ಬೆಂಗಳೂರು: ಮನೆಯಿಂದ ಹೊರಗೆ ಕಾಲಿಡಲಿಕ್ಕೂ ಮಕ್ಕಳಿಗೆ ಆಗುತ್ತಿಲ್ಲ. ಶಾಲೆಗಳು ರಜೆ ಇದ್ದರೂ, ಸ್ನೇಹಿತರೊಂದಿಗೆ ಬೆರೆಯುವಂತಿಲ್ಲ. ಆದರೂ, ನಗರದಲ್ಲಿನ ಮಕ್ಕಳು ಈಗ ಹಿಂದಿನ ಬೇಸಿಗೆ ರಜೆಗಿಂತ ಹೆಚ್ಚು ಖುಷಿಯಲ್ಲಿದ್ದಾರೆ. ಯಾಕೆಂದರೆ ಪೋಷಕರು ಬಳಿಯಲ್ಲೇ ಇದ್ದಾರೆ.
ಹೌದು, ಈ ಮೊದಲು ಬೆಂಗಳೂರಿನಂತಹ ನಗರಗಳಲ್ಲಿ ಇಡೀ ದಿನದಲ್ಲಿ ಮಕ್ಕಳಿಗಾಗಿ ಒಂದು ನಿಮಿಷ ಕಳೆಯಲಿಕ್ಕೂ ಪೋಷಕರ ಬಳಿ ಪುರುಸೊತ್ತಿರಲಿಲ್ಲ. ಚಿಕ್ಕ ಮಕ್ಕಳನ್ನು ಕಾಯಲು ಆಳನ್ನು ಇಡಲಾಗಿತ್ತು. ಜತೆಗೆ ಡೇ-ಕೇರ್‌ಗಳಿರುತ್ತಿದ್ದವು. ಆದರೆ, ಈಗ ಚಿತ್ರಣ ಬದಲಾಗಿದೆ. ದಿನದ ಪ್ರತಿ ಕ್ಷಣಗಳನ್ನೂಪೋಷಕರು ಮಕ್ಕಳೊಂದಿಗೆ ಕಳೆಯುತ್ತಿದ್ದಾರೆ. ಹೀಗಾಗಿ ಕೋವಿಡ್ 19 ಮಕ್ಕಳು ಥ್ಯಾಂಕ್ಸ್ ಹೇಳುವಂತಾಗಿದೆ.
ಹೊರಗಿನ ತಿಂಡಿ-ತಿನಿಸುಗಿಂತ ಮನೆಯ ಅಡಿಗೆ ರುಚಿ, ಮೊಬೈಲ್ ಗೇಮ್‌ನಿಂದ ಹೊರತಾದ ಧ್ಯಾನ, ಚೆಸ್, ಕೇರಂ, ಸಂಗೀತ ಇತ್ಯಾದಿ ಪಠ್ಯೇತರ ಚಟುವಟಿಕೆಗಳ ಕಲಿಕೆ, ಅಷ್ಟೇ ಅಲ್ಲ ಸೆಲೆಬ್ರಿಟಿಗಳನ್ನು ನೋಡಿ ಕೆಲ ಪೋಷಕರು ತಮ್ಮ ಮಕ್ಕಳಹೇರ್‌ಕಟ್ ಕೂಡ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಪರೋಕ್ಷವಾಗಿ ಸಂಬಂಧಗಳ ಬೆಸುಗೆಗೆ ಕಾರಣವಾಗಿದೆ.
ಮಕ್ಕಳಿಗೆ ಅಡುಗೆ ಕಲಿಕೆ : ಕೆಲವು ಮನೆಗಳಲ್ಲಿ ಸದಾ ತಾಯಂದಿರ ಕೈರುಚಿ ಆಸ್ವಾದಿಸುತ್ತಿದ್ದ ಮಕ್ಕಳು ತಾವೇ ಸೌಟು ಹಿಡಿದು ಅಡಿಗೆ ಮಾಡಿದರು. ಯೂ-ಟ್ಯೂಬ್, ಫೇಸ್ ಬುಕ್‌ನಲ್ಲಿಯ ಸ್ನೇಹಿತರ ಮಾರ್ಗದರ್ಶನದಲ್ಲಿ ತಿಂಡಿ-ಊಟ ತಯಾರಿಸಿ ಮೆಚ್ಚುಗೆ ಗಿಟ್ಟಿಸಿಕೊಂಡರು. ಐಟಿ ಉದ್ಯೋಗಿಗಳಾದ ರಾಮಮೂರ್ತಿ ನಗರದ ಶಾಲೆಟ್ ಕ್ರಾಸ್ಟ, ಐದನೇ ತರಗತಿ ಓದುತ್ತಿರುವ ಮಗ ಜೇಡನ್ ಕ್ರಾಸ್ಟ ತಾನೇ ಲಿಟಲ್ ಚೆಫ್ ಆಗಿ ಪಕೋಡ ತಯಾರಿಸಿ ಅಜ್ಜ, ಅಜ್ಜಿ ಕುಟುಂಬಕ್ಕೆ ನೀಡಿ ಮೆಚ್ಚುಗೆ ಪಡೆದನು. ಇದರಿಂದ ಕುಟುಂಬದ ಸಂತಸ ಹೆಚ್ಚಿದೆ. ಈ ಕುರಿತು ಮಾತನಾಡಿದ ಶಾಲೆಟ್ ಕ್ರಾಸ್ಟ, “ದೇಶದ ಒಳಿತಿಗಾಗಿ ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಹೀಗಾಗಿ ಇಡೀ ಕುಟುಂಬ ನಿರ್ಬಂಧ ಪಾಲಿಸುತ್ತಿದ್ದೇವೆ. ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳನ್ನೂ ಕಲಿಸಿದ್ದೇವೆ ಎಂದರು.
ಅಪ್ಪ ಈಗ ಬಾರ್ಬರ್ : ಲಾಕ್ ಡೌನ್ ಹಿನ್ನೆಲೆಯಲ್ಲಿ ಸಲೂನ್‌ಗಳು ಕೂಡ ಮುಚ್ಚಿವೆ. ಹೀಗಾಗಿ ತಂದೆಯಂದಿರು ಮಕ್ಕಳ ಹೇರ್‌ಕಟ್ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಸೆಲೆಬ್ರಿಟಿಗಳು ಸ್ಫೂರ್ತಿ ಎನ್ನುತ್ತಾರೆ ಕೆಲ ಪೋಷಕರು. ಮಕ್ಕಳ ಕೂದಲು ಬೆಳೆದಿದ್ದವು. ಇನ್ನೂ ಎರಡು ವಾರ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಹಾಗಾಗಿ, ನಾನೇ ಕತ್ತರಿ ಹಿಡಿದು, ಮಗುವಿನ ಹೇರ್ ಕಟ್ ಮಾಡಿದೆ ಎಂದು ರಾಜಾಜಿನಗರದ ಚಾರ್ಟರ್ಡ್ ಅಕೌಂಟಂಟ್ ಮಂಜುನಾಥ್ ನಕ್ಕರು. ಇನ್ನು ಲಾಕ್ ಡೌನ್ ಹಿನ್ನೆಲೆಯಲ್ಲಿ ಮಕ್ಕಳಿಗೆ ಹೊರಗಡೆ ಸಿಗುತ್ತಿದ್ದ ಕುರುಕಲು ತಿಂಡಿಗಳಿಗೂ ಕಡಿವಾಣ ಬಿದ್ದಿದೆ. “ಹೊರಗಡೆ ತಿಂಡಿಗಳನ್ನು ತಿನ್ನವುದು ಮಕ್ಕಳಿಗೆ ಬಿಡಿಸಬೇಕು ಎಂದು ಹಲವು ಬಾರಿ ಯೋಚಿಸುತ್ತಿದ್ದೆ. ಆದರೆ ಆಗಿರಲಿಲ್ಲ. ಲಾಕ್‌ಡೌನ್‌ನಿಂದ ಸಾಧ್ಯವಾಗಿದೆ ಎನ್ನುತ್ತಾರೆ ಗೃಹಿಣಿ ಶೋಭಾ ತಿಳಿಸಿದರು.
ಚಿಣ್ಣರಿಗೆ ಹತ್ತಿರವಾದೆವು! : ಯಲಹಂಕ ನ್ಯೂ ಟೌನ್ ನಿವಾಸಿ ಪ್ರಮೋದ್, ಹಲವು ವರ್ಷಗಳಿಂದ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಇಬ್ಬರು ಮಕ್ಕಳು ಬೇಸಿಗೆ ರಜೆ ಬಂತೆಂದರೆ ಕ್ಯಾಂಪ್‌ಗೆ ಹೋಗುತ್ತಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಮಕ್ಕಳು ಪೇಂಟಿಂಗ್ ಮಾಡುತ್ತಾರೆ. ಪ್ರತಿ ಬಾರಿ ತೋರಿಸುತ್ತಾರೆ. “ಕೆಲಸದ ನಡುವೆ ಮಕ್ಕಳ ಜತೆಗಿನ ಸಣ್ಣ ಸಣ್ಣ ಸಂತೋಷದ ಕ್ಷಣಗಳು ಖುಷಿ ನೀಡುತ್ತಿವೆ. ಈ ಕ್ಷಣಗಳಿಗೆ ಬೆಲೆಕಟ್ಟಲಾಗದು’ ಎಂದು ಭಾವುಕರಾದರು.
-ಮಂಜುನಾಥ್ ಲಘುಮೇನಹಳ್ಳಿ