Advertisement

ಲಾಕ್‌ಡೌನ್‌ ಉಲ್ಲಂಘನೆ: 16,962 ಜನರ ಬಂಧನ

07:51 PM May 02, 2020 | Suhan S |

ಮುಂಬಯಿ, ಮೇ 1: ಕೋವಿಡ್‌ -19 ಹಿನ್ನೆಲೆ ನಿಷೇಧಿತ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವ ಮಹಾರಾಷ್ಟ್ರ ಪೊಲೀಸರು ರಾಜ್ಯಾದ್ಯಂತ ಲಾಕ್‌ಡೌನ್‌ ಉಲ್ಲಂಘಿತರ ವಿರುದ್ಧ 85,500 ಕ್ಕೂ ಹೆಚ್ಚು ಅಪರಾಧಗಳನ್ನು ದಾಖಲಿಸಿದ್ದು, ಈವರೆಗೆ 16,962 ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

Advertisement

ಮಾರ್ಚ್‌ ಅಂತ್ಯದಿಂದ ಕೋವಿಡ್‌ -19 ವಿರುದ್ಧ ಹೋರಾಡುವಾಗ ಮತ್ತು ಲಾಕ್‌ಡೌನ್‌ ಜಾರಿಗೊಳಿಸುವಾಗ ನಿಷೇಧಿತ ಆದೇಶಗಳನ್ನು ಉಲ್ಲಂಘಿಸಿದ 85,586 ಜನರ ವಿರುದ್ಧ ಪೊಲೀಸರು ಅಪರಾಧಗಳನ್ನು ದಾಖಲಿಸಿದ್ದಾರೆ ಎಂದವರು ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 188 ಸಾರ್ವಜನಿಕ ಸೇವಕರಿಂದ ಘೋಷಿಸಲ್ಪಟ್ಟ ಆದೇಶದ ಅಸಹಕಾರಕ್ಕೆ ಸಂಬಂಧಿಸಿದೆ. ಅಲ್ಲದೆ, ಲಾಕ್‌ಡೌನ್‌ ಸಂಬಂಧಿತ ರೂಢಿಗಳನ್ನು ಉಲ್ಲಂಘಿಸಿದ್ದಕ್ಕಾಗಿ 16,962 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಅವಧಿಯಲ್ಲಿ 21 ಅಧಿಕಾರಿಗಳು ಸೇರಿದಂತೆ ಕನಿಷ್ಠ 161 ಪೊಲೀಸ್‌ ಸಿಬಂದಿಗಳು ಕೋವಿಡ್ 19 ವೈರಸ್‌ ಗೆ ಪಾಸಿಟಿವ್‌ ಕಂಡುಬಂದಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಪೋಲೀಸರ ಮೇಲೆ ಹಲ್ಲೆಯ ಕನಿಷ್ಠ 167 ಪ್ರಕರಣಗಳು ದಾಖಲಾಗಿದ್ದು, ಈವರೆಗೆ 580 ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ಲಾಕ್‌ ಡೌನ್‌ ಅವಧಿಯಲ್ಲಿ ಪೊಲೀಸರು ಅಕ್ರಮ ಸಾಗಣೆಯ 1,237 ಅಪರಾಧಗಳನ್ನು ದಾಖಲಿಸಿದ್ದು, 50,000 ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿ ಕೊಂಡಿದ್ದಾರೆ. ಈ ಅವಧಿಯಲ್ಲಿ ವಿವಿಧ ಅಪರಾಧಗಳಿಗೆ ಪೊಲೀಸರು 3.02 ಕೋಟಿ ರೂ. ಗಳನ್ನು ದಂಡವಾಗಿ ಸಂಗ್ರಹಿಸಿದ್ದಾರೆ. ಕ್ವಾರೆಂಟೈನ್‌ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕನಿಷ್ಠ 622 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next