ರಾಯಚೂರು: ಬೇಸಿಗೆಯಲ್ಲಿ ಬಿಡುವಿಲ್ಲದೇ ಉತ್ಪಾದನೆಯಲ್ಲಿ ತೊಡಗುತ್ತಿದ್ದ ರಾಜ್ಯದ ಶಾಖೋತ್ಪನ್ನ ಕೇಂದ್ರಗಳು ಕೋವಿಡ್ -19 ಲಾಕ್ ಡೌನ್ ಪರಿಣಾಮ ಕೂಲ್ ಕೂಲ್ ಆಗಿವೆ. ಬೇಸಿಗೆಯಲ್ಲಿ ಸಹಜವಾಗಿಯೇ ಎಲ್ಲೆಡೆ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿ ಅಭಾವ ಸೃಷ್ಟಿಸುತ್ತದೆ. ಜಲವಿದ್ಯುತ್ ಉತ್ಪಾದನೆ ಕುಗ್ಗುವ ಪರಿಣಾಮ, ಶಾಖೋತ್ಪನ್ನ ಕೇಂದ್ರಗಳ ಮೇಲೆ ಹೊರೆ ಬೀಳುತ್ತದೆ. ಆದರೆ, ಈ ಬಾರಿ ಅಂತಹ ಸನ್ನಿವೇಶ ಕಂಡು ಬರುತ್ತಿಲ್ಲ. ಬೇಸಿಗೆ ಉಚ್ಛ್ರಾಯ ಸ್ಥಿತಿಗೆ ತಲುಪಿದಾಗ ರಾಜ್ಯದ ವಿದ್ಯುತ್ ಬೇಡಿಕೆ 12,500 ಮೆಗಾವ್ಯಾಟ್ ತಲುಪುತ್ತದೆ. ಕೆಲವೊಮ್ಮೆ ಅದಕ್ಕಿಂತ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಬಾರಿ ಮಾತ್ರ ಏಪ್ರಿಲ್ ಅರ್ಧ ತಿಂಗಳು
ಕಳೆದರೂ ಬೇಡಿಕೆ 9,600 ಮೆಗಾವ್ಯಾಟ್ ದಾಟಿಲ್ಲ.
ಕೈಗಾರಿಕೆ ವಲಯದ್ದೇ ಬೇಡಿಕೆ: ವಿದ್ಯುತ್ ಬೇಡಿಕೆ ಹೆಚ್ಚಾಗುವುದೇ ಕೈಗಾರಿಕೆ ವಲಯದಿಂದ. ವಾಣಿಜ್ಯ ಬಳಕೆಗೂ ವಿದ್ಯುತ್ ಹೆಚ್ಚಿಗೆ ಬೇಕು. ವಿದ್ಯುತ್ ಬಳಕೆಯಲ್ಲಿ
ನಗರಗಳದ್ದೇ ಸಿಂಹಪಾಲು. ಈಗ ಆ ನಗರಗಳೇ ಸ್ತಬ್ಧಗೊಂಡಿದ್ದರಿಂದ ವಿದ್ಯುತ್ ಬೇಡಿಕೆ ಸಾಕಷ್ಟು ಕುಸಿದಿದೆ. ತೀರಾ ಅನಿವಾರ್ಯ ಎನ್ನುವ ಕೈಗಾರಿಕೆಗಳು,
ಕಂಪನಿಗಳು, ಕಚೇರಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಬಹುತೇಕ ವಾಣಿಜ್ಯ ಮಳಿಗೆಗಳು ಮುಚ್ಚಿರುವ ಕಾರಣ ಕಮರ್ಷಿಯಲ್ ಉದ್ದೇಶಕ್ಕೂ ವಿದ್ಯುತ್ ಬಳಕೆಯಾಗುತ್ತಿಲ್ಲ. ರೈತರು ಮಾತ್ರ ಪಂಪ್ ಸೆಟ್, ಬೋರ್‌ವೆಲ್‌ಗಳಿಗೆ ವಿದ್ಯುತ್ ಬಳಸುತ್ತಿದ್ದಾರೆ.
ಆರ್‌ಟಿಪಿಎಸ್‌ಗೂ ನಿರಾಳ: ಆರ್‌ಟಿಪಿಎಸ್‌ನ 8 ಘಟಕಗಳಲ್ಲಿ 7 ಸಕ್ರಿಯವಾಗಿವೆ. 1720 ಮೆ.ವ್ಯಾ. ಸಾಮರ್ಥ್ಯ ಕೇಂದ್ರದಲ್ಲಿ ಈಗ ಸರಾಸರಿ 1100 ಮೆ.ವ್ಯಾ. ವಿದ್ಯುತ್ ಉತ್ಪಾದಿಸುತ್ತಿದೆ. ಕಳೆದ ವರ್ಷ ತನ್ನ ನಿಗದಿತ ಗುರಿಯಷ್ಟು ವಿದ್ಯುತ್ ಉತ್ಪಾದಿಸಿತ್ತು. 2ನೇ ಘಟಕ ವಾರ್ಷಿಕ ದುರಸ್ತಿಗೆ ಬಳಸಿಕೊಳ್ಳಲಾಗಿದೆ. ಇನ್ನೂ 1700 ಮೆ.ವ್ಯಾ. ಸಾಮರ್ಥ್ಯದ ಬಿಟಿಪಿಎಸ್ 3 ಘಟಕ ಸ್ಥಗಿತಗೊಂಡಿವೆ. 1600 ಮೆ.ವ್ಯಾ. ಸಾಮರ್ಥ್ಯದ ವೈಟಿಪಿಎಸ್‌ನ 1ನೇ ಘಟಕ 463 ಮೆ.ವ್ಯಾ. ಉತ್ಪಾದಿಸುತ್ತಿದೆ. ಅಲ್ಲದೇ ಈ ಬಾರಿ ತುಂಗಭದ್ರಾ, ಆಲಮಟ್ಟಿ ಜಲಾಶಯಗಳಲ್ಲಿ ನೀರಿನ ಲಭ್ಯತೆಯೂ ಇದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯುತ್‌ಗೆ ಬೇಡಿಕೆ ಕುಗ್ಗಿದೆ. ಪ್ರಯಾಣಿಕರ ರೈಲುಗಳ ಸಂಚಾರ ಕಡಿಮೆ ಇರುವ ಕಾರಣ ನಮಗೆ ನಿತ್ಯ 7-8 ರೇಕ್ ಕಲ್ಲಿದ್ದಲು ಅಗತ್ಯಕ್ಕಿಂತ ಮುಂಚೆಯೇ ಬರುತ್ತಿದೆ. ಬೇಡಿಕೆಯಷ್ಟು ಉತ್ಪಾದನೆಗೆ ನಮ್ಮ ಘಟಕ ಸಿದ್ಧವಿದೆ. ಬಹುಶಃ ಮೇ ತಿಂಗಳಲ್ಲಿ ಮತ್ತೆ ಬೇಡಿಕೆ ಹೆಚ್ಚಬಹುದು.
●ವೇಣುಗೋಪಾಲ್, ಕಾರ್ಯನಿರ್ವಾಹಕ ನಿರ್ದೇಶಕ-ಆರ್‌ಟಿಪಿಎಸ್