Advertisement

ಅಕ್ರಮ ಜಲ್ಲಿ ಕಲ್ಲು ಕ್ರಷರ್‌ಗಳಿಗೆ ಬೀಗ

02:57 PM Jul 20, 2018 | Team Udayavani |

ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಸುತ್ತಮುತ್ತಲಿನ ಪ್ರದೇಶದ ಸರ್ಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ಪರವಾನಗಿ ಪಡೆಯದೇ ಅಕ್ರಮವಾಗಿ ಜಲ್ಲಿ ಕಲ್ಲು ಕ್ರಷರ್‌ ಗಣಿಗಾರಿಕೆ ನಡೆಸುತ್ತಿದ್ದ ಕ್ರಷರ್‌ಗಳ ಮೇಲೆ ತಹಶೀಲ್ದಾರ್‌ ಹಾಗೂ ಸಿಪಿಐ ನೇತೃತ್ವದ ತಂಡ ದಾಳಿ ನಡೆಸಿ ಒಟ್ಟು 8 ಕ್ರಷರ್‌ಗಳ ಬಾಗಿಲಿಗೆ ಬೀಗ ಜಡಿದಿದೆ.

Advertisement

ತಾಲೂಕಿನ ಬೇವಿನಹಳ್ಳಿ, ಗೌಳೇರಹಟ್ಟಿ, ಹಿರೇಮೇಗಳಗೆರೆ ಸೇರಿದಂತೆ ವಿವಿಧ ಗ್ರಾಮಗಳ ಸುತ್ತಲೂ ಪರವಾನಗಿ ಪಡೆಯದೇ ಅಕ್ರಮವಾಗಿ ನಡೆಸುತ್ತಿದ್ದ ಜಲ್ಲಿ ಕಲ್ಲು ಕ್ರಷರ್‌ಗಳ ಮೇಲೆ ತಹಶೀಲ್ದಾರ್‌ ಕೆ.ಗುರುಬಸವರಾಜ್‌ ನೇತೃತ್ವದ ಅಧಿಕಾರಿಗಳ ಟಾಸ್ಕ್ಫೋರ್ಸ್‌ ತಂಡ ದಿಢೀರ್‌ ದಾಳಿ ನಡೆಸಿ ಅಕ್ರಮ ಪತ್ತೆ ಹಚ್ಚಿದೆ. ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಲಕ್ಷಾಂತರ ರೂ ಮೌಲ್ಯದ ಜಲ್ಲಿ ಕಲ್ಲು ವಶಪಡಿಸಿಕೊಳ್ಳಲಾಗಿದೆ. 

ವಿವಿಧ ಕ್ರಷರ್‌ಗಳ ಮಾಲೀಕರಾದ ಕರಿಯಪ್ಪ, ಸಿದ್ದೇಶ್‌ ಪಾಟೀಲ್‌, ಕಾಡಜ್ಜಿ ಮಂಜಮ್ಮ, ನಾಗರಾಜ್‌, ಫಕ್ಕೀರಪ್ಪ, ಹೀರ್ಯಾನಾಯ್ಕ, ದ್ಯಾಮಪ್ಪರ ಸಿದ್ಧೇಶ, ಸಿದ್ದಪ್ರಸಾದ್‌ ಎಂಬುವವರು ಸರ್ಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ಪರವಾನಗಿ ಪಡೆಯದೇ ಹಾಗೂ ವಿವಿಧ ಇಲಾಖೆಗಳಿಂದ ದೃಢೀಕರಣ ಪಡೆಯದೇ ಅಕ್ರಮವಾಗಿ ಕ್ರಷರ್‌ ನಡೆಸುತ್ತಿದ್ದದ್ದು ತನಿಖೆ ವೇಳೆ ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಷರ್‌ಗಳಿಗೆ ಬೀಗ ಹಾಕಿದ್ದಾರೆ.

ಗೌಳೇರಹಟ್ಟಿ ಗ್ರಾಮಸ್ಥರು ಸೇರಿದಂತೆ ವಿವಿಧ ಸಂಘಟನೆ ಮುಖಂಡರುಗಳು ಉಚ್ಚಂಗಿದುರ್ಗ ಸುತ್ತಲೂ ನಡೆಯುತ್ತಿರುವ ಅಕ್ರಮ ಕ್ರಷರ್‌ ಹಾಗೂ ಕಲ್ಲು ಕ್ವಾರಿಗಳನ್ನು ಬಂದ್‌ ಮಾಡಿಸುವಂತೆ ತಾಲೂಕು ಹಾಗೂ ಜಿಲ್ಲಾ ಕೇಂದ್ರದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಕಲ್ಲು ಕ್ವಾರಿಗಳಲ್ಲಿ ಸಿಡಿಮದ್ದು ಸಿಡಿಸುವುದರಿಂದ ಭೂಮಿ ನಡುಗುತ್ತಿದೆ. ಮನೆಗಳು ಬಿರುಕು ಬಿಟ್ಟಿವೆ. ಕಲ್ಲು, ಮಣ್ಣಿನ ಧೂಳು ಹೆಚ್ಚಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಪ್ರಮಾಣದ ಸರಕು ಸಾಗಣೆ ವಾಹನಗಳ ದಟ್ಟಣೆಯಿಂದ ರಸ್ತೆಗಳು ಹಾಳಾಗಿದ್ದು, ಅಫಘಾತಗಳು ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ದೂರಿದ್ದರು.

ಉಚ್ಚಂಗಿದುರ್ಗ ಸುತ್ತ ಮುತ್ತಲೂ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುವುದು, ಕಲ್ಲು ತೆಗೆಯಲು ಸಿಡಿಮದ್ದು ಬ್ಲಾಸ್ಟ್‌ ಮಾಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವೃತ್ತ ನಿರೀಕ್ಷಕ ಡಿ.ದುರುಗಪ್ಪ ಎಚ್ಚರಿಕೆ ನೀಡಿದ್ದಾರೆ. 

Advertisement

ಟಾಸ್ಕ್ ಪೋರ್ಸ್‌ ಸಮಿತಿಯ ವಾಯು ಮಾಲಿನ್ಯ ನಿಯಂತ್ರಣಾಧಿಕಾರಿ ಮಂಜುನಾಥ, ಗಣಿ ಮತ್ತು ಖನಿಜಾ ಇಲಾಖಾಧಿಕಾರಿ ಪ್ರದೀಪ್‌, ಅರಸೀಕೆರೆ ಠಾಣೆ ಪಿಎಸ್‌ಐ ಪಿ. ಪ್ರಸಾದ್‌, ಆರ್‌ಐ ಶ್ರೀಧರ್‌, ತೆಲಗಿ ಬೆಸ್ಕಾಂ ಅಧಿಕಾರಿ ವಾಗೀಶಯ್ಯ ಹಾಗೂ ಇತರೆ ಇಲಾಖೆ ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿದ್ದರು.

ದಾಖಲಾತಿ ಒದಗಿಸಲು ವಿಫಲ ಕಳೆದ ಹಲವು ದಿನಗಳಿಂದ ವಿವಿಧ ಸಂಘಟನೆ ಹಾಗೂ ಗ್ರಾಮಸ್ಥರಿಂದ ಅಕ್ರಮ ಜಲ್ಲಿ ಕಲ್ಲು ಗಣಿಗಾರಿಕೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮಾಲೀಕರುಗಳಿಗೆ ದಾಖಲಾತಿಗಳನ್ನು ಒದಗಿಸುವಂತೆ ಸೂಚಿಸಲಾಗಿತ್ತು. ಆದರೆ ಮಾಲೀಕರು ದಾಖಲಾತಿ ಒದಗಿಸಲು ವಿಫಲವಾದ ಕ್ರಷರ್‌ಗಳಿಗೆ ಬೀಗ ಜಡಿಯಲಾಗಿದೆ.  ಕೆ.ಗುರುಬಸವರಾಜ್‌, ತಹಶೀಲ್ದಾರ್‌
 
ಕನಿಷ್ಠ ವೇತನವಿಲ್ಲದೆ ವಂಚನೆ ಕಲ್ಲು ಗಣಿಗಾರಿಕೆಗೆ ಗುತ್ತಿಗೆ ನೀಡುವ ಮೊದಲು ಗಣಿ ಮತ್ತು ಖನಿಜ ಕಾಯ್ದೆ ಅನುಸರಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿ ಅನುಸಾರ ಗಣಿ ಪ್ರದೇಶ ಗುರುತಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ ನಂತರ ಪರವಾನಗಿ ನೀಡಬೇಕು. ಕ್ರಷರ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಟ ಮೂಲಭೂತ ಸೌಲಭ್ಯ ಹಾಗೂ ದುಡಿಮೆಗೆ ತಕ್ಕಂತೆ ವೇತನ ನೀಡದೆ ವಂಚಿಸಲಾಗಿದೆ. ಅಧಿಕಾರಿಗಳು ಕ್ರಷರ್‌ಗಳ ಮೇಲೆ ದಾಳಿ ನಡೆಸಿ ಬೀಗ ಹಾಕಿರುವುದು ಸ್ವಾಗತಾರ್ಹ.  
ಕೆರೆಗುಡಿಹಳ್ಳಿ ಹಾಲೇಶ್‌, ಕಾರ್ಮಿಕ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next