Advertisement

ಪ್ರಾರಂಭೋತ್ಸವದಂದೇ ಶಾಲೆಗೆ ಬೀಗ; ವಿದ್ಯಾರ್ಥಿಗಳು ಅತಂತ್ರ

12:31 AM May 30, 2019 | Team Udayavani |

ಹಳೆಯಂಗಡಿ: ಸುಮಾರು 180 ವರ್ಷಗಳ ಇತಿಹಾಸವಿರುವ ಇಲ್ಲಿನ ಹಳೆಯಂಗಡಿಯ ವ್ಯಾಪ್ತಿಯ ಏಕೈಕ ಸರಕಾರಿ ಅನುದಾನಿತ ಯುಬಿಎಂಸಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂದಿನಂತೆ ಮೇ 29ರಂದು ಪ್ರಾರಂಭೋತ್ಸವ ಆಚರಿಸಬೇಕಾಗಿತ್ತು. ಆದರೆ ಶಾಲೆ ಬಾಗಿಲನ್ನೇ ತೆರೆಯದೇ ಇದ್ದುದರಿಂದ ಇಲ್ಲಿನ ವಿದ್ಯಾರ್ಥಿಗಳು ಅತಂತ್ರರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

1840ರಲ್ಲಿ ಪ್ರಾರಂಭಗೊಂಡ ಯುಬಿಎಂಸಿ ಶಾಲೆಯು ಪ್ರಸ್ತುತ 1ರಿಂದ 7ರವರೆಗೆ ಕಳೆದ ಶೈಕ್ಷಣಿಕ ವರ್ಷದಲ್ಲಿ 50 ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆ ನಡೆಸುತ್ತಿದ್ದರು. ಈಗ ಹೊಸದಾಗಿ ದಾಖಲಾತಿ ಸ್ವೀಕರಿಸದೇ, ಈ ಹಿಂದಿನ ತರಗತಿಯಲ್ಲಿ ಕಲಿಯುತ್ತಿದ್ದ ಇಲ್ಲಿನ ವಿದ್ಯಾರ್ಥಿಗಳಿಗೆ ಪ್ರಾರಂಭೊತ್ಸವದಂದು ಪೋಷಕರೊಂದಿಗೆ ಬಂದವರಿಗೆ ಶಾಲೆಗೆ ಬೀಗ ಹಾಕಿ ಸ್ವಾಗತಿಸಿರುವುದನ್ನು ಕಂಡು ಆಶ್ಚರ್ಯವಾಗಿದೆ.

ಕಾರಣ
ಸರಕಾರದಿಂದ ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಐರಿನ್‌ ಕ್ರಿಸ್ತಬೆಲ್ ಅವರು ಕಳೆದ ನವೆಂಬರ್‌ನಲ್ಲಿ ನಿವೃತ್ತರಾಗಿದ್ದರು. ಅವರ ನಿವೃತ್ತಿಯ ಅನಂತರ ಶಾಲೆ ಮುಚ್ಚಬಾರದು ಎಂಬ ಪೋಷಕರ ಒತ್ತಡದಿಂದ ನಾಲ್ಕು ಮಂದಿ ಗೌರವ ಶಿಕ್ಷಕಿಯರ ಎಪ್ರಿಲ್ವರೆಗೆ ಧರ್ಮಾರ್ಥವಾಗಿ ಸೇವೆಯನ್ನು ನೀಡಿದ್ದರು. ಈ ನಡುವೆ ನಿವೃತ್ತಿಯ ಮೊದಲೇ ಒಂದು ವರ್ಷದಿಂದ ಶಾಲೆಗೊಂದು ಶಿಕ್ಷಕರನ್ನು ನೀಡಿ ಎಂದು ಆಡಳಿತ ಮಂಡಳಿ ಸಹಿತ ಮಕ್ಕಳು, ಪೋಷಕರು ಇಲಾಖೆಗೆ ಸಾಕಷ್ಟು ಮನವಿ ಮಾಡಿಕೊಂಡಿದ್ದರೂ ಸಹ ಯಾವುದೇ ಸ್ಪಂದನೆ ಸಿಗಲಿಲ್ಲ.

ಹೀಗಾಗಿ ಆಡಳಿತ ಮಂಡಳಿಯಿಂದ ಬಂದ ಸೂಚನೆಯಂತೆ ಶಾಲೆಯನ್ನು ಬಂದ್‌ ಮಾಡಿ ಮಕ್ಕಳಿಗೆ ಟಿಸಿಯನ್ನು ಕೊಡುವ ನಿರ್ಧಾರವನ್ನು ಕೈಗೊಂಡಿರು ವುದರಿಂದ ಈಗ ಶಾಲೆಗೆ ಬೀಗ ಜಡಿಯಲಾಗಿದೆ.

ಬಡವರ್ಗದ ಶಾಲೆ ಎಂದೇ ಪ್ರಸಿದ್ಧಿ ಯಲ್ಲಿರುವ ಯುಬಿಎಂಸಿ ಶಾಲೆಯಲ್ಲಿ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆ ನಡೆಸಿದ್ದು, ದೇಶ ವಿದೇಶದಲ್ಲಿ ನೆಲೆಸಿದ್ದಾರೆ. ಒಂದು ಕಾಲದಲ್ಲಿ 20 ಮಂದಿ ಶಿಕ್ಷಕರಿದ್ದರು. ಈ ಶಾಲೆಗೆ ರೋಟರಿ ಸಂಸ್ಥೆಯು 2 ಲಕ್ಷ ರೂ. ವೆಚ್ಚದಲ್ಲಿ ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದೆ. ಈ ಶಾಲೆಯಲ್ಲಿ ಅನೇಕ ಸ್ಥಳೀಯ ಸಂಘ ಸಂಸ್ಥೆಗಳು ತಮ್ಮ ಸೇವಾ ಚಟುವಟಿಕೆಯನ್ನು ನಡೆಸಿದೆ. ಚುನಾವಣೆ ವೇಳೆ ಮತದಾನದ ಕೇಂದ್ರವಾಗಿಯೂ ಗುರುತಿಸಲ್ಪಟ್ಟಿದೆ. ಆಡಳಿತ ಮಂಡಳಿಯು ಸಹ ಹತ್ತಿರದಲ್ಲಿಯೇ ಆಂಗ್ಲ ಮಾದ್ಯಮ ಶಾಲೆಯನ್ನು ತೆರೆದಿದೆ. ಸುತ್ತಮುತ್ತಲಲ್ಲಿ ಕನ್ನಡ ಮಾಧ್ಯಮದ ಏಕೈಕ ಸರಕಾರಿ ಶಾಲೆ ಇದಾಗಿದೆ. ಬಡವರ್ಗದ ಮಕ್ಕಳಿಗೆ ಈ ಶಾಲೆಯೇ ಮುಖ್ಯವಾಗಿರುವುದರಿಂದ ವಿದ್ಯಾರ್ಥಿಗಳ ಹೆತ್ತವರು ನಮಗೆ ಟಿಸಿ ಬೇಡ ಶಾಲೆಯನ್ನು ಪುನರಾರಂಭಿಸಿ ಎಂದು ಒತ್ತಾಯಿಸುತ್ತಿದ್ದಾರೆ.

Advertisement

ಶಿಕ್ಷಕರ ನಿಯೋಜನೆಗೆ ಮನವಿ
ಶಾಲೆಯನ್ನು ಮುಚ್ಚಬಾರದು ಎಂದು ಡಿಡಿಪಿಐಗೆ ಜನವರಿಯಲ್ಲಿಯೇ ಮಾಹಿತಿ ನೀಡಿದ್ದು, ಆಗ ಅವರು ಮುಕ್ಕದ ಶಾಲೆಯೊಂದರ ಶಿಕ್ಷಕರನ್ನು ನೇಮಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇನ್ನೂ ನೇಮಕ ಮಾಡಿಲ್ಲ. ಈಗ ಏಕಾಏಕಿ ಸರಕಾರಿ ಶಿಕ್ಷಕರಿಲ್ಲ ಎಂದು ಶಾಲೆಯನ್ನು ಮುಚ್ಚಬಾರದು. ಮುಕ್ಕ ಶಾಲೆಯನ್ನು ಮುಚ್ಚಿರುವುದರಿಂದ ಅಲ್ಲಿನ ಶಿಕ್ಷಕರನ್ನು ಇಲ್ಲಿಗೆ ಕರೆಸಲಾಗುವುದು. ಪೋಷಕರು ಹಾಗೂ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲೂ ಧೃತಿಗೆಡಬಾರದು.
-ವಿನೋದ್‌ ಬೊಳ್ಳೂರು
(ಶಾಲಾ ಹಳೆ ವಿದ್ಯಾರ್ಥಿ), ಸದಸ್ಯರು, ದ.ಕ. ಜಿಲ್ಲಾ ಪಂಚಾಯತ್‌

ಉದಯವಾಣಿ ಸುದಿನ ಎಚ್ಚರಿಸಿತು
ಶಾಲೆಯ ಮುಚ್ಚುವ ಸ್ಥಿತಿಯ ಬಗ್ಗೆ ಮಕ್ಕಳ ಗ್ರಾಮ ಸಭೆಯಲ್ಲಿ ಉಲ್ಲೇಖೀಸಿದ್ದು, ಈ ಬಗ್ಗೆ ಹಾಗೂ ವಿಶೇಷ ವರದಿಯ ಮೂಲಕ ಶಾಲೆಯ ಸ್ಥಿತಿಗತಿಯ ಕುರಿತು ಉದಯವಾಣಿಯ ಸುದಿನಲ್ಲಿ ಪ್ರಕಟಿಸಿ ಎಚ್ಚರಿಸಲಾಗಿತ್ತು.

ಆಡಳಿತ ಮಂಡಳಿಯ ನಿರ್ದೇಶನ
ಶಾಲೆ ಮುಚ್ಚುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಶಾಲಾ ವಿದ್ಯಾರ್ಥಿಗಳು ಬಂದರೆ ಅವರಿಗೆ ವರ್ಗಾವಣೆ ಪತ್ರವನ್ನು ನೀಡಲು ಆಡಳಿತ ಮಂಡಳಿ ಸೂಚಿಸಿದೆ.
– ಐರಿನ್‌ ಕರ್ಕಡ, ಆಡಳಿತ ಮಂಡಳಿ ನಿಯೋಜಿಸಿದ ಮಖ್ಯಸ್ಥೆ.

ಸ್ಪಂದನೆ ಸಿಕ್ಕಿಲ್ಲ
ಒಂದು ವರ್ಷದಿಂದ ಹೋರಾಟ ನಡೆಸುತ್ತಿ ದ್ದರೂ ಇಲಾಖೆ ಗಮನ ಹರಿಸಿಲ್ಲ. ಗ್ರಾಮ ಸಭೆ, ಮಕ್ಕಳ ಹಕ್ಕಿನ ಆಯೋಗಕ್ಕೂ ದೂರು ನೀಡಿದ್ದರೂ ಸ್ಪಂದಿಸಿಲ್ಲ. 50 ಮಕ್ಕಳಿರುವ ಈ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ.
– ನಂದಾ ಪಾಯಸ್‌ ಹಳೆಯಂಗಡಿ, ಸಾಮಾಜಿಕ ಹೋರಾಟಗಾರ್ತಿ
-ನರೇಂದ್ರ ಕೆರೆಕಾಡು
Advertisement

Udayavani is now on Telegram. Click here to join our channel and stay updated with the latest news.

Next