ಯಾಂಕ್ ಹೊಣೆಯಾಗುವುದಿಲ್ಲ ಹಾಗೂ ಪರಿಹಾರ ಕೊಡುವ ಬಾಧ್ಯತೆ ಬ್ಯಾಂಕಿಗಿಲ್ಲ ಎನ್ನುತ್ತದೆ ಆರ್‌ಬಿಐ. ಇಷ್ಟರ ತನಕ ಜನರು ಬ್ಯಾಂಕ್ ಸೇಫ್ ಲಾಕರ್‌ಗಳೆಂದರೆ ಅತ್ಯಂತ ಸುರಕ್ಷಿತ ಎಂದು ಭಾವಿಸಿದ್ದರು. ಲಾಕರ್‌ನಲ್ಲಿಟ್ಟ ಅಮೂಲ್ಯ ವಸ್ತುಗಳು ಬ್ಯಾಂಕಿನ ಸುಪರ್ದಿಯಲ್ಲಿರುತ್ತವೆ. ಒಂದು ವೇಳೆ ಕಳ್ಳತನ, ದರೋಡೆಯಾದರೂ ಬ್ಯಾಂಕುಗಳೇ ಅದರ ಜವಾಬ್ದಾರಿ ಹೊತ್ತು ನಷ್ಟ ಪರಿಹಾರ ನೀಡುತ್ತವೆ ಎನ್ನುವುದೇ ಹೆಚ್ಚಿನವರ ತಿಳಿವಳಿಕೆಯಾಗಿತ್ತು. ಆರ್‌ಟಿಐ ಕಾರ್ಯಕರ್ತ ಕುಶ್ ಕಾಲಾ ಎನ್ನುವವರು ಮಾಹಿತಿ ಹಕ್ಕು ಕಾಯಿದೆಯಡಿ ಲಾಕರ್‌ಗಳ ಸುರಕ್ಷತೆಯ ಕುರಿತು ಮಾಹಿತಿ ಕೇಳಿರದಿದ್ದರೆ ಲಾಕರ್‌ಗಳ ಅಸಲಿ ಮುಖದ ಪರಿಚಯ ಜನರಿಗೆ ಆಗುತ್ತಿರಲಿಲ್ಲ.
ಆರ್‌ಬಿಐ ಈ ಮಾಹಿತಿ ನೀಡಿದ ಬೆನ್ನಲ್ಲೇ 19 ರಾಷ್ಟ್ರೀಕೃತ ಬ್ಯಾಂಕುಗಳೂ ಲಾಕರ್‌ನೊಳಗಿರುವ ವಸ್ತುಗಳ ಸುರಕ್ಷತೆ ತಮ್ಮ ಜವಾಬ್ದಾರಿಯಲ್ಲ ಎಂದು ಹೇಳಿಕೊಂಡಿವೆ. ಲಾಕರ್ ಪಡೆಯುವಾಗ ಬ್ಯಾಂಕ್‌ಗಳು ಮತ್ತು ಗ್ರಾಹಕರ ನಡುವೆ ಏರ್ಪಡುವ ಒಪ್ಪಂದ ಬಾಡಿಗೆ ಮನೆ ಪಡೆಯುವಾಗ ಮಾಲಕ ಮತ್ತು ಬಾಡಿಗೆದಾರನ ನಡುವೆ ಏರ್ಪಡುವ ಒಪ್ಪಂದದ ಮಾದರಿಯಲ್ಲಿರುತ್ತದೆ ಎಂದು ಹೇಳುತ್ತಿವೆ ಅವು. ಅರ್ಥಾತ್ ಬಾಡಿಗೆಯಲ್ಲಿರುವ ವ್ಯಕ್ತಿಯ ಯಾವ ಸೊತ್ತುಗಳಿಗೂ ಮನೆ ಮಾಲಕ ಜವಾಬ್ದಾರಿಯಾಗುವುದಿಲ್ಲ. ಅದು ಕಳ್ಳತನವಾದರೆ ಅಥವಾ ಬೇರೆ ಯಾವುದೇ ಕಾರಣಕ್ಕೆ ನಷ್ಟವಾದರೆ ಅದಕ್ಕೆ ಬಾಡಿಗೆದಾರನೇ ಹೊಣೆಯಾಗಬೇಕು. ಇಷ್ಟು ಹೇಳಿ ಬ್ಯಾಂಕ್‌ಗಳು ತಮ್ಮ ಜವಾಬ್ದಾರಿಯಿಂದ ಕೈತೊಳೆದುಕೊಂಡಿವೆ. ಕಳ್ಳತನ ದರೋಡೆ ಮಾತ್ರವಲ್ಲದೆ, ಚಂಡಮಾರುತ, ನೆರೆ ಪ್ರವಾಹದಂತಹ ಪ್ರಾಕೃತಿಕ ವಿಕೋಪ, ಗಲಭೆ, ದೊಂಬಿ, ಬೆಂಕಿ ಅವಗಢದಂತಹ ದುರಂತಗಳಿಂದ ಲಾಕರ್ ಕೊಠಡಿಗೆ ಹಾನಿಯಾಗಿ ಲಾಕರ್‌ನೊಳಗಿರುವ ವಸ್ತುಗಳು ನಾಶಾವಾದರೂ ಪರಿಹಾರ ಕೊಡುವ ಬಾಧ್ಯತೆ ಬ್ಯಾಂಕ್‌ಗಳಿಗಿಲ್ಲ. ಆದರೆ ಲಾಕರ್ ನೀಡುವ ಸಮಯದಲ್ಲಿ ಯಾವ ಬ್ಯಾಂಕ್ ಕೂಡ ಹೀಗೊಂದು ನಿಯಮವಿದೆ ಎನ್ನುವುದನ್ನು ತಪ್ಪಿಯೂ ಹೇಳುವುದಿಲ್ಲ.
ಎಲ್ಲ ಬ್ಯಾಂಕ್‌ಗಳಲ್ಲಿ “ಸೇಫ್’ ಲಾಕರ್ ಲಭ್ಯವಿದೆ ಎಂಬ ಬೋರ್ಡ್ ಖಾಯಂ ಆಗಿ ಇರುತ್ತದೆ. ಲಾಕರ್ ಸೇವೆ ನೀಡಲು ಬ್ಯಾಂಕ್‌ಗಳ ನಡುವೆ ಸ್ಪರ್ಧೆಯೂ ಇರುತ್ತದೆ. ಸಣ್ಣ ಲಾಕರ್ ಆದರೆ ವಾರ್ಷಿಕ 1,000, ದೊಡ್ಡ ಲಾಕರ್ ಆಗಿದ್ದರೆ 10,000 ರೂ.ಗಿಂತ ಅಧಿಕ ಬಾಡಿಗೆಯನ್ನೂ ಬ್ಯಾಂಕ್‌ಗಳು ವಸೂಲು ಮಾಡುತ್ತವೆ. ಅಲ್ಲದೆ ವಾರ್ಷಿಕ ಬಾಡಿಗೆ ಕಟ್ಟದಿದ್ದರೆ ಲಾಕರ್ ತೆರೆಯುವ ಅಧಿಕಾರವೂ ಬ್ಯಾಂಕ್‌ಗಿದೆ. ಹೆಚ್ಚಿನ ಬ್ಯಾಂಕ್‌ಗಳು ಲಾಕರ್ ನೀಡುವಾಗ ಠೇವಣಿ ಇಡಲು ಒತ್ತಾಯಿಸುತ್ತವೆ. ಲಾಕರ್ ಪಡೆಯಲು ಗುರುತು ಪತ್ರ, ವಿಳಾಸದ ದಾಖಲೆ ಇತ್ಯಾದಿಗಳನ್ನು ಒದಗಿಸುವುದು ಕಡ್ಡಾಯ. ತನಗಗತ್ಯವಿರುವ ಎಲ್ಲ ಸುರಕ್ಷಾ ಕ್ರಮಗಳನ್ನು ಅನುಸರಿಸುವ ಬ್ಯಾಂಕ್, ಲಾಕರ್‌ನಲ್ಲಿರುವ ವಸ್ತುಗಳಿಗೆ ಮಾತ್ರ ಯಾವ ಭದ್ರತೆಯ ಖಾತರಿಯನ್ನೂ ನೀಡುವುದಿಲ್ಲ. ಹೀಗಿರುವಾಗ ಜನರು ತಮ್ಮ ಅಮೂಲ್ಯ ವಸ್ತುಗಳನ್ನು ಬ್ಯಾಂಕ್ ಲಾಕರ್‌ನಲ್ಲ ಏಕೆ ಇಡಬೇಕು? ಮನೆಯಲ್ಲಿ ಇಟ್ಟುಕೊಳ್ಳಬಹುದಲ್ಲವೆ? ವಿಮೆ ಮಾಡಿಸಿಕೊಂಡರೆ ಕಳ್ಳತನವಾದರೆ ಪರಿಹಾರವಾದರೂ ದೊರಕುತ್ತದೆ.
ಚಿನ್ನಾಭರಣ ಮತ್ತಿತರ ಬೆಲೆಬಾಳುವ ವಸ್ತುಗಳಿಗೆ ಈಗ ನಾನಾ ರೀತಿಯ ಆಕರ್ಷಕ ವಿಮಾ ಪಾಲಿಸಿಗಳೂ ಇವೆ. ಇಂತಹ ಪ್ರಶ್ನೆಗಳು ಗ್ರಾಹಕರಲ್ಲಿ ಉದ್ಭವಿಸಿದರೆ ತಪ್ಪಲ್ಲ. ಬ್ಯಾಂಕಿನ ಕೆಲಸ ಲಾಕರ್ ನೀಡುವುದು ಮಾತ್ರ. ಲಾಕರ್‌ನೊಳಗೆ ಗ್ರಾಹಕ ಏನು ಇಡುತ್ತಾನೆ ಎನ್ನುವುದು ಬ್ಯಾಂಕಿನವರಿಗೆ ಗೊತ್ತಿರುವುದಿಲ್ಲ. ಹೀಗಾಗಿ ಲಾಕರ್‌ನೊಳಗಿರುವ ವಸ್ತುಗಳಿಗೆ ಬ್ಯಾಂಕ್ ಹೊಣೆಯಾಗುವುದಿಲ್ಲ ಎನ್ನುವುದು ತರ್ಕದ ದೃಷ್ಟಿಯಿಂದ ಸರಿ.
ಒಂದು ವೇಳೆ ಕಳ್ಳತನ ಅಥವಾ ದರೋಡೆಯಾದರೆ ಗ್ರಾಹಕ ಸುಳ್ಳು ಲೆಕ್ಕ ನೀಡಿ ಹೆಚ್ಚು ಪರಿಹಾರ ಪಡೆಯಲು ಪ್ರಯತ್ನಿಸುವ ಸಾಧ್ಯತೆಯಿರುವುದರಿಂದ ಲಾಕರ್‌ನೊಳಗಿನ ವಸ್ತುಗಳ ಜವಾಬ್ದಾರಿಯನ್ನು ಬ್ಯಾಂಕ್‌ಗಳು ಒಪ್ಪಿಕೊಳ್ಳುವುದಿಲ್ಲ. ಆದರೆ ಹೀಗೊಂದು ನಿಯಮವಿರುವುದನ್ನು ಲಾಕರ್ ನೀಡುವಾಗಲೇ ಬ್ಯಾಂಕ್‌ಗಳು ಗ್ರಾಹಕನಿಗೆ ಸ್ಪಷ್ಟವಾಗಿ ತಿಳಿಸಬೇಕು. ನಿಮ್ಮ ಅಮೂಲ್ಯವಾದ ವಸ್ತುಗಳನ್ನು ನಾವು ಸುರಕ್ಷಿತವಾಗಿಟ್ಟುಕೊಳ್ಳುತ್ತೇವೆ ಎಂದು ಭರವಸೆ ನೀಡಿ ಅದಕ್ಕೆ ಶುಲ್ಕವನ್ನೂ ವಸೂಲು ಮಾಡಿ ಕಳ್ಳತನವಾದರೆ ನಾವು ಜವಾಬ್ದಾರರಲ್ಲ ಎನ್ನುವುದು ಯಾವ ನ್ಯಾಯ?