Advertisement

ಅಂಗನವಾಡಿ ಕೇಂದ್ರಕ್ಕೆ ಬೀಗ: ಹೊರಗುಳಿದ ಮಕ್ಕಳು

01:04 PM Sep 01, 2018 | Team Udayavani |

ಉಪ್ಪಿನಂಗಡಿ : ಅಂಗನವಾಡಿ ಕಾರ್ಯಕರ್ತೆ ದಿಢೀರ್‌ ಕೇಂದ್ರಕ್ಕೆ ಬೀಗ ಜಡಿದು ಹಿಂದಿರುಗಿದ್ದು, ಮಕ್ಕಳು ಹೊರಗೆ ಉಳಿಯುವಂತಾದ ಘಟನೆ ತಣ್ಣೀರುಪಂತ ಗ್ರಾಮದಲ್ಲಿ ನಡೆದಿದೆ. ಅಳಕೆ ಬಳಿಯ ಮಡಂತ್ಯಾರು ರಸ್ತೆಗೆ ತಾಗಿಕೊಂಡಿರುವ ಅಂಗನವಾಡಿ ಕೇಂದ್ರ ಇದಾಗಿದೆ. ಕಳೆದ ಏಳು ದಿನಗಳಿಂದ ಅಂಗನವಾಡಿ ಮುಚ್ಚಿದೆ. ಸುಮಾರು 30ಕ್ಕೂ ಮಿಕ್ಕಿ ಮಕ್ಕಳು ಅಂಗನವಾಡಿಯಿಂದ ಹೊರಗುಳಿದಿದ್ದಾರೆ. ದಿನನಿತ್ಯ ಮಕ್ಕಳನ್ನು ಕರೆದುಕೊಂಡು ಬರುವ ಹೆತ್ತವರು ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿರುವುದನ್ನು ಕಂಡು ಮರಳುತ್ತಿದ್ದಾರೆ. ಕಾರ್ಯಕರ್ತೆ ತನ್ನ ವೈಯಕ್ತಿಕ ಕಾರಣಗಳಿಂದ ಮೇಲಧಿಕಾರಿಗಳಿಗೆ ತಿಳಿಸದೇ ಅಂಗನವಾಡಿಗೆ ಬೀಗ ಹಾಕುತ್ತಿದ್ದಾರೆ ಎನ್ನಲಾಗಿದೆ.

Advertisement

ಅಂಗನವಾಡಿಯು ಪಂಚಾಯತ್‌ಗೆ ಸೇರಿದ ಸಭಾಭವನದಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿತ್ತು. ಕೇಂದ್ರಕ್ಕೆ ಬರುವ ಮಕ್ಕಳ ಸಂಖ್ಯೆ ಏರಿಕೆಯಾದ ಕಾರಣ ಗ್ರಾ.ಪಂ. ಅಧ್ಯಕ್ಷರ ಸಹಿತ ಸದಸ್ಯರು ಮಾಜಿ ಶಾಸಕರಿಗೆ ಒತ್ತಡ ಹೇರಿ ಅನುದಾನ ಮಂಜೂರುಗೊಳ್ಳುವಂತೆ ಮಾಡಿದ್ದರು. ಇದರಿಂದಾಗಿ ವರ್ಷದ ಹಿಂದೆಯಷ್ಟೇ ಸುಸಜ್ಜಿತ ಅಂಗನವಾಡಿ ಕಟ್ಟಡ ತಣ್ಣೀರು ಪಂತದಲ್ಲಿ ನಿರ್ಮಾಣವಾಗಿತ್ತು. ಮರಳಿದ ವೈದ್ಯಾಧಿಕಾರಿಗಳು ಕಳೆದೆರಡು ದಿನಗಳ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಸಹಿತ ಸಿಬಂದಿಯು ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಲು ಬಂದಾಗ ಅಂಗನವಾಡಿಗೆ ಬೀಗ ಜಡಿದಿರುವುದನ್ನು ಕಂಡು ಮರಳಿ ಹೋಗಿದ್ದಾರೆ. 

ಇದರಿಂದಾಗಿ ವೈದ್ಯಕೀಯ ತಪಾಸಣೆಯಿಂದಲೂ ಮಕ್ಕಳು ವಂಚಿತರಾಗಿದ್ದಾರೆ. ಆರೋಗ್ಯ ಇಲಾಖೆಯವರು ಬರುವುದನ್ನು ತಿಳಿದ ಸ್ಥಳೀಯ ಜನಪ್ರತಿನಿಧಿಗಳು ಅಂಗನವಾಡಿಗೆ ಹೆತ್ತವರು ಬರುವಂತೆ ತಿಳಿಸಿದ್ದರು. ಆದರೆ ಇಲ್ಲಿ ನೋಡಿದಾಗ ಅಂಗನವಾಡಿ ಕಾರ್ಯಕರ್ತೆಯೇ ಇಲ್ಲ. ಹಾಗಾಗಿ ಆರೋಗ್ಯ ಇಲಾಖೆಯವರೂ ಮರಳಿದ್ದಾರೆ.

ಮೇಲಧಿಕಾರಿಗಳಿಗೆ ವರದಿ
ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಯಕರ್ತೆ ಇಲಾಖೆಗೆ ಯಾವುದೇ ಮಾಹಿತಿ ನೀಡದೆ ಕೇಂದ್ರಕ್ಕೆ ಬೀಗ ಹಾಕಿದ್ದಾರೆ. ಅವರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಕೇಂದ್ರದ ಬಾಗಿಲು ತೆರೆಯಿಸಿ ತಾತ್ಕಾಲಿಕ ಬದಲಿ ಕಾರ್ಯಕರ್ತೆಯನ್ನು ನೇಮಿಸಲು ಅಸಾಧ್ಯವಾಗಿದೆ. ಗೈರು ಹಾಜರಾದ ಬಗ್ಗೆ ಯಾವುದೇ ವಿವರ ದೊರೆತಿಲ್ಲ. ಆದ್ದರಿಂದ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ ಎಂದು ಅಂಗನವಾಡಿ ಮೇಲ್ವಚಾರಕಿ ನಂದನಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next