ಗುವಾಹಟಿ: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ವ್ಯವಸ್ಥೆಯಡಿ ದಾಖಲೆಗಳನ್ನು ನೀಡಿರುವ 21 ಲಕ್ಷ ಮಂದಿಗೆ ಅಸ್ಸಾಂನಲ್ಲಿ ಇನ್ನೂ ಆಧಾರ್ ಕಾರ್ಡ್ ಸಿಕ್ಕಿಲ್ಲ!
ಇದರ ಪರಿಣಾಮ ಅವರಿಗೆ ಆಧಾರ್ ಮೂಲಕ ಸಿಗಬೇಕಾಗಿದ್ದ ಪಡಿತರ ಸಿಗದೇ ಒದ್ದಾಡುತ್ತಿದ್ದಾರೆ. ಆದ್ದರಿಂದ ಅಸ್ಸಾಂ ಸರ್ಕಾರ ಈ ವ್ಯಕ್ತಿಗಳಿಗೆ ಆಧಾರ್ ನೀಡಲು ಸಿದ್ಧವಾಗಿದೆ.ಅದಕ್ಕಾಗಿ ಸಂಪುಟಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲು ತೀರ್ಮಾನಿಸಿದೆ.
ಸಮಸ್ಯೆಯೇನು?: ಎನ್‌ಆರ್‌ಸಿ ಪಟ್ಟಿಯಲ್ಲಿ ಈ ವ್ಯಕ್ತಿಗಳ ಹೆಸರಿಗೆ ಅಧಿಕೃತತೆ ಸಿಕ್ಕಿದೆ. ಆದರೆ ಅದಕ್ಕಿನ್ನೂ ಆರ್‌ಜಿಐನಿಂದ (ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ) ಅಧಿಕೃತತೆ ಲಭಿಸಿಲ್ಲ!
ಹೀಗಾಗಿ ಇವರ ಜೈವಿಕ ಮಾಹಿತಿಗಳನ್ನು (ಬಯೋಮೆಟ್ರಿಕ್ಸ್) ತಡೆಹಿಡಿಯಲಾಗಿದೆ. 2019ರಲ್ಲಿ ಎನ್‌ಆರ್‌ಸಿ ಪಟ್ಟಿ ಬಿಡುಗಡೆಗೂ ಮುನ್ನ ಯಾರ್ಯಾರು ಜೈವಿಕ ಮಾಹಿತಿಗಳನ್ನು ನೀಡಿದ್ದರೋ ಅವರೇ ಸದ್ಯ ಸಮಸ್ಯೆಗೆ ಸಿಲುಕಿರುವುದು. ಇಂತಹ ದುಸ್ಥಿತಿಯನ್ನು ವಿರೋಧಿಸಿ ತೃಣಮೂಲ ಕಾಂಗ್ರೆಸ್ ನಾಯಕಿ, ರಾಜ್ಯಸಭಾ ಸದಸ್ಯೆ ಸುಷ್ಮಿತಾ ದೇವ್ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಸಂಬಂಧಪಟ್ಟ ಸಂಸ್ಥೆಗಳಿಗೆ ನ್ಯಾಯಪೀಠ ನೋಟಿಸ್ ನೀಡಿತ್ತು.
ಇದನ್ನೂ ಓದಿ:ನಾಳೆ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಬೊಮ್ಮಾಯಿ ಮನೆ ಘೇರಾವ್
ತತ್ಕಾಲೀನವಾಗಿ ಇದನ್ನು ಬಗೆಹರಿಸಲು ಆಧಾರ್ ಕಾರ್ಡ್ ನೀಡಲು ಅಸ್ಸಾಂ ಸರ್ಕಾರ ಸಿದ್ಧವಾಗಿದೆ. ಇದರರ್ಥ ಅವರೆಲ್ಲ ಭಾರತೀಯ ಪೌರರು ಎಂದು ಪ್ರಮಾಣೀಕರಿಸಲ್ಪಟ್ಟಿದೆ ಎಂದಲ್ಲ… ಹೀಗೆಂದು ಸರ್ಕಾರಿ ಮೂಲಗಳು ತಿಳಿಸಿವೆ.