Advertisement

ಲಾಕ್‌ ಡೌನ್‌ ಲೋಕ: ವಂಶವೃಕ್ಷ ಬರೆದೆ!

01:01 PM Apr 22, 2020 | mahesh |

ದೇಶ- ವಿದೇಶದ ಹಲವು ಭಾಗಗಳಲ್ಲಿದ್ದ ಕುಟುಂಬದ ಸದಸ್ಯರ ವಿವರ ಕಲೆ ಹಾಕುವುದಕ್ಕೇ ಒಂದು ವಾರ ಬೇಕಾಯಿತು…

Advertisement

ಬಹಳ ದಿನಗಳಿಂದ ಮಾಡಬೇಕು ಅಂದುಕೊಂಡಿದ್ದ ಕೆಲಸವೊಂದು ಲಾಕ್‌ ಡೌನ್‌ ಕಾರಣದಿಂದ ಸಮಾಪ್ತಿಯಾಗಿದೆ. ವಿಶ್ವಾದ್ಯಂತ ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ, ನನ್ನ ಕೆಲಸ ಮತ್ತಷ್ಟು ಸುಲಭವಾಯ್ತು ಅನ್ನಿಸುತ್ತಿದೆ. ಅದ್ಯಾವುದಪ್ಪಾ ಆ ಮಹಾನ್‌ ಕೆಲಸ ಅಂತ ಯೋಚಿಸುತ್ತಿದ್ದೀರಾ? ಬೇರೆ ಬೇರೆ ದೇಶಗಳಲ್ಲಿ ಚದುರಿ ಹೋಗಿರುವ ನಮ್ಮ ಕುಟುಂಬದ ಸದಸ್ಯರನ್ನು ಹುಡುಕಿ, ಅವರ ಮಾಹಿತಿ ಸಂಗ್ರಹಿಸಿ ವಂಶ ವೃಕ್ಷ ತಯಾರಿಸುವುದು. ನಮ್ಮದು ದೊಡ್ಡ ಕುಟುಂಬ. ಹತ್ತಿರದ ಸಂಬಂಧಿಗಳೆಲ್ಲ ಆಗಾಗ ಒಂದೆಡೆ ಸೇರುತ್ತೇವಾದರೂ, ದೂರದ ಸಂಬಂಧಿಕರ, ಮನೆತನದ ಹಿರಿಯರ ಪರಿಚಯ ಅಷ್ಟಾಗಿ ಇರಲಿಲ್ಲ. ತಾತನ, ಅಕ್ಕ-ತಂಗಿ, ಅಣ್ಣ-ತಮ್ಮಂದಿರ, ಅವರ ಮಕ್ಕಳು, ಮೊಮ್ಮಕ್ಕಳ ಬಗ್ಗೆ ತಿಳಿದುಕೊಳ್ಳಬೇಕು ಅಂತ ಬಹಳ ತಿಂಗಳುಗಳಿಂದ ಯೋಚಿಸುತ್ತಿದ್ದೆ. ಅದನ್ನು ಕಾರ್ಯರೂಪಕ್ಕೆ ತರಲು ಇದೇ ಒಳ್ಳೆಯ ಸಮಯ ಅನ್ನಿಸಿತು. ಯಾಕಂದ್ರೆ, ಯಜಮಾನರಿಗೆ, ಮಕ್ಕಳಿಗೆ ರಜೆ ಇದ್ದುದರಿಂದ, ಕೆಲವು ಕೆಲಸ ಆಚೀಚೆ ಆದರೂ ತೊಂದರೆ ಇರಲಿಲ್ಲ. ತಕ್ಷಣ, ವಿದೇಶದಲ್ಲಿದ್ದ ತಾತನ ತಂಗಿ ಮನೆಯವರಿಗೆ ಮೇಲ್‌ ಮಾಡಿದೆ. ಅವರೂ ಖುಷಿಯಿಂದ ಒಪ್ಪಿಕೊಂಡರು. ನನ್ನ ಹುಮ್ಮಸ್ಸು ನೋಡಿ,
ಮನೆಯವರೂ ಕೈ ಜೋಡಿಸಿದರು.

ಯಾವೆಲ್ಲ ವಿವರಗಳು ಬೇಕು ಅಂತ ಒಂದು ಚಾರ್ಟ್‌ ತಯಾರಿಸಿ ಸೋದರತ್ತೆಗೆ ಕಳುಹಿಸಿದೆ. ಅವರ ಮನೆಯವರು, ಮಕ್ಕಳು, ಅಳಿಯಂದಿರು, ಸೊಸೆಯಂದಿರು ಮತ್ತು ಅವರೆಲ್ಲರ ಹುಟ್ಟಿದ ದಿನಾಂಕಗಳನ್ನು ಎಕ್ಸೆಲ್‌ ಶೀಟ್‌ನಲ್ಲಿ ಬರೆದು ಕಳಿಸಲು ಮಗ ಸಹಾಯ ಮಾಡಿದ. ಸೋದರತ್ತೆ ಮಗಳು, ಎಲ್ಲ ವಿವರಗಳನ್ನು ಹುಡುಕಿ ನಮಗೆ ಮೇಲ್‌ ಮಾಡಿದಳು. ಅಮೆರಿಕದಲ್ಲಿ ಇರುವ ತಾತನ ತಂಗಿ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ, ಅವರವರ ವಿವರಗಳನ್ನು ಬರೆದು ಕಳಿಸಲು ಕೇಳಿಕೊಂಡೆ.

ಇದೆಲ್ಲಾ ಮುಗಿಯಲು ಒಂದು ವಾರವೇ ಹಿಡಿದಿತ್ತು. ಸಂತೋಷದ ವಿಷಯವೇನೆಂದರೆ, ನಾನು ನೋಡದೇ ಇರುವ ಸಂಬಂಧಿಗಳು ಕೂಡ, ತಮ್ಮ ಹಿರಿಯರ, ಮನೆತನದ ಬಗ್ಗೆ ಕುತೂಹಲ ತಾಳಿದ್ದರು. ವಂಶವೃಕ್ಷ ರೆಡಿ ಆದಾಗ, ದೂರಾಗಿದ್ದ ಹಳೇ ಸಂಬಂಧಗಳು, ಸೇರ್ಪಡೆಯಾದ ಹೊಸ ಸಂಬಂಧಗಳು ಒಂದೆಡೆ ಸೇರಿದ್ದವು. ಕೊರೊನಾ ಎಂಬ ಕಾಣದ ಮಾಯಾವಿ ನಮ್ಮನ್ನೆಲ್ಲ ಹೀಗೆ ಒಂದು ಮಾಡಿತ್ತು.

(ಹೊಸ ವಿಷಯವನ್ನು ಕಲಿತಿರಾ, ಹಳೆಯ ಹವ್ಯಾಸಕ್ಕೆ ಜೀವ ನೀಡಿದಿರಾ? ಲಾಕ್‌ಡೌನ್‌ ದಿನಗಳಲ್ಲಿ ನೀವು ಏನೇನು ಮಾಡಿದಿರಿ ಅಂತ uv.avalu@gmail.com ಗೆ ಬರೆದು ಕಳುಹಿಸಿ)

Advertisement

ಹೀರಾ ರಮಾನಂದ್‌

Advertisement

Udayavani is now on Telegram. Click here to join our channel and stay updated with the latest news.

Next