ರಾಯಚೂರು: ನಗರದ ರಾಜೇಂದ್ರ ಗಂಜ್ ಎಪಿಎಂಸಿಯಲ್ಲಿ ಖರೀದಿದಾರರು ಹಾಗೂ ಅಧಿಕೃತ ಕಮಿಶನ್ ಏಜೆಂಟ್ರ ನಡುವಿನ ವ್ಯಾಜ್ಯದಿಂದಾಗಿ ಗುರುವಾರ ಯಾವುದೇ ಧಾನ್ಯ ಖರೀದಿ ಮಾಡದಿರುವ ಕಾರಣಕ್ಕೆ ರೈತರು ಎಪಿಎಂಸಿಗೆ ಬೀಗ ಜಡಿದು ಬೀದಿಗಳಿದು ಹೋರಾಟ ಮಾಡಿದ ಪ್ರಸಂಗ ನಡೆಯಿತು.
ಎಂದಿನಂತೆ ಮಾರುಕಟ್ಟೆಗೆ ತೊಗರಿ, ಕಡಲೆ ತಂದಿದ್ದ ರೈತರಿಗೆ ಮಧ್ಯಾಹ್ನ ಒಂದು ಗಂಟೆಯಾದರೂ ಯಾರೂ ಧಾನ್ಯ ಖರೀದಿಗೆ ಬರಲಿಲ್ಲ. ಖರೀದಿದಾರರು ಮತ್ತು ಕಮಿಶನ್ ಏಜೆಂಟ್ರ ನಡುವಿನ ವ್ಯವಹಾರದಿಂದ ಈ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಇದರಿಂದ ಆಕ್ರೋಶಗೊಂಡ ರೈತರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ದಿಢೀರ್‌ನೆ ಹೋರಾಟಕ್ಕಿಳಿದರು. ಆದರೂ ಯಾವ ಅಧಿಕಾರಿಗಳಾಗಲಿ, ವರ್ತಕರಾಗಲಿ ಸ್ಪಂದಿಸಲಿಲ್ಲ. ಇದರಿಂದ ಎಪಿಎಂಸಿ ಮುಖ್ಯ ಗೇಟ್‌ಗೆ ಬೀಗ ಜಡಿದ ರೈತರು ಗಂಜ್ ವೃತ್ತದಲ್ಲೇ ಧರಣಿ ಕುಳಿತರು. ಇದರಿಂದ ಸಂಚಾರಕ್ಕೆ ವ್ಯತ್ಯಯವಾಯಿತು.
ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ದೂರದೂರುಗಳಿಂದ ರೈತರು ತೊಗರಿ, ಒಣಗಡಲೆ ಮಾರಲು ತಂದಿದ್ದಾರೆ. ಆದರೆ, ವರ್ತಕರು, ಏಜೆಂಟ್ರು ತಮ್ಮ ಒಳಜಗಳದಿಂದ ಧಾನ್ಯ ಖರೀದಿಸಲು ಬಂದಿಲ್ಲ. ಒಂದು ವೇಳೆ ಖರೀದಿ ಮಾಡಲು ಆಗದಿದ್ದರೆ ಮೊದಲೇ ತಿಳಿಸಬೇಕಿತ್ತು. ಸಾವಿರಾರು ರೂ. ಖರ್ಚು ಮಾಡಿ ಧಾನ್ಯ ತಂದ ರೈತರು ಈಗ ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಸುಮಾರು 4500 ಚೀಲ ತೊಗರಿ, ಒಂದೂವರೆ ಸಾವಿರ ಚೀಲ ಕಡಲೆ ಮಾರುಕಟ್ಟೆಗೆ ತರಲಾಗಿದೆ. ಖರೀದಿ ಮಾಡದಿದ್ದರೆ ರೈತರು ಅದನ್ನು ಕಾಯ್ದುಕೊಂಡು ಇಲ್ಲಿಯೇ ಇರಬೇಕಾಗುತ್ತದೆ. ಅಲ್ಲದೇ, ಬೇರೆ ಜಿಲ್ಲೆಗಳಿಗೆ ತೆಗೆದುಕೊಂಡು ಹೋಗಲು ಈಗ ಸಮಯ ಉಳಿದಿಲ್ಲ. ಅಧಿಕಾರಿಗಳ ಬೇಜವ್ದಾರಿಯಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ದೂರಿದರು.
ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದಿನ್ನಿ ಮಾತನಾಡಿ, ಅಧಿಕಾರಿಗಳು ರೈತರ ಜೀವನದೊಂದಿಗೆ ಚಲ್ಲಾಟವಾಡುತ್ತಿದ್ದಾರೆ. ಈ ಕೂಡಲೇ ಸಮಸ್ಯೆ ಬಗೆಹರಿಸಬೇಕು. ಧಾನ್ಯ ಖರೀದಿಯಾಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಕೆಲ ಕಾಲ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು.
ಎಪಿಎಂಸಿ ಸಹಾಯಕ ಕಾರ್ಯದರ್ಶಿ ಸಾಯಬಣ್ಣ ಆಗಮಿಸಿ, ಈ ಬಗ್ಗೆ ಕಾರ್ಯದರ್ಶಿಯೊಂದಿಗೆ ಮಾತನಾಡುವುದಾಗಿ ತಿಳಿಸಿದರೂ ರೈತರು ಕೇಳಲಿಲ್ಲ. ಕೊನೆಗೆ ವರ್ತಕರ ಮನವೊಲಿಸಿದ ಅಧಿಕಾರಿಗಳು, ಖರೀದಿ ಆರಂಭಿಸುವಂತೆ ತಿಳಿಸಿದರು. ಸಂಜೆ ಐದು ಗಂಟೆ ಬಳಿಕ ಖರೀದಿ ಶುರುವಾಯಿತು. ಇದರಿಂದ ರೈತರು ತಡರಾತ್ರಿವರೆಗೂ ಕಾಯುವಂತಾಯಿತು.