Advertisement
ಮಾಸ್ ಟೆಸ್ಟ್: ಕೋವಿಡ್ ವೈರಸ್ ಸೋಂಕಿನ ಜನ್ಮಸ್ಥಾನ ಎಂದೇ ನಂಬಲಾಗಿರುವ ಚೀನದ ವುಹಾನ್ ನಗರದ ಬಳಿಕ ರಾಜಧಾನಿ ಬೀಜಿಂಗ್‌ನಲ್ಲಿ ಚೀನ ಸಮೂಹ ಪರೀಕ್ಷೆ ಪ್ರಕ್ರಿಯೆ ಆರಂಭಿಸಿದೆ. ಬೀಜಿಂಗ್‌ನಲ್ಲಿ 79 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾದ ಕಾರಣ ಸರಕಾರ ಈ ಕ್ರಮ ಕೈಗೊಂಡಿದೆ. ಸೋಂಕನ್ನು ನಿಯಂತ್ರಣಕ್ಕೆ ತಂದ ಬಹುತೇಕ ಎರಡು ತಿಂಗಳ ಬಳಿಕ ಕ್ಸಿನ್‌ಫಾಡಿ ಮಾರುಕಟ್ಟೆ ಯಲ್ಲಿ ವೈರಸ್ ಕಾಣಿಸಿಕೊಂಡಿತ್ತು. ಹೀಗಾಗಿ ಮಾರುಕಟ್ಟೆಗೆ ಭೇಟಿ ನೀಡಿದ್ದ 29,386 ಜನರನ್ನು ನ್ಯೂಕ್ಲಿಕ್ ಆಮ್ಲ ಪರೀಕ್ಷೆಗೆ ಒಳಪಡಿಸಲಾಗಿದೆ. ಮೇ 30ರಿಂದ ಮಾರುಕಟ್ಟೆಗೆ 2 ಲಕ್ಷಕ್ಕೂ ಅಧಿಕ ಗ್ರಾಹಕರು ಭೇಟಿ ನೀಡಿದ್ದು, ಅವರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆ ಎಂದು ಗಾವೋ ಮಾಹಿತಿ ನೀಡಿದ್ದಾರೆ.
ಸತತ 3ನೇ ದಿನವೂ ಭಾರತದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ 11 ಸಾವಿರ ದಾಟಿದೆ. ಭಾನುವಾರ ಬೆಳಗ್ಗೆ 8ರಿಂದ ಸೋಮವಾರ ಬೆಳಗ್ಗೆ 8ರವರೆಗಿನ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 325 ಮಂದಿ ಮೃತಪಟ್ಟು, 11,502 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟಾರೆ ಸಾವಿನ ಸಂಖ್ಯೆ 10 ಸಾವಿರದ ಸಮೀಪಕ್ಕೆ ಬಂದಿದೆ. ಈವರೆಗೆ 1,69,797 ಸೋಂಕಿತರು ಗುಣ ಮುಖರಾಗಿ ಮನೆಗೆ ಮರಳಿದ್ದು, ಗುಣಮುಖ ಪ್ರಮಾಣ ಶೇ.51.07ಕ್ಕೇರಿದಂತಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 6 ದಿನ, 10 ಸಾವಿರ ಪ್ರಕರಣ
ಪ್ರತಿದಿನ ಸರಾಸರಿ 1,600 ಹೊಸ ಪ್ರಕರಣಗಳೊಂದಿಗೆ ದೆಹಲಿಯಲ್ಲಿ ಕೇವಲ 6 ದಿನಗಳ ಅವಧಿಯಲ್ಲಿ 10 ಸಾವಿರ ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದು ರಾಷ್ಟ್ರರಾಜಧಾನಿಯಲ್ಲಿ ಸೋಂಕು ಎಷ್ಟರಮಟ್ಟಿಗೆ ವ್ಯಾಪಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿ. ಆರಂಭದಲ್ಲಿ 10 ಸಾವಿರ ಮಂದಿಗೆ ಸೋಂಕು ತಗುಲಲು 79 ದಿನಗಳು ಬೇಕಾಗಿದ್ದವು. ನಂತರದಲ್ಲಿ 8 ದಿನಗಳ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ 20,000ದಿಂದ 30,000ಕ್ಕೆ ತಲುಪಿತ್ತು. ಆದರೆ, ಈಗ ಜೂ.9ರಂದು 30 ಸಾವಿರ ಇದ್ದ ಸೋಂಕಿತರ ಸಂಖ್ಯೆ ಜೂ.14ರಂದು 40 ಸಾವಿರಕ್ಕೇರಿದೆ. ಅಂದರೆ, ಕೇವಲ 6 ದಿನಗಳಲ್ಲಿ 10 ಸಾವಿರ ಮಂದಿಗೆ ಸೋಂಕು ತಗುಲಿದೆ.