ಹೊನ್ನಾಳಿ: ಪಿಕಾರ್ಡ್ ಬ್ಯಾಂಕ್‌ನ ಮಾಸಿಕ ಸಾಮಾನ್ಯ ಸಭೆಗೆ ಅಡ್ಡಿಪಡಿಸಿದ ರೈತರು, ಬ್ಯಾಂಕಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷ ಎಚ್. ಕಡದಕಟ್ಟೆ ಎಂ.ಎಸ್. ಜಗದೀಶ್,
ರಾಜ್ಯ ಸರ್ಕಾರ ಪಿಕಾರ್ಡ್ ಬ್ಯಾಂಕ್‌ಗಳ ಸುಸ್ತಿದಾರರಿಗೆ ಮಾತ್ರ ಬಡ್ಡಿ ಮನ್ನಾ ಮಾಡುವ ಆದೇಶ ಹೊರಡಿಸಿದ್ದು, ಇದು ರೈತರಲ್ಲೇ ಭೇದ ಎಣಿಸುವ ಕಾರ್ಯವಾಗಿದೆ. ಪ್ರತಿ ವರ್ಷವೂ ಸಕಾಲಕ್ಕೆ ಬಡ್ಡಿ ಪಾವತಿಸಿರುವ ರೈತರಿಗೆ ಸರ್ಕಾರದ ಈ ಆದೇಶದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆರೋಪಿಸಿದರು.
ಹೆಚ್ಚಿನ ಬಡ್ಡಿದರದಿಂದ ಪಾರಾಗಲು ಎಲ್ಲಿಯೋ ಸಾಲ ಮಾಡಿ ಹಣ ತಂದು ಬಡ್ಡಿ ಪಾವತಿಸಿರುವ ರೈತರಿಗೆ ಈ ಆದೇಶದಿಂದ ತೀವ್ರ ತೊಂದರೆಯಾಗಿದೆ. ಆದ್ದರಿಂದ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಎಂಬಂಥ ನೀತಿ ಅನುಸರಿಸದೇ ಎಲ್ಲ ರೈತರಿಗೂ ಏಕ ಪ್ರಕಾರವಾದ ಬಡ್ಡಿ ಮನ್ನಾ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ತನ್ನ ಬಡ್ಡಿ ಮನ್ನಾ ಆದೇಶವನ್ನು ಮರು ಪರಿಶೀಲಿಸಬೇಕು. ಈಗಾಗಲೇ ಬಡ್ಡಿ ಪಾವತಿಸಿರುವ ರೈತರಿಗೆ ಹಣ ವಾಪಸ್ ನೀಡಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಪಿಕಾರ್ಡ್ ಬ್ಯಾಂಕ್‌ಗಳ ನಿರ್ದೇಶಕರು ರೈತರಿಗೆ ಸಕಾಲದಲ್ಲಿ ಬಡ್ಡಿ ಪಾವತಿಸಿ ಸರ್ಕಾರದ ಶೂನ್ಯ ಬಡ್ಡಿ ಸಾಲದ ಯೋಜನೆ ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿ ಮನವೊಲಿಸಿ ಬಡ್ಡಿ ಪಾವತಿಸುವಂತೆ ತಿಳಿಸುತ್ತಾರೆ.
ಸರ್ಕಾರದ ಈ ಆದೇಶದಿಂದ ಇನ್ನು ಮುಂದೆ ರೈತರ ಬಳಿ ನಿರ್ದೇಶಕರು ತೆರಳದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯಾದ್ಯಂತ 174 ಪಿಕಾರ್ಡ್ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕಿನವರ ಬೆದರಿಕೆಯಿಂದಾಗಿ ಬಡ್ಡಿ ಹಣ ಪಾವತಿಸಿದ್ದಾರೆ. ಶೇ.40 ರಷ್ಟು ರೈತರು ಅಸಲು-ಬಡ್ಡಿಯನ್ನು ಪಾವತಿಸಿದ್ದು, ಸರಕಾರದ ಈ ಆದೇಶದಿಂದ ರೈತರಿಗೆ ತೀವ್ರ ನಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬರಗಾಲದ ಹಿನ್ನೆಲೆಯಲ್ಲಿ ಬಡ್ಡಿ ಪಾವತಿಸಲು ಸರಕಾರ ಮಾರ್ಚ್ 31ರವರೆಗೆ ಗಡುವು ನೀಡಿತ್ತು. ಇದೀಗ ಸರ್ಕಾರ ಜೂನ್ 30ರವರೆಗೆ ಈ ಅವಧಿಯನ್ನು ವಿಸ್ತರಿಸಿದ್ದು, ಸುಸ್ತಿದಾರ ರೈತರಿಗೆ ಮಾತ್ರ ಬಡ್ಡಿ ಮನ್ನಾ ಸೌಲಭ್ಯ ನೀಡುವುದಾಗಿ ಆದೇಶ ಹೊರಡಿಸಿದೆ.
ಸರಕಾರ ತಕ್ಷಣ ಈ ಆದೇಶವನ್ನು ಮರು ಪರಿಶೀಲಿಸಿಬೇಕು. ಎಲ್ಲ ರೈತರಿಗೂ ಬಡ್ಡಿ ಮನ್ನಾದ ಪ್ರಯೋಜನ ನೀಡಬೇಕು ಎಂದು ಅವರು ಆಗ್ರಹಿಸಿದರು. ರೈತ ಮುಖಂಡರಾದ ಎಂ. ಬಸವರಾಜಪ್ಪ, ರಮೇಶ್, ರೈತ ಸಂಘ ಮತ್ತು ಹಸಿರು ಸೇನೆಯ ಸದಸ್ಯರು ಉಪಸ್ಥಿತರಿದ್ದರು.