ಇಂಡಿ: ತೊಗರಿ ಖರೀದಿ ಕೇಂದ್ರದಲ್ಲಿ ತೊಗರಿ ಖರೀದಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ರೈತ ಮುಖಂಡರ ನೇತೃತ್ವದಲ್ಲಿ ರೈತರು ಮಂಗಳವಾರ ಟಿಎಪಿಎಂಸಿ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಂಬಲ ನೀಡಿ ರೈತರ ತೊಗರಿ ಖರೀದಿಸಲು ಮುಂದಾಗಿವೆ. ಆದರೆ ಅಧಿಕಾರಿಗಳು ಸರಿಯಾಗಿ ಕಾರ್ಯ ಮಾಡುವುದೇ ಇರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದರು.
ಅಗ ಟಿಎಪಿಎಂಸಿ ವ್ಯವಸ್ಥಾಪಕ ಆರ್.ಜಿ. ಕಾವಿ ಮಧ್ಯ ಪ್ರವೇಶಿಸಿ ಖರೀದಿ ಕೇಂದ್ರದಲ್ಲಿ ಹಮಾಲರು ಪ್ರತಿ ಟನ್ ತೊಗರಿಗೆ 60 ರೂ. ಬೇಡಿಕೆ ಇಟ್ಟಿದ್ದಾರೆ. ಆದರೆ ಕಾಂಟ್ರ್ಯಾಕ್ಟರ್ ಕೇವಲ 15 ರೂ. ನೀಡುತ್ತಿದ್ದಾರೆ. ಹೀಗಾಗಿ ಹಮಾಲರು ತೊಗರಿ ತುಂಬಿಕೊಳ್ಳಲು ಮುಂದಾಗುತ್ತಿಲ್ಲ ಎಂದರು.
ರೈತ ಮುಖಂಡ ಸಿದ್ದಲಿಂಗ ಹಂಜಗಿ ಮಾತನಾಡಿ, ಅಧಿಕಾರಿಗಳು ಕಾಂಟ್ರ್ಯಾಕ್ಟರ್ ಜೊತೆ ಮಾತನಾಡಿ ತೊಗರಿ ಖರೀದಿಸಲು ಮುಂದಾಗಬೇಕು. ಇಲ್ಲವಾದರೆ ರೈತರೆಲ್ಲರೂ ಧರಣಿ ನಡೆಸುತ್ತೇವೆಂದು ಕಾರ್ಯಾಲಯದ ಮುಂದೆ ರೈತರೊಂದಿಗೆ ಕುಳಿತುಕೊಂಡರು.
ವ್ಯವಸ್ಥಾಪಕ ಕಾವಿ ಗುತ್ತಿಗೆದಾರನ ಜೊತೆ ದೂರವಾಣಿ ಮೂಲಕ ಮಾತನಾಡಿದರು. ಗುತ್ತಿಗೆದಾರರಿಗೆ ಇಲ್ಲಿನ ಸಮಸ್ಯೆ ಬಗ್ಗೆ ತಿಳಿಸಿದಾಗ ನಾಳೆಯಿಂದ ಖರೀದಿ ಪ್ರಾರಂಭಿಸಿ ನಾನು ಹಮಾಲರ ಸಮಸ್ಯೆ ಪರಿಹರಿಸುತ್ತೇನೆ ಎಂದು ಹೇಳಿದಾಗ ರೈತರು ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ಭೀಮಾಶಂಕರ ಆಳೂರ, ಬಿ.ಎಸ್. ಹಂಜಗಿ, ಜಕ್ಕಪ್ಪಗೌಡ ಬಿರಾದಾರ, ಅರವಿಂದ ನಾಡಗೌಡ, ಬಾಳಾಸಾಹೇಬ ಪಾಟೀಲ, ಚಾಂದಸಾವ ಸೆ„ಯದ್, ಮಾಂತಪ್ಪ ಲಾಳಸಂಗಿ, ಪ್ರೇಮಸಿಂಗ ಜಾದವ, ಚಂದ್ರಶೇಖರ ಹಂಜಗಿ, ಮಲ್ಲು ರಾಠೊಡ, ಮಾಳು ಮುಚ್ಚಂಡಿ, ಶಿವಾನಂದ ನಾಟೀಕಾರ, ರವಿಕಾಂತ ಹೊಟಗಿ, ಸಿದ್ದು ಹದಗಲ್, ಬಸವರಾಜ ಲಾಳಸಂಗಿ, ಈರಪ್ಪ ಬಿರಾದಾರ, ಅಶೋಕ ರಾಠೊಡ, ಬಾಬು ರಾಠೊಡ, ರಮೇಶ ರಾಠೊಡ, ತುಕಾರಾಮ ರಾಠೊಡ, ರಮೇಶ ಜಾಧವ ಸೇರಿದಂತೆ ಮತ್ತಿತರರು ಇದ್ದರು.