Advertisement
ಎಲ್ಲ ರಸ್ತೆಗಳಲ್ಲಿ ವಾಹನ ಸಂಚಾರ, ಜನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಸಾರಿಗೆ ಬಸ್ ಹಾಗೂ ರೈಲು ಸಂಚಾರ ಬಂದ್ ಆಗಿದ್ದರಿಂದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳು ಜನರಿಲ್ಲದೇ ಬಿಕೋ ಎಂದವು. ಆಟೋ, ಟ್ಯಾಕ್ಸಿ ಸೇರಿದಂತೆ ಖಾಸಗಿ ವಾಹನಗಳ ಸಂಚಾರವೂ ಸಂಪೂರ್ಣ ಬಂದ್ ಆಗಿತ್ತು.
Related Articles
Advertisement
ಎಲ್ಲೆಡೆ ಬ್ಯಾರಿಕೇಡ್: ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಜನರು ತಮ್ಮ ಊರಿಗೆ ಬೇರೆ ಕಡೆಯಿಂದ ಜನರು ಬರಬಾರದೆಂದು ಬೇಲಿ, ಫಲಕ ಹಾಕಿದ್ದರೆ, ಮತ್ತೆ ಕೆಲವರು ನಗರ ಪ್ರದೇಶದಲ್ಲಿ ತಮ್ಮ ತಮ್ಮ ಓಣಿಗೂ ಫಲಕ, ಬೇಲಿ ಹಾಕಿಕೊಳ್ಳುತ್ತಿದ್ದಾರೆ. ಆ ಓಣಿಯವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಓಣಿಯ ಹುಡುಗರೇ ಒಬ್ಬೊಬ್ಬರಾಗಿ ಹೋಗಿ ತಂದು ಕೊಡುತ್ತಿದ್ದಾರೆ. ನಗರದ ಪ್ರಮುಖ ಜನದಟ್ಟಣೆ ಪ್ರದೇಶದಲ್ಲೆಲ್ಲ ಪೊಲೀಸರು ವಾಹನಗಳು ಸಂಚರಿಸದಂತೆ ಬ್ಯಾರಿಕೇಡ್ ಹಾಕಿದ್ದು, ಎಲ್ಲೆಡೆ ರಸ್ತೆಗಳೆಲ್ಲ ನಿರ್ಜನ ಪ್ರದೇಶಗಳಾಗಿವೆ.
ಅನಗತ್ಯ ಓಡಾಟಕ್ಕೆ ಬ್ರೇಕ್: ಪೊಲೀಸರು ಎಷ್ಟೇ ಹೇಳಿದರೂ, ಎಷ್ಟೇ ಹೊಡೆದರೂ, ಏನೇ ಶಿಕ್ಷೆ ಕೊಟ್ಟರೂ ಒಂದಿಷ್ಟು ಜನರು ವಾಹನಗಳಲ್ಲಿ ಓಡಾಡುವುದನ್ನು ನಿಲ್ಲಿಸಿರಲಿಲ್ಲ. ಶುಕ್ರವಾರದಿಂದ ಪೆಟ್ರೋಲ್ ಬಂಕ್‌ಗಳಲ್ಲಿ ಅವಶ್ಯಕ ಕರ್ತವ್ಯ ನಿರ್ವಹಿಸುವ ಪಾಸ್ ಹೊಂದಿರುವ ವಾಹನಗಳಿಗೆ ಮಾತ್ರ ಪೆಟ್ರೋಲ್ ಕೊಡುತ್ತಿರುವುದರಿಂದ ಹಾಗೂ ಅನಗತ್ಯವಾಗಿ ಸಂಚರಿಸುವ ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿರುವುದರಿಂದ ಅನಗತ್ಯ ವಾಹನ ಸಂಚಾರ ಶನಿವಾರ ತಹಬಂದಿಗೆ ಬಂದಿತು.
ಸ್ವಚ್ಛತೆ ಮುಂದುವರಿಕೆ: ಜಿಲ್ಲೆಯ ವಿವಿಧೆಡೆ ನಗರಸಭೆ, ಪುರಸಭೆ, ಪಪಂ ಹಾಗೂ ಸ್ಥಳೀಯ ಆಡಳಿತ ವತಿಯಿಂದ ಶನಿವಾರವೂ ಸಾಂಕ್ರಾಮಿಕ ರೋಗ ನಿಯಂತ್ರಕ ಔಷಧಿ ಸಿಂಪರಣೆ, ಧೂಮೀಕರಣ, ಸ್ವಚ್ಛತಾ ಕೆಲಸಗಳು ಮುಂದುವರಿದವು. ಹಳ್ಳಿಗಳಲ್ಲಿಯೂ ಗ್ರಾಪಂ ವತಿಯಿಂದ ಗ್ರಾಮದ ಸ್ವತ್ಛತಾ ಕಾರ್ಯಗಳು ನಡೆದವು. ಒಟ್ಟಾರೆ ಲಾಕ್‌ಡೌನ್‌ಗೆ ಜಿಲ್ಲೆಯ ಜನ ಸ್ವಯಂ ಆಗಿ ಸ್ಪಂದಿಸುತ್ತಿದ್ದಾರೆ.