Advertisement

ಲಾಕ್‌ಡೌನ್‌ ಮಧ್ಯೆ ಮಟ್ಟುಗುಳ್ಳ ಭರ್ಜರಿ ಮಾರಾಟ

10:29 PM May 05, 2020 | Sriram |

ಉಡುಪಿ: ಕೋವಿಡ್-19 ಕಾರ್ಮೋಡದ ಲಾಕ್‌ಡೌನ್‌ ನಡುವೆಯೂ ಉಡುಪಿ ಜಿಲ್ಲೆಯ ಮಟ್ಟು ಗುಳ್ಳ ಭರ್ಜರಿ ಮಾರಾಟವಾಗಿದೆ.ಲಾಕ್‌ಡೌನ್‌ ಜಾರಿಗೆ ಬಂದ ಮಾ.25ರಿಂದ ಇಂದಿನ ತನಕದ ಅವಧಿಯ ನಡುವೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ 48.89 ಮೆಟ್ರಿಕ್‌ ಟನ್‌ ಮಟ್ಟುಗುಳ್ಳ ಮಾರಾಟವಾಗಿದೆ. ಹೀಗಾಗಿ ಮಟ್ಟುಗುಳ್ಳ ಬೆಳೆಗಾರರು ನಷ್ಟಕ್ಕೆ ಒಳಗಾಗಿಲ್ಲ.

Advertisement

ಕಾಪು ತಾಲೂಕಿನ ಮಟ್ಟು, ಉಳಿಯಾರಗೋಳಿ ಹಾಗೂ ಕೋಟೆಗ್ರಾಮಗಳಲ್ಲಿ ಮಟ್ಟುಗುಳ್ಳ ಬೆಳೆಯಲಾಗುತ್ತಿದೆ. ಭೌಗೋಳಿಕ ಮಾನ್ಯತೆ ಪಡೆದ ಮಟ್ಟುಗುಳ್ಳಕ್ಕೆ ದೇಶ- ವಿದೇಶಗಳಲ್ಲಿ ಬಹಳಷ್ಟು ಬೇಡಿಕೆಯಿದೆ. ಉಡುಪಿ, ದ.ಕ. ಜಿಲ್ಲೆಗಳ ಮಾರುಕಟ್ಟೆಯಲ್ಲಿಯೂ ಮಟ್ಟುಗುಳ್ಳಕ್ಕೆ ಹೆಚ್ಚಿನ ಬೇಡಿಕೆ ಇದೆ. ಪ್ರಸಕ್ತ ಸಾಲಿನಲ್ಲಿ 128 ಎಕರೆ ಭೂಮಿಯಲ್ಲಿ 89 ಮಂದಿ ಬೆಳೆಗಾರರು ಮಟ್ಟುಗುಳ್ಳ ಬೆಳೆ ಬೆಳೆದಿದ್ದರು.

ಆರಂಭದಲ್ಲಿ ತೊಡಕು ಎದುರಾಗಿತ್ತು
ಲಾಕ್‌ಡೌನ್‌ ಇದ್ದುದರಿಂದ ಮಟ್ಟುಗುಳ್ಳಕ್ಕೆ ಮಾರುಕಟ್ಟೆ ವ್ಯವಸ್ಥೆಗೆ ಆರಂಭದಲ್ಲಿ ತೊಂದರೆಯಾಗಿ ಸಾಗಾಟಕ್ಕೆ ಸಮಸ್ಯೆಯಾಗಿತ್ತು. ಅನಂತರದಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆ ಮತ್ತು ವಾದಿರಾಜ ಮಟ್ಟುಗುಳ್ಳ ಬೆಳೆಗಾರರ ಸಂಘದ ನಡುವೆ ಮಾತುಕತೆ ನಡೆದಿತ್ತು. ಉಡುಪಿ ಮತ್ತು ದ.ಕ. ಜಿಲ್ಲೆ ತೋಟಗಾರಿಕೆ ಇಲಾಖೆಯ ಹಾಪ್‌ಕಾಮ್ಸ್‌ ವತಿಯಿಂದ ಖರೀದಿಸಿ ಸಾರ್ವಜನಿಕರಿಗೆ ಮಾರಾಟ ವ್ಯವಸ್ಥೆಯನ್ನು ಮಾಡಲಾಯಿತು. ಸರಕು ಸರಬರಾಜು ಮಾಡಲು ಇಲಾಖೆಯಿಂದ ಪಾಸ್‌ ಪಡೆದು ಮಾರಾಟದಲ್ಲಿ ತೊಡಗಿಕೊಳ್ಳಲಾಗಿತ್ತು.

ಎಲ್ಲೆಲ್ಲಿ ಮಾರಾಟ?
ದ.ಕ. ಮತ್ತು ಉಡುಪಿ ಜಿಲ್ಲೆಗಳ ಹಾಪ್‌ಕಾಮ್ಸ್‌ ಪ್ರಧಾನ ಕೇಂದ್ರಕ್ಕೆ ಒಳಪಟ್ಟ ಕಡೆಗಳಲ್ಲಿ, ಕಾರ್ಕಳ, ಉಡುಪಿ ಬಸ್‌ಸ್ಟಾಂಡ್‌ ಬಳಿ, ಕುಂಜಿಬೆಟ್ಟು ಹೀಗೆ ಒಟ್ಟು 19 ಸ್ಟಾಲ್‌ ಹಾಗೂ ಕೆಲವು ಖಾಸಗಿ ಮಾರುಕಟ್ಟೆಗಳಲ್ಲಿ ಮಟ್ಟುಗುಳ್ಳವನ್ನು ಮಾರಾಟಕ್ಕೆ ಇರಿಸಲಾಗಿತ್ತು.

ಮಾರುಕಟ್ಟೆ ವ್ಯವಸ್ಥೆ
ಕೋವಿಡ್‌ -19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಉಡುಪಿ ತೋಟಗಾರಿಕೆ ಇಲಾಖೆಯಿಂದ ಕಾಪು ತಾಲೂಕಿನ ಮಟ್ಟುಗುಳ್ಳ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದರ ಪ್ರಯೋಜನವನ್ನು ಬೆಳೆಗಾರರು ಪಡಕೊಂಡಿದ್ದಾರೆ.
-ಭುವನೇಶ್ವರಿ,
ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ, ಉಡುಪಿ

Advertisement

ಹೆಚ್ಚಿನ ಪ್ರಮಾಣದಲ್ಲಿ ಖರೀದಿ
ಪ್ರಸಕ್ತ ಸಾಲಿನಲ್ಲಿ ಇಳುವರಿ ಕಡಿಮೆ. ಈ ಹಿಂದಿನ ವರ್ಷ 80 ಸಾವಿರ ಮೆಟ್ರಿಕ್‌ ಟನ್‌ ಮಟ್ಟುಗುಳ್ಳ ಬೆಳೆಯಲಾಗಿತ್ತು. ಈ ಬಾರಿ ಲಾಕ್‌ಡೌನ್‌ನಿಂದ ಕಾರ್ಯಕ್ರಮ ಕಡಿಮೆಯಿತ್ತು. ಮಾರುಕಟ್ಟೆಗಳಲ್ಲಿ ಜನವಿರಳವಿತ್ತು. ಇಷ್ಟರ ನಡುವೆಯೂ ಮಟ್ಟುಗುಳ್ಳವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದಾರೆ. ಬೆಳೆ ನಷ್ಟ ನಮಗೆ ಆಗಿಲ್ಲ.
-ಲಕ್ಷ್ಮಣ ಮಟ್ಟು,
ಮ್ಯಾನೇಜರ್‌, ಮಟ್ಟುಗುಳ್ಳ ಬೆಳೆಗಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next